ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಸಚಿವ ಶಿವಾನಂದ ಪಾಟೀಲ್

ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಮಂಗಳವಾರ ಹೇಳಿದ್ದು, ಈ ಹೇಳಿಕೆ ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ.
ಸಚಿವ ಶಿವಾನಂದ ಪಾಟೀಲ್
ಸಚಿವ ಶಿವಾನಂದ ಪಾಟೀಲ್

ಹಾವೇರಿ: ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಮಂಗಳವಾರ ಹೇಳಿದ್ದು, ಈ ಹೇಳಿಕೆ ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ವೀರೇಶ್‌ ಕಮಿಟಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು ರೂ.2 ಲಕ್ಷ ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಮಾಡಿಕೊಂಡ ಎಲ್ಲವನ್ನೂ ಪರಿಹಾರದ ಆಸೆಗಾಗಿ ‘ರೈತ ಆತ್ಮಹತ್ಯೆ’ ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಹೀಗೆ ದಾಖಲಾದ ಪ್ರಕರಣಗಳಲ್ಲಿ ಸತ್ಯಾಂಶ ಕಡಿಮೆ ಇರುವುದು ಗಮನಕ್ಕೆ ಬಂದಿದೆ.

ರಾಜ್ಯದಲ್ಲಿ 2020ರಲ್ಲಿ 500, 2021ರಲ್ಲಿ 595, 2022ರಲ್ಲಿ 651 ಹಾಗೂ 2023ರಲ್ಲಿ 412 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಿಜವಾದ ರೈತ ಆತ್ಮಹತ್ಯೆ ಪ್ರಕರಣಗಳಿಗೆ, ಪರಿಹಾರ ಕೊಡಲು ಸರ್ಕಾರ ಸಿದ್ಧವಿದೆ. ಹಾವೇರಿ ಜಿಲ್ಲೆಯಲ್ಲಿ 2022–23ನೇ ಸಾಲಿನಲ್ಲಿ 122 ಪ್ರಕರಣಗಳು ಹಾಗೂ 2023–24ನೇ ಸಾಲಿನಲ್ಲಿ 33 ಪ್ರಕರಣಗಳು ವರದಿಯಾಗಿವೆ. ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಇವತ್ತು ನಿನ್ನೆಯದಲ್ಲ. ಹಿಂದೆಯೂ ಆಗಿವೆ ಎಂದು ಹೇಳಿದರು.

ಎರಡು ವರ್ಷಗಳಲ್ಲಿ 53 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ‘ರೈತ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡುತ್ತಿದ್ದೇವೆ. ಎಫ್‌ಐಆರ್‌ ಆದ ತಕ್ಷಣ ರೈತ ಆತ್ಮಹತ್ಯೆ ಎಂದು ವರದಿ ಮಾಡುವುದು ತಪ್ಪು. ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಕಾಯದೇ, ವರದಿ ಮಾಡಿದರೆ ರೈತರಲ್ಲಿ ಆತಂಕ ಹೆಚ್ಚಾಗುತ್ತದೆ. ನೀವು ಜನರಿಗೆ ತಪ್ಪು ಮಾಹಿತಿ ನೀಡಬೇಡಿ' ಎಂದು ಮನವಿ ಮಾಡಿದರು.

ಈ ನಡುವೆ ಸಚಿವರ ಹೇಳಿಕೆ ರೈತರ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಕೂಡಲೇ ಶಿವಾನಂದ ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.

ಹಾವೇರಿಯ ರೈತ ಮುಖಂಡರೊಬ್ಬರು ಮಾತನಾಡಿ, ''ಶಿವಾನಂದ ಪಾಟೀಲರು ಸಚಿವರಾಗಿದ್ದು, ರೈತರ ಬಗ್ಗೆ ಹಗುರವಾಗಿ ಮಾತನಾಡಬಾರದು. ರೈತರು ಆತ್ಮಹತ್ಯೆಗೆ ಮುಂದಾಗುವುದನ್ನು ತಡೆಯಲು ಕ್ರಮಕೈಗೊಳ್ಳಬೇಕು. ಚುನಾಯಿತ ಪ್ರತಿನಿಧಿಯಾಗಿ ರೈತರ ಸಮಸ್ಯೆಗಳನ್ನು ನಿವಾರಿಸಲು ಸಚಿವರು ಸಹಾಯ ಮಾಡಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

ರೈತರ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ರಾಜ್ಯ ಸರ್ಕಾರ ಕೂಡಲೇ ಶಿವಾನಂದ ಪಾಟೀಲ್ ಅವರನ್ನು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇವೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com