ಕಾವೇರಿ ಸಮಸ್ಯೆಗೆ ಡಿಎಂಕೆ-ಕಾಂಗ್ರೆಸ್‌ ಹೊಂದಾಣಿಕೆ ಕಾರಣ; ಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸಲು ಸರ್ಕಾರ ವಿಫಲ: ಬಿಎಸ್‌ ಯಡಿಯೂರಪ್ಪ

ರಾಜ್ಯ ಸರ್ಕಾರ ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಸರ್ಕಾರ ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ  ನೀರು ಬಿಟ್ಟು ತಪ್ಪು ಮಾಡಿತು. ಈಗ ಕೋರ್ಟ್ ಮುಂದೆ ಸಮರ್ಪಕವಾದ ವಾದ ಮಂಡಿಸುವಲ್ಲಿ ವಿಫಲವಾಯಿತು. ಸರಿಯಾಗಿ ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವುದು ಸಾಬೀತಾಗಿದೆ ಎಂದರು.

ಕೋರ್ಟ್ ಆದೇಶಕ್ಕೂ ಮೊದಲೇ ನೀರು ಬಿಟ್ಟು ತಪ್ಪು ಮಾಡಿದರು. ಈಗ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಂಡಿಸದೇ ವಿಫಲರಾದರು. ನಾವು ನೀಡುವ ಅಂಕಿ ಅಂಶಗಳ ಮೇಲೆ ಕೋರ್ಟ್ ಆದೇಶ ನೀಡುತ್ತದೆ, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರ್ಥವಾಗಿ ವಾದ ಮಾಡದಿರುವುದು ಹಿನ್ನಡೆಗೆ ಕಾರಣವಾಗಿದೆ ಎಂದರು.

ಸರ್ಕಾರ ಮೊದಲಿನಿಂದಲು ಕಾವೇರಿ ವಿಚಾರದಲ್ಲಿ ತಪ್ಪು ಮಾಡಿಕೊಂಡು ಬಂದಿದೆ. ಡಿಎಂಕೆ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಕೂಡಾ ಇದಕ್ಕೆ ಒಂದು ಕಾರಣ ಎಂದು ಯಡಿಯೂರಪ್ಪ ಆಕ್ಷೇಪಿಸಿದರು. ಇನ್ನಾದರೂ ಕಾಂಗ್ರೆಸ್‌ ನಾಯಕರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ, ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಡಿಎಂಕೆಯ ನಾಯಕರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದರಿಂದ ಡಿಎಂಕೆ ನಾಯಕರ ಜತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಕಾಂಗ್ರೆಸ್‌ ನಾಯಕರು ಪ್ರಯತ್ನಿಸಬೇಕು. ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವ ಸರಕಾರ ತಕ್ಷಣವೇ ಸುಪ್ರೀಂ ಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ ವಾಸ್ತವಿಕ ಪರಿಸ್ಥಿತಿ ವಿವರಿಸಬೇಕು. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಿ ಜಲಾಶಯಗಳಿಗೆ ಭೇಟಿ ಕೊಟ್ಟು ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಆದೇಶ ನೀಡುವಂತೆ ಮೇಲ್ಮನವಿ ಸಲ್ಲಿಸಬೇಕು. ಪ್ರಾಧಿಕಾರದ ಆದೇಶಕ್ಕೆ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಸುಪ್ರೀಂ ಕೋರ್ಟ್ ಜಲಾಶಯಗಳ ವೀಕ್ಷಣೆಗೆ ಯಾವುದಾದರೂ ಸಮಿತಿಯನ್ನು ಕಳುಹಿಸಿ ಕೊಡಲಿ ಇದನ್ನ ಸರ್ಕಾರ ಮೇಲ್ಮನವಿಯಲ್ಲಿ ಮನವಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯಕ್ಕೆ ಬಹಳ ಇಕ್ಕಟ್ಟಿನ ಪರಿಸ್ಥಿತಿ ಇದೆ. ಸುಪ್ರೀಂಕೋರ್ಟ್‌ ಹೇಳಿದಂತೆ ನೀರು ಬಿಟ್ಟರೆ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ. ಆಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ರಾಜ್ಯದ ಜನ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನು ಹೋರಾಟ ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡೋಣ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವುದು ಮತ್ತು ನೀರು ಬಿಡುಗಡೆಯ ಪ್ರಮಾಣವನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಒಂದೇ ಮಾರ್ಗವಾಗಿದೆ ಎಂದ ಅವರು, ಕಾವೇರಿ ವಿಷಯದಲ್ಲಿ ರಾಜಕೀಯ ಮಾಡಲು ಬಿಜೆಪಿ ಬಯಸುವುದಿಲ್ಲ ಎಂದರು.

