ಮಳೆಯಿಲ್ಲದೆ ರಾಜ್ಯ ಕಂಗಾಲು: ಬರಪೀಡಿತ ತಾಲೂಕುಗಳ ಸಂಪೂರ್ಣ ಪಟ್ಟಿ ಶೀಘ್ರದಲ್ಲೇ ಪ್ರಕಟ!

ರಾಜ್ಯದ ಇನ್ನೂ ಹಲವು ತಾಲೂಕುಗಳಲ್ಲಿ ಭೂ ಸಮೀಕ್ಷೆ ನಡೆಯುತ್ತಿದ್ದು, ಸಂಪೂರ್ಣ ವರದಿ ಸಲ್ಲಿಕೆಯಾದ ನಂತರ ಮುಂದಿನ ವಾರದೊಳಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ನಂತರ ಬರಪೀಡಿತ ತಾಲೂಕುಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್‌ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಇನ್ನೂ ಹಲವು ತಾಲೂಕುಗಳಲ್ಲಿ ಭೂ ಸಮೀಕ್ಷೆ ನಡೆಯುತ್ತಿದ್ದು, ಸಂಪೂರ್ಣ ವರದಿ ಸಲ್ಲಿಕೆಯಾದ ನಂತರ ಮುಂದಿನ ವಾರದೊಳಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ನಂತರ ಬರಪೀಡಿತ ತಾಲೂಕುಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್‌ ಅವರು ಹೇಳಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಬರ ತಾಲೂಕುಗಳ ಘೋಷಣೆಯ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ತಾಲೂಕು ಘೋಷಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬರ ಘೋಷಣೆಗೆ ವಿಧಿಸಿರುವ ಮಾನದಂಡವನ್ನು ಸಡಿಲಿಸಲು ಪತ್ರ ಬರೆದಿದ್ದಾರೆ. ಸಂಪುಟದಲ್ಲಿ ಬರ ಪರಿಸ್ಥಿತಿ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ‌. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಸಂಬಂಧ ಬೆಳೆ ಸಮೀಕ್ಷೆ ವರದಿ ಬಂದ ಬಳಿಕ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.

2016-17ಕ್ಕಿಂತ ಮೊದಲು ಶೇ 20ರಷ್ಟು ಮಳೆ ಕೊರತೆಯಾದರೆ ಅದನ್ನು ಬರ ಎಂದು ಪರಿಗಣಿಸಲಾಗುತ್ತಿತ್ತು. ಕಾಲಾನಂತರ ಇದನ್ನು ಬದಲಿಸಲಾಯಿತು. ಈಗಿರುವುವುದು ವೈಜ್ಞಾನಿಕವಲ್ಲದ ನಿಯತಾಂಕಗಳಾಗಿದ್ದು, ಇದನ್ನು ಬದಲಿಸುವಂತೆ ಒತ್ತಾಯಿಸುತ್ತಿದ್ದೇವೆ. ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆಯಲ್ಲಿದ್ದೇವೆಂದು ಹೇಳಿದರು.
 
ಶಾಲಾ ಸಮವಸ್ತ್ರ

ಎಂಟರಿಂದ 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್‌ ಸೇರಿ ಎರಡು ಜೊತೆ ಸಮವಸ್ತ್ರಕ್ಕೆ ಒಟ್ಟು 1.34 ಕೋಟಿ ಮೀಟರ್‌ ಬಟ್ಟೆ‌ ಪೂರೈಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಕಾರ್ಯಾದೇಶ ನೀಡಿತ್ತು. ಆದರೆ, ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದ್ದು ಎಂದು 2023ರ ಫೆ. 21ರಂದು ಕೇಂದ್ರ ರೇಷ್ಮೆ ಮಂಡಳಿ ವರದಿ ನೀಡಿತ್ತು. ಒಟ್ಟು144 ಕೋಟಿ ರೂ. ಮೊತ್ತದ ಕಾರ್ಯಾದೇಶ ನೀಡಲಾಗಿತ್ತು. ಈ ಪೈಕಿ 117 ಕೋಟಿ ರೂ.‌ ಪಾವತಿಸಲಾಗಿದೆ. ಈ ಪೈಕಿ ಗುಣಮಟ್ಟ ವಿಚಲನೆ ಮೌಲ್ಯ 54.8 ಕೋಟಿ ರೂ. ಆಗಿದ್ದು, 26 ಕೋಟಿ ರೂ‌.ವನ್ನು ತಡೆ ಹಿಡಿಯಲಾಗಿದೆ ಎಂದು ಎಂದು ಮಾಹಿತಿ ನೀಡಿದರು.

