ತುಮಕೂರು: ಶಿರಾ ಬಳಿ ಅಪಘಾತ; ಇಬ್ಬರು ಸಾವು, 7 ಮಂದಿಗೆ ಗಾಯ
ತುಮಕೂರು: ಎರಡು ಗೂಡ್ಸ್ ಕ್ಯಾರಿಯರ್ ಮತ್ತು ಬಸ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ, ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು-ಪುಣೆ ಹೆದ್ದಾರಿ NH-40 ನಲ್ಲಿ ನಡೆದಿದೆ.
ಶಿರಾ ಸಮೀಪದ ಚಿಕ್ಕನಹಳ್ಳಿ ಬಳಿ ಶನಿವಾರ ಬೆಳಗಿನ ಜಾವ ಅಪಘಾತ ಸಂಭವಿಸಿದೆ. ಮೃತರನ್ನು ಕಲಬುರಗಿಯ ಅರಳವಾಡಿ ಗ್ರಾಮದ ಭೀಮಾ ಬಾಯಿ (70) ಮತ್ತು ಅವರ ಮಗ ಮಹಾಂತಪ್ಪ (50) ಎಂದು ಗುರುತಿಸಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಗಾಯಾಳುಗಳನ್ನು ಶಿರಾದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸಂತ್ರಸ್ತರು ಪ್ರಯಾಣಿಸುತ್ತಿದ್ದ ಟಾಟಾ ಏಸ್ ಸರಕು ಸಾಗಣೆ ವಾಹನಕ್ಕೆ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನವು ಶಿರಾ ಪಟ್ಟಣಕ್ಕೆ ಹೋಗುತ್ತಿದ್ದ ಮತ್ತೊಂದು ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಇದರಿಂದ ಟಾಟಾ ಏಸ್ ವಾಹನ ಈ ಎರಡು ವಾಹನಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಕಲ್ಲಂಬೆಳ್ಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