ತಮಿಳುನಾಡಿಗೆ ಕಾವೇರಿ ನೀರು: ಕೆಆರ್‌ಎಸ್‌ ಅಣೆಕಟ್ಟು ವೀಕ್ಷಿಸಿದ ಬಿಜೆಪಿ ನಿಯೋಗ, ಸರ್ಕಾರದ ವಿರುದ್ಧ ವಾಗ್ದಾಳಿ

ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರನ್ನು ಹರಿಸುತ್ತಿರುವ ಕುರಿತು ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ಕೆಆರ್‌ಎಸ್‌ ಅಣೆಕಟ್ಟೆಗೆ ಬಿಜೆಪಿ ಮುಖಂಡರ ನಿಯೋಗ ಶುಕ್ರವಾರ ಭೇಟಿ ನೀಡಿ, ಜಲಾಶಯ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಮುಖಂಡರು ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಎದುರು ನಿಂತು ಮಾತನಾಡುತ್ತಿರುವುದು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಮುಖಂಡರು ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದ ಎದುರು ನಿಂತು ಮಾತನಾಡುತ್ತಿರುವುದು.
Updated on

ಮೈಸೂರು: ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರನ್ನು ಹರಿಸುತ್ತಿರುವ ಕುರಿತು ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಈ ನಡುವಲ್ಲೇ ಕೆಆರ್‌ಎಸ್‌ ಅಣೆಕಟ್ಟೆಗೆ ಬಿಜೆಪಿ ಮುಖಂಡರ ನಿಯೋಗ ಶುಕ್ರವಾರ ಭೇಟಿ ನೀಡಿ, ಜಲಾಶಯ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕೆಆರ್​ಎಸ್ ವೀಕ್ಷಣೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳ ನೇತೃತ್ವದ ಬಿಜೆಪಿ ನಿಯೋಗಕ್ಕೆ ಆರಂಭದಲ್ಲೇ ಪೊಲೀಸರು ಅಡ್ಡಿಪಡಿಸಿದರು. ಮುಖ್ಯ ದ್ವಾರದ ಬಳಿಯೇ ಬ್ಯಾರಿಕೇಡ್​ಗಳನ್ನ ಹಾಕಿ ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ತಕರ್ತರ ನಡುವೆ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು.