ಕೆಹೆಚ್​ಡಿಸಿ ನೋಂದಾಯಿತ ಕೈ ಮಗ್ಗ ನೇಕಾರರಿಂದ ಖರೀದಿಸಿದ ಸಮವಸ್ತ್ರಕ್ಕೆ ಹಣ ಪಾವತಿ ಮಾಡಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಹಣ 14.48 ಕೋಟಿ ರೂ. ಬಿಡುಗಡೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಪೂರೈಕೆ ಮಾಡಲಾದ ಶೇ.90 ಸಮವಸ್ತ್ರ ಕಳಪೆ ಇತ್ತು. ಕಳಪೆ ಸಮವಸ್ತ್ರ ಪೂರೈಕೆ ಮಾಡಿದವರಿಗೆ ಶೇ.100 ಹಣ ಪಾವತಿಯಾಗಿದೆ. ಈ ಅವ್ಯವಹಾರದ ಬಗ್ಗೆ ಇಲಾಖಾ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರಿಯ ಬಂಡಾರ ಮೂಲಕ ಕಳಪೆ ಬಟ್ಟೆ ಪೂರೈಕೆಯಾಗಿದೆ ಎಂದು ಹೇಳಿದರು.

ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ನಿರ್ಧಾರಗಳು ಇಂತಿವೆ...

  • 5ನೇ ರಾಜ್ಯ ಹಣಕಾಸು ಆಯೋಗ ರಚನೆಗೆ ಅಸ್ತು. ಆಯೋಗ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರನ್ನು ‌ನೇಮಕ‌ ಮಾಡಲು ಸಿಎಂಗೆ ಅಧಿಕಾರ ಕೊಡಲು ನಿರ್ಧಾರ.
  • ವಿವಿಧ ರಸ್ತೆ ಸಾರಿಗೆ ನಿಗಮಗಳಿಂದ ಶಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್‌ಗಳ ವಿತರಣೆಯ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಲು ಅನುಮೋದನೆ
  • ಮಂಡ್ಯ ವೈದ್ಯಕೀಯ ಕಾಲೇಜು ಆವರಣದಲ್ಲಿರುವ ಕ್ಯಾನ್ಸರ್ ಕೇರ್ ಸೆಂಟರ್ ಮೇಲ್ದರ್ಜೆಗೆ 17 ಕೋಟಿ ರೂ. ಮತ್ತು ಕಲಬುರಗಿ ಸೂಪರ್ ಸ್ಪೆಷಲ್ ಆಸ್ಪತ್ರೆಗೆ 162.80 ಕೋಟಿ, ಕೊಪ್ಪಳ ವೈದ್ಯಕೀಯ ಕಾಲೇಜು ಹಾಸ್ಟೆಲ್ ಗೆ 21 ಕೋಟಿ ರೂ ನೀಡಲು ಒಪ್ಪಿಗೆ.
  • ಕರ್ನಾಟಕ ಲೋಕಸೇವಾ ಆಯೋಗದ ಎರಡು ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ
  • ಕೋರಮಂಗಲ ಒಳವರ್ತುಲ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್‌ಗೆ 307.96 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com