ಇವತ್ತು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೊರ್ಟ್ ಎರಡು ರಾಜ್ಯಗಳ ವಾದ ಕೇಳಿ ಸಿಡಬ್ಲುಎಂಎ ಆದೇಶ ಎತ್ತಿ ಹಿಡಿದಿದೆ. ಮುಂದಿನ 15 ದಿನ ಸಿಡಬ್ಲುಎಂಎ ಆದೇಶ ಪಾಲನೆ ಮಾಡಬೇಕು ಅಂತ ಹೇಳಿರುವುದು ದುರಾದೃಷ್ಟ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ,  ಮತ್ತೊಮ್ಮೆ ಕರ್ನಾಟಕದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕಿದೆ. ಸಿಡಬ್ಲುಎಂಎ ಆದೇಶ ಅಂತಿಮವಲ್ಲ. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತನಗೆ ಸಂಬಂಧ ಇಲ್ಲ ಎನ್ನುವುದು ಸರಿಯಲ್ಲ. ಕೇವಲ ಕರ್ನಾಟಕದ ಡ್ಯಾಮ್ ಗಳ ನೀರಿನ ಮಟ್ಟ ಲೆಕ್ಕ ಹಾಕುವುದಲ್ಲ. ತಮಿಳುನಾಡು ಡ್ಯಾಮ್ ಗಳಲ್ಲಿ ನ ನೀರಿನ ಮಟ್ಟ ಲೆಕ್ಕ ಹಾಕಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೆಳುತ್ತಾರೆ. ತಮಿಳುನಾಡು ಈಗಾಗಲೇ ಅಕ್ರಮವಾಗಿ ನೀರು ಬಳಕೆ ಮಾಡಿಕೊಂಡಿದೆ. ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರ ಕೇವಲ ನಮ್ಮಲ್ಲಿ ನೀರಿಲ್ಲ ಅಂತ ಹೇಳುವುದಷ್ಟೇ ಅಲ್ಲ. ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರ ಇಲ್ಲಿ ಎಲ್ಲ ಭಾಗದ ಜನರು ಬರುತ್ತಾರೆ. ಬೆಂಗಳೂರಿಗೆ ಕುಡಿಯಲು ಪ್ರತ್ಯೇಕ ವಾಗಿ ನೀರು ಇಟ್ಟಿದ್ದಾರೆ.

ಇದನ್ನು ಸುಪ್ರೀಂ ಕೋರ್ಟ್ ಮುಂದೆ ವಾದ ಮಾಡಬೇಕು. ತಮಿಳುನಾಡಿಗೆ ನವೆಂಬರ್ ನಲ್ಲಿ ಮತ್ತೊಂದು ಹಿಂಗಾರು ಮಳೆ ಬರುತ್ತದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮುಗಿಯುವ ಹಂತದಲ್ಲಿದೆ. ಇದೆಲ್ಲವನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು. ಕುಡಿಯುವ ನೀರಿಗಾದರು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹೋರಾಟ ಮಾಡಬೇಕು. ಇದರಲ್ಲಿ ನಮಗೆ ರಾಜಕಾರಣ ಮಾಡಲು ಇಷ್ಟ ಇಲ್ಲ. ಈಗಾಗಲೇ ರೈತರ ಬೆಳೆ ಒಣಗಿ ಹೋಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com