ಸಂವಹನ ಕೊರತೆ ತಂದಿಟ್ಟ ಎಡವಟ್ಟು: ಪ್ರೊಜೆಕ್ಟರ್ ಕಳ್ಳತನವಾಗಿದೆ ಎಂದು ಪ್ರಾಂಶುಪಾಲರ ದೂರು, ಮುಂದೇನಾಯ್ತು..?

ಸಂವಹನ ಕೊರತೆ ಎನೆಲ್ಲಾ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದಕ್ಕೆ ನಗರದ ಕಾಲೇಜಿನಲ್ಲಿ ನಡೆದ ಘಟನೆಯೊಂದು ಉದಾಹರಣೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಂವಹನ ಕೊರತೆ ಎನೆಲ್ಲಾ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದಕ್ಕೆ ನಗರದ ಕಾಲೇಜಿನಲ್ಲಿ ನಡೆದ ಘಟನೆಯೊಂದು ಉದಾಹರಣೆಯಾಗಿದೆ.

ನಗರದ ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರು ಇತ್ತೀಚೆಗೆ ತರಗತಿ ಕೊಠಡಿಯೊಂದರಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್ ನಾಪತ್ತೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರಂಭದಲ್ಲಿ ಸಿಬ್ಬಂದಿಗಳೇ ಕಳ್ಳತನ ಮಾಡಿರಬಹುದು ಎಂದು ಶಂಕಿಸಿದ್ದರು. ಆದರೆ. ತನಿಖೆ ವೇಳೆ ಸಿಬ್ಬಂದಿಗಳ ನಡುವೆ ಇರುವ ಸಂವಹನ ಕೊರತೆಯಿಂದಾಗಿ ಎಡವಟ್ಟಾಗಿರುವುದು ಬೆಳಕಿಗೆ ಬಂದಿದೆ.

ಪರೀಕ್ಷೆ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪಿಟಿ ಶ್ರೀನಿವಾಸ ನಾಯಿಕ ಅವರು ಪರೀಕ್ಷಾ ಕೊಠಡಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಕೊಠಡಿ ಸಂಖ್ಯೆ 43ರಲ್ಲಿ ಪ್ರೊಜೆಕ್ಟರ್ ಇಲ್ಲದಿರುವುದು ಗಮನಕ್ಕೆ ಬಂದಿದೆ.

ರೂ.80 ಸಾವಿರ ರೂಪಾಯಿ ಬೆಲೆಯ ಪ್ರೊಜೆಕ್ಟರ್ ಇದಾಗಿದ್ದು, ಸರ್ಕಾರವು ಡಿಜಿಟಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಕಾಲೇಜಿಗೆ ಪ್ರೊಜೆಕ್ಟರ್ ಮತ್ತು ಸ್ಮಾರ್ಟ್ ಬೋರ್ಡ್ ನೀಡಿತ್ತು. ಕೆಲ ತಿಂಗಳು ಬಳಿಕ ಪ್ರೊಜೆಕ್ಟರ್ ಕೆಲಸ ಮಾಡದ ಕಾರಣ ರಿಪೇರಿಗಾಗಿ ಕಾಲೇಜಿನ ಸಿಬ್ಬಂದಿಗಳು ತಂತ್ರಜ್ಞರ ಬಳಿ ನೀಡಿದ್ದಾರೆ. ಆದರೆ, ಮಾಹಿತಿ ತಿಳಿಯ ಪ್ರಾಂಶುಪಾಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪರೀಕ್ಷೆ ಸಮಯ ಹಿನ್ನೆಲೆಯಲ್ಲಿ ತರಗತಿಗಳಿಗೆ ಹೋದಾಗ ಪ್ರೊಜೆಕ್ಟರ್ ಕಾಣಿಸಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೆ. ಪ್ರೊಜೆಕ್ಟರ್ ರಿಪೇರಿಯಾಗಿದ್ದು, ತಂತ್ರಜ್ಞರು ಕಾಲೇಜಿಗೆ ಹಿಂತಿರುಗಿಸಿದ್ದಾರೆಂದು ಪ್ರಾಂಶುಪಾಲರು ಹೇಳಿದ್ದಾರೆ.

ದೂರು ಹಿನ್ನೆಲೆಯಲ್ಲಿ ಕಾಲೇಜಿಗೆ ಭೇಟಿ ನೀಡಿ, ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಸಂವಹನ ಕೊರತೆಯಿಂದಾಗಿ ಎಡವಟ್ಟಾಗಿರುವುದು ಕಂಡು ಬಂದಿತ್ತು ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರು ಹಿನ್ನೆಲೆಯಲ್ಲಿ ಐಪಿಸಿ 380 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಪ್ರಕರಣವನ್ನು ಕ್ಲೋಸ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com