ಚಾರ್ಮಾಡಿ ಘಾಟ್ ಬಳಿ ತಡರಾತ್ರಿ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್: ಪ್ರಯಾಣಿಕರ ಅಸಮಾಧಾನ, ಟ್ವೀಟ್ ಮಾಡಿ ಸಹಾಯಕ್ಕಾಗಿ ಮೊರೆ!

ತನ್ನ ಸಾಮರ್ಥ್ಯಕ್ಕೂ ಮೀರಿ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಧರ್ಮಸ್ಥಳದಿಂದ ಗದಗದ ಮುಂಡರಗಿಗೆ ತೆರಳುತ್ತಿದ್ದ ಬಸ್ಸೊಂದು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟ್ ಬಳಿ ಕೆಟ್ಟು ನಿಂತಿದ್ದು, ಈ ವೇಳೆ ನೆರವಿಗೆ ಬಾರದ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು.
ಸಾಮಾಜಿಕ ಜಾಲತಾಣದಲ್ಲಿ ರಘು ಅವರು ಶೇರ್ ಮಾಡಿರುವ ಪೋಟೋ.
ಸಾಮಾಜಿಕ ಜಾಲತಾಣದಲ್ಲಿ ರಘು ಅವರು ಶೇರ್ ಮಾಡಿರುವ ಪೋಟೋ.

ಬೆಂಗಳೂರು: ತನ್ನ ಸಾಮರ್ಥ್ಯಕ್ಕೂ ಮೀರಿ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಧರ್ಮಸ್ಥಳದಿಂದ ಗದಗದ ಮುಂಡರಗಿಗೆ ತೆರಳುತ್ತಿದ್ದ ಬಸ್ಸೊಂದು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟ್ ಬಳಿ ಕೆಟ್ಟು ನಿಂತಿದ್ದು, ಈ ವೇಳೆ ನೆರವಿಗೆ ಬಾರದ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು.

ಬಸ್ ಕೆಟ್ಟು ನಿಂತ ಬಳಿಕ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಹಾಯವಾಣಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. 2 ಗಂಟೆಗಳ ಕಾಲ ಪ್ರಯತ್ನ ನಡೆಸಿದರೂ ಯಾವುದೇ ಪ್ರತಿಕ್ರಿಯೆಗಳು ಸಿಕ್ಕಿಲ್ಲ.

ಕೊನೆಗೆ ರಘು ಎಂಬ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, ಸಹಾಯಕ್ಕೆ ಮೊರೆಯಿಟ್ಟು, ಕೆಎಸ್​ಆರ್​ಟಿಸಿ ಸಾರಿಗೆ ಸಂಸ್ಥೆಗೆ ಟ್ಯಾಗ್ ಮಾಡಿದ್ದಾರೆ. ಈ ವೇಳೆ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಬಸ್​ನಲ್ಲಿ ಹತ್ತಿಸಿಕೊಳ್ಳುವ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ.

ತಕ್ಷಣದ ಗಮನಕ್ಕೆ, ಚಾರ್ಮಾಡಿ ಘಾಟ್ ಬಳಿ ಬಸ್ ಕೆಟ್ಟುಹೋದ ಕಾರಣ 70ಕ್ಕೂ ಹೆಚ್ಚು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ಧರ್ಮಸ್ಥಳದಿಂದ ಹೊರಟ ಬಸ್ ಚಾರ್ಮಾಡಿ ಘಾಟ್ ಬಳಿ ಕೆಟ್ಟು ನಿಂತಿತು. ಈಗ, ಈ ಸಮಯದಲ್ಲಿ ಈ ಮಾರ್ಗದಲ್ಲಿ ಬೇರೆ ಯಾವುದೇ ಬಸ್ಸುಗಳಿಲ್ಲ. ದಯವಿಟ್ಟು ಸಹಾಯ ಮಾಡಿ, ಮಳೆ ಬಂದರೆ ಏನು ಗತಿ? ಎಂದು ಬಸ್ ಕೆಟ್ಟು ಹೋದ ಪರಿಣಾಮ ರಸ್ತೆ ಬದಿ ಪ್ರಯಾಣಿಕರು ವಿಶ್ರಾಂತಿ ಪಡೆಯುತ್ತಿದ್ದ ಫೋಟೋವನ್ನು ಟ್ವೀಟ್ ಮಾಡಿದ್ದರು.

