ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಶೌಚಾಲಯಗಳ ಬಂದ್ ಮಾಡಿದ ಅಧಿಕಾರಿಗಳು: ಸಾರ್ವಜನಿಕರಿಂದ ಅಪಾರ್ಟ್'ಮೆಂಟ್ ಗೋಡೆ ಬಳಕೆ!

ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗದ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಎರಡು ಸಾರ್ವಜನಿಕ ಶೌಚಾಲಯಗಳನ್ನು ಅಧಿಕಾರಿಗಳು ಬಂದ್ ಮಾಡಿದ್ದು, ಅಧಿಕಾರಿಗಳ ಈ ನಡೆ ಇದೀಗ ಸಮೀಪದ ಅಪಾರ್ಟ್‌ಮೆಂಟ್ ನಿವಾಸಿಗಳ ಮೇಲೆ ಪರಿಣಾಮ ಬೀರಿದೆ.
ಹಳೆ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ.
ಹಳೆ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ.

ಬೆಂಗಳೂರು: ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗದ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಎರಡು ಸಾರ್ವಜನಿಕ ಶೌಚಾಲಯಗಳನ್ನು ಅಧಿಕಾರಿಗಳು ಬಂದ್ ಮಾಡಿದ್ದು, ಅಧಿಕಾರಿಗಳ ಈ ನಡೆ ಇದೀಗ ಸಮೀಪದ ಅಪಾರ್ಟ್‌ಮೆಂಟ್ ನಿವಾಸಿಗಳ ಮೇಲೆ ಪರಿಣಾಮ ಬೀರಿದೆ.

ಶೌಚಾಲಯಗಳು ಬಂದ್ ಮಾಡಿದ ಹಿನ್ನೆಲೆಯಲ್ಲಿ ಮೂತ್ರ ವಿಸರ್ಜನೆಗಾಗಿ ಸಾರ್ವಜನಿಕರು ಇದೀಗ ಅಪಾರ್ಟ್ ಮೆಂಟ್ ಗೋಡೆಗಳನ್ನು ಬಳಕೆ ಮಾಡುತ್ತಿದ್ದು, ಪರಿಣಾಮ ಸ್ಥಳದಲ್ಲಿ ಬರುತ್ತಿರುವ ದುರ್ವಾಸನೆ, ಮೂತ್ರ ವಿಸರ್ಜನೆಯ ಅಸಹ್ಯಕರ ದೃಶ್ಯಗಳು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಇರಿಸು ಮುರಿಸು ಮೂಡಿಸುತ್ತಿವೆ. ಪರಿಣಾಮ ಕಿಟಕಿಗಳು ಹಾಗೂ ಬಾಲ್ಕನಿಗಳನ್ನು ಸದಾಕಾಲ ಮುಚ್ಚಿಕೊಂಡಿರುವಂತೆ ಮಾಡಿದೆ.

ಹಳೆಯ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಗಡಿಯಲ್ಲಿ ರಾಯಲ್ ಹೆರಿಟೇಜ್ ಎಂಬ ಅಪಾರ್ಟ್‌ಮೆಂಟ್‌ ಇದ್ದು, ಈ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 500 ನಿವಾಸಿಗಳು ವಾಸವಿದ್ದಾರೆ.

ಅಪಾರ್ಟ್ಮೆಂಟ್ ಮಾಲೀಕ ಸಾಜಿ ವರ್ಗೀಸ್ ಅವರು ಮಾತನಾಡಿ, ಬೆನ್ನಿಗಾನಹಳ್ಳಿ ನಿಲ್ದಾಣದ ಎರಡೂ ಬದಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಸಾವಿರಾರು ಜನರು ಬಳಕೆ ಮಾಡುತ್ತಿದ್ದರು. ಇದೀಗ ಶೌಚಾಲಯಗಳನ್ನು ಬಂದ್ ಮಾಡಿದ ಬಳಿಕ ನಿಲ್ದಾಣದ ಎದುರಿನ ಖಾಲಿ ಜಾಗ ಹಾಗೂ ನಮ್ಮ ಅಪಾರ್ಟ್ ಮೆಂಟ್ ಸಮುಚ್ಚಯದ ಗೋಡೆಯನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಅಪಾರ್ಟ್ ಮೆಂಟ್ ಸುತ್ತಲೂ ದುರ್ವಾಸನೆ ಬರುತ್ತಿದೆ. ದುರ್ವಾಸನೆ ಹಾಗೂ ಕೆಟ್ಟ ದೃಶ್ಯಗಳನ್ನು ನೋಡಲಾಗದೆ ನಿವಾಸಿಗಳು ಕಿಟಕಿ ಹಾಗೂ ಬಾಲ್ಕನಿಯನ್ನು ಸದಾಕಾಲ ಮುಚ್ಚಿಕೊಂಡಿರುವಂತಾಗಿದೆ.