ಬಳಿಕ ನಿಯೋಗದಲ್ಲಿದ್ದ ಪ್ರಮುಖರಿಗಷ್ಟೇ ಡ್ಯಾಂ ವೀಕ್ಷಣೆಗೆ ಅನುಮತಿ ನೀಡಿದರು. ಬಳಿಕ ಡ್ಯಾಂ ಮುಖ್ಯದ್ವಾರದ ಎಡ ಭಾಗದಲ್ಲಿ ಡ್ಯಾಂ ಪರಿಸ್ಥಿತಿ ವೀಕ್ಷಿಸಿದ ನಿಯೋಗ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಮಿಳುನಾಡು 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಅನುಮತಿ ಪಡೆದು, ಕಾನೂನು ಬಾಹಿರವಾಗಿ ಸುಪ್ರೀಕೋರ್ಟ್ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘಿಸಿ ಅಕ್ರಮವಾಗಿ 4 ಲಕ್ಷ ಹೆಕ್ಟೇರ್ ಬೆಳೆಗೆ ನೀರು ಬಳಕೆ ಮಾಡಿಕೊಳ್ಳುತ್ತಿದೆ. ಈ ಎಲ್ಲದರ ಬಗ್ಗೆ ಸಮರ್ಥವಾಗಿ ವಾದ ಮಂಡಿಸಬೇಕಾದ ರಾಜ್ಯ ಸರ್ಕಾರದ ವೈಪಲ್ಯವೇ ಇಂದಿನ ಸಂಕಷ್ಟಕ್ಕೆ ಕಾರಣ. ಹೀಗಾಗಿ ಬಿಜೆಪಿ ಸೆಪ್ಟೆಂಬರ್ 12ರ ನಂತರ ಕಾವೇರಿ ಯಾತ್ರೆ ಮೂಲಕ ಜನ ಜಾಗೃತಿ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ತಮಿಳುನಾಡಿಗೆ ರಾಜ್ಯ ಸರ್ಕಾರ ಕಾವೇರಿ ನೀರು ಬಿಡುತ್ತಿರುವುದರಿಂದ ಬೆಂಗಳೂರು, ಮೈಸೂರು ಮತ್ತು ಇತರ ಪ್ರದೇಶಗಳಲ್ಲಿ ನೀರಿನ ಕೊರತೆಯ ಭೀತಿ ಹೆಚ್ಚಾಗಿದೆ. ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ರಾಜ್ಯಕ್ಕೆ 18.5 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈ ವರ್ಷ ಮುಂಗಾರು ಮಳೆ ಸಾಮಾನ್ಯವಾಗಿಲ್ಲ ಎಂಬುದು ತಿಳಿದ ಕೂಡಲೇ ರಾಜ್ಯ ಸರಕಾರ ಆಗಸ್ಟ್‌ನಲ್ಲಿ ನೀರಾವರಿ ಸಮಾಲೋಚನಾ ಸಭೆ ನಡೆಸಿ, ಕೆರೆಗಳಲ್ಲಿ ನೀರು ತುಂಬಿಸುವ ಕೆಲಸ ಮಾಡಬೇಕಿತ್ತು. ಆ ನೀರನ್ನು ರೈತರು ಕೃಷಿ ಚಟುವಟಿಕೆಗಳಲ್ಲಿ ಬಳಸಬಹುದಿತ್ತು. ಆದರೆ, ತಮಿಳುನಾಡು ನೀರು ಬಿಡುವಂತೆ ಆಗ್ರಹ ವ್ಯಕ್ತವಾದ ಬಳಿಕ ಆಗಸ್ಟ್‌ನಲ್ಲಿ ಸಭೆ ನಡೆಸಿದ್ದರು ಎಂದು ಕಿಡಿಕಾರಿದರು.

ಬಿಜೆಪಿ ನಿಯೋಗ ಜಲಾಶಯ ಪರಿಶೀಲನೆ ಮುಂದಾಗುತ್ತಿದೆ ಎಂಬ ವಿಚಾರ ತಿಳಿದ ಕೂಡಲೇ ನೀರಾವರಿ ಅಧಿಕಾರಿಗಳು ಶುಕ್ರವಾರ ಕೆಆರ್‌ಎಸ್‌ನಿಂದ ನೀರು ಬಿಡುವುದನ್ನು ನಿಲ್ಲಿಸಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವಲ್ಲಿ ವಿಫಲವಾಗಿದೆ. ಇದರ ಪರಿಣಾಮ ತಮಿಳುನಾಡಿಗೆ 37 ಟಿಎಂಸಿ ಬದಲಿಗೆ 62 ಟಿಎಂಸಿ ನೀರು ಬಿಡಬೇಕಾಯಿತು. ಕಾವೇರಿ ವಿಚಾರದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ರಾಜ್ಯ ಸರ್ಕಾರ ವಿಫಲವಾಗಿರುವ ಕಾರಣ ಹೋರಾಟ ಕೈಗೊಳ್ಳುವಂತಾಗಿದೆ ಎಂದು ತಿಳಿಸಿದರು.

ರಾಜಕೀಯ ಕಾರಣಕ್ಕಾಗಿ ಸರ್ಕಾರ ಕುರುವಾಯಿ ಬೆಳೆಗೆ ತಮಿಳುನಾಡಿಗೆ ನೀರು ನೀಡಿದೆ. ಈ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಸ್ಪಷ್ಟತೆ ಇಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ,  ಬಿಜೆಪಿ ನಿಯೋಗದೊಂದಿಗೆ ಜಲಾಶಯ ವೀಕ್ಷಣೆಗೆ ಮಾಧ್ಯಮಗಳಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಇದು ಅಧಿಕಾರಿಗಳಲ್ಲಿರುವ ಭಯವನ್ನು ತೋರಿಸುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com