ಜೈಲಿನಲ್ಲಿ ಐಷಾರಾಮಿ ಜೀವನ: ಶಶಿಕಲಾ ನಟರಾಜನ್, ಇಳವರಸಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಬೆಂಗಳೂರು: ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲಾಗಿತ್ತು ಎಂಬ ವಿಚಾರ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಹಾಗೂ ಇಳವರಸಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಹಾಗೂ ಇಳವರಸಿ ಇಬ್ಬರೂ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಜೈಲಿನಲ್ಲಿಯೂ ಐಷಾರಾಮಿ ಸೌಕರ್ಯಗಳನ್ನು ಪಡೆದಿದ್ದರು ಎನ್ನುವ ಆರೋಪವಿದೆ.
ಅಧಿಕಾರಿಗಳಿಗೆ 2 ಕೋಟಿ ಲಂಚ ನೀಡಿ ಬೆಂಗಳೂರು ಜೈಲಿನ ಹೊರಗೆ ಶಾಪಿಂಗ್ ಗೆ ತೆರಳಿದ್ದ ಶಶಿಕಲಾ ಹಾಗೂ ಇಳವರಸಿಯ ವಿಡಿಯೋಗಳು ಭಾರೀ ಆಘಾತವನ್ನುಂಟು ಮಾಡಿತ್ತು. ಈ ಬೆಳವಣಿಗೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಸಂಬಂಧ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಈ ನಡುವಲ್ಲೇ ಲೋಕಾಯುಕ್ತ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು, ಕಾರಾಗೃಹ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. ತಮ್ಮ ಪ್ರಕರಣದ ರದ್ದು ಕೋರಿ ಹೈಕೋರ್ಟ್ಗೆ ಶಶಿಕಲಾ ಅರ್ಜಿ ಸಲ್ಲಿಸಿದ್ದರು, ಆದರೆ, ಆದರೆ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಗೆ ಇಳವರಸಿ. ಶಶಿಕಲಾ ಹಾಜರಾಗಿರಲಿಲ್ಲ. ಈ ವೇಳೆ ಶಶಿಕಲಾ ಕಡೆಯವರು ವೈಟಾ ಮುಂದೆ ಮಾತ್ರ ಹಾಜರಾಗಿದ್ದರು. ಉಳಿದ ಯಾವುದೇ ವಿಚಾರಣೆಗೆ ಶಶಿಕಲಾ ಮತ್ತು ಇಳವರಸಿ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯ ಶಶಿಕಲಾ ಹಾಗೂ ಇಳವರಸಿ ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ವಾರೆಂಟ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಶಶಿಕಲಾ ಮತ್ತು ಇಳವರಸಿಗೆ ಜಾಮೀನಿಗೆ ಸಹಿ ಹಾಕಿದ ವ್ಯಕ್ತಿಗಳಿಗೂ ಲೋಕಾಯುಕ್ತ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಕೋರ್ಟ್ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಶ್ಯೂರಿಟಿಗಳಿಗೂ ಕೂಡ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