ರಘು ಅವರ ಟ್ವೀಟ್‌ಗೆ ಕೆಎಸ್‌ಆರ್‌ಟಿಸಿ ಪ್ರತಿಕ್ರಿಯಿಸಿದ್ದು, “ದಯವಿಟ್ಟು ಬಸ್ ಸಂಖ್ಯೆ ಅಥವಾ ಪಿಎನ್‌ಆರ್ ಪ್ರಯಾಣದ ವಿವರಗಳನ್ನು ಒದಗಿಸಿ” ಎಂದು ಕೇಳಿತು. ತಕ್ಷಣವೇ ರಘು ಮಾಹಿತಿ ನೀಡಿದ್ದಾರೆ.

ವಿಚಾರ ತಿಳಿದ ಕೂಡಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಈ ವೇಳೆ ಅಧಿಕಾರಿಗಳು ಪುತ್ತೂರಿನಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರೊಂದಿಗೆ ಮಾತನಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಚಾರ್ಮಾಡಿ ಘಾಟ್​ಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತೆ. ಪ್ರಯಾಣಿಕರನ್ನು ಕರೆದುಕೊಂಡು ಬರಲಾಗುತ್ತೆ ಎಂದು ತಿಳಿಸಿದರು.

ಪುತ್ತೂರು ಡಿಸಿ ಜೈಕರ್ ಶೆಟ್ಟಿ ಅವರಪು ಮಾತನಾಡಿ, ಚಾರ್ಮಾಡಿ ಘಾಟ್​ನಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರು ಹೋಗಬೇಕಿದ್ದ ಜಾಗಕ್ಕೆ ಕಳಿಸಲಾಗಿದೆ. ಚಾಲಕ ಸ್ವತಃ ಧರ್ಮಸ್ಥಳಕ್ಕೆ ಪ್ರಯಾಣಿಸಿ ಪರ್ಯಾಯ ಬಸ್ ಅನ್ನು ತೆಗೆದುಕೊಂಡು ಪ್ರಯಾಣವನ್ನು ಮುಂದುವರೆಸಿದರು ಎಂದು ಮಾಹಿತಿ ನೀಡಿದ್ದಾರೆ.

ತಡರಾತ್ರಿ 12.55 ಕ್ಕೆ ಮತ್ತೆ ಟ್ವೀಟ್ ಮಾಡಿದ್ದ ರಘು ಅವರು, ಅಂತಿಮವಾಗಿ ಸಾರಿಗೆ ಇಲಾಖೆಯಿಂದ ಸಹಾಯ ಸಿಕ್ಕಿದೆ. ಆದರೆ, ಇಲ್ಲಿರುವ ಸಮಸ್ಯೆ ಏನೆಂದರೆ 54 ಆಸನಗಳ ಸಾಮರ್ಥ್ಯವಿರುವ ಬಸ್​ನಲ್ಲಿ 78 ಜನರನ್ನು ಹತ್ತಿಸಿಕೊಂಡಿದ್ದು. ಯಾರಾದರೂ ಈ ಬಗ್ಗೆ ಗಮನಹರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಸಂಪರ್ಕಿಸಿದಾಗ, ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಬಸ್ ಗಳು ಕೆಟ್ಟುನಿಂತಾಗ, ತುರ್ತು ಸಂದರ್ಭದಲ್ಲಿ ತ್ವರಿತ ಪ್ರತಿಕ್ರಿಯೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಪ್ರಯಾಣಿಕರು ಆತಂಕಕ್ಕೆ ಒಳಗಾಗದಂತೆ ಸಹಾಯವಾಣಿ ಸಂಖ್ಯೆಗಳನ್ನು ಬಸ್‌ಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ಬಸ್ ಗಳಲ್ಲಿ ಜನದಟ್ಟಣೆಗೆ ಉಚಿತ ಬಸ್ ಪ್ರಯಾಣ ಯೋಜನೆ ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆಗೆ ಅಧಿಕಾರಿಯೊಬ್ಬರು ಉತ್ತರಿಸಿ, ಬಸ್ ಗಳಲ್ಲಿ ಕಟ್ಟುನಿಟ್ಟಾದ ನಿರ್ವಹಣೆ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಪ್ರತೀನಿತ್ಯ 57,000 ಟ್ರಿಪ್ ಗಳಲ್ಲಿ ಬಸ್ ಗಳು ಸಂಚರಿಸುತ್ತಿವೆ. ಈ ವೇಳೆ ಒಂದು ಅಥವಾ ಎರಡು ಬಸ್ ಗಳಲ್ಲಿ ಸಮಸ್ಯೆಗಳು ಕಂಡು ಬರಬಹುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com