ಅಪಾರ್ಟ್ ಮೆಂಟ್ ಮೂರನೇ ಮಹಡಿಯ ನಿವಾಸಿ ಶ್ರೀಕಾಂತ್ ಭಾಸ್ಕರ್ ಅವರು ಮಾತನಾಡಿ, ನಮಗೆಲ್ಲರಿಗೂ ಮುಜುಗರವನ್ನು ತರುತ್ತಿದೆ. ಇದೀಗ ಮನೆಗೆ ಬರುವ ಅತಿಥಿಗಳಿಗೆ ನಮ್ಮ ಮನೆಯಲ್ಲಿ ಬಾಲ್ಕನಿ ಇದೆ ಎಂದು ಹೇಳುವುದನ್ನೇ ಬಿಟ್ಟಿದ್ದೇವೆ. ಬಾಲ್ಕನಿ ಇದೆ ಎಂದರೆ, ತಾಜಾ ಗಾಳಿ ಪಡೆಯಲು ಹೋಗುವುದಾಗಿ ತಿಳಿಸುತ್ತಾರೆ. ಶೌಚಾಲಯ ಇದ್ದಾಗ ಅದನ್ನು ಚಾಲಕರು, ಕಂಡಕ್ಟರ್‌ಗಳು, ಬಸ್‌ ಪ್ರಯಾಣಿಕರು ಬಳಸುತ್ತಿದ್ದರು. ಆದರೀಗ ಕಾಂಪೌಂಡ್ ಗೋಡೆಗಳನ್ನು ಬಳಕೆ ಮಾಡುತ್ತಿದ್ದಾರೆ. ಸರ್ಕಾರ ಶೌಚಾಲಯ ಒದಗಿಸಿಲ್ಲ. ಬಳಕೆ ಮಾಡುವವರನ್ನು ನಿಂದಿಸಲು ನಮಗೆ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ಮಹಡಿಯ ನಿವಾಸಿ ಪಾಯಲ್ ಚೌಧುರಿ ಅವರು ಮಾತನಾಡಿ, ಹೊರಗಿನ ದೃಶ್ಯಾವಳಿಗಳು ನಮಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ. ಮನೆಯಲ್ಲಿ 10 ಮತ್ತು 6 ವರ್ಷ ಮಕ್ಕಳಿದ್ದಾರೆ. ನೆಲಮಹಡಿಯಲ್ಲಿರುವ ಮನೆಗಳ ಸ್ಥಿತಿಯಂತೂ ಹೇಳಲಾಗುದು. ಪ್ರಸ್ತುತ ಬೆಳವಣಿಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿವೆ. ನಮ್ಮ ಮನೆಗಳ ಕಿಟಕಿಗಳನ್ನು ತೆರೆಯುತ್ತಿಲ್ಲ ಎಂದು ಹೇಳಿದ್ದಾರೆ.

ಕಳೆದ 2 ದಿನಗಳಿಂದ ಬಿಎಂಆರ್‌ಸಿಎಲ್‌ನ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲಾಗುತ್ತಿದೆ. ಆದರೆ, ಅವರು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಚರಂಡಿ ನೀರು ನಿರ್ವಹಣೆಯ ಮುಖ್ಯ ಇಂಜಿನಿಯರ್ ಪ್ರವೀಣ್ ಲಿಂಗಯ್ಯ ಅವರು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶೌಚಾಲಯ ಸ್ಥಾಪನೆಗೆ ಸಾರ್ವಜನಿಕ ಸ್ಥಳಕ್ಕಾಗಿ ಹುಡುಕಾಟ ನಡೆಸಬೇಕಿದೆ. ಭೂಮಿ ಲಭ್ಯವಿದ್ದರೆ, ಶೌಚಾಲಯಗಳ ಶೀಘ್ರದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com