ಕಾವೇರಿ ಬಂದ್: ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸರ ಊಟದಲ್ಲಿ ಸತ್ತ ಇಲಿ ಪತ್ತೆ; ಹೊಟೆಲ್ ಗೆ ಬೀಗ ಜಡಿದ ಪೊಲೀಸರು

ಕಾವೇರಿಗಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಬಂದ್ ವೇಳೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸರಿಗೆ ನೀಡಲಾಗಿದ್ದ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಆಹಾರ ಪೊಟ್ಟಣದಲ್ಲಿ ಸತ್ತ ಇಲಿ
ಆಹಾರ ಪೊಟ್ಟಣದಲ್ಲಿ ಸತ್ತ ಇಲಿ

ಬೆಂಗಳೂರು: ಕಾವೇರಿಗಾಗಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಬಂದ್ ವೇಳೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸರಿಗೆ ನೀಡಲಾಗಿದ್ದ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಬೆಂಗಳೂರು ಬಂದ್ ಕರ್ತವ್ಯದಲ್ಲಿದ್ದ ಯಶವಂತಪುರ ಸಂಚಾರ ಠಾಣೆಯ ಪೊಲೀಸರಿಗೆ ಸತ್ತ ಇಲಿ ಬಿದ್ದಿದ್ದ ಆಹಾರ ಪೂರೈಸಲಾಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಬಂದ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ. ಹೋಟೆಲ್‌ಗಳು ಬಂದ್ ಇರುವುದರಿಂದ‌ ಕರ್ತವ್ಯದಲ್ಲಿರುವ ಪೊಲೀಸರಿಗೆ, ಆಯಾ ವಿಭಾಗದಿಂದ ಆಹಾರ ಪೂರೈಸಲಾಗಿದೆ.

ಮೂಲಗಳ ಪ್ರಕಾರ ಆರ್‌.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಪೂರೈಸಲಾದ ರೈಸ್ ಬಾತ್‌ ಪೊಟ್ಟಣವೊಂದರಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಇದನ್ನು ನೋಡಿ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು, ನಂತರ, ಆಹಾರ ಪೊಟ್ಟಣಗಳ ಫೋಟೊ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 2 ಠಾಣೆಗಳ 180 ಪೊಲೀಸರಿಗೆ ಬೆಳಗ್ಗೆ 7.30ಕ್ಕೆ ಅಶೋಕ ಹೋಟಲ್‌ನಿಂದ ರೈಸ್ ಬಾತ್ ವಿತರಿಸಲಾಗಿತ್ತು. ಅದರಲ್ಲಿ ಯಶವಂತಪುರ ಸಂಚಾರ ಠಾಣೆ ಕಾನ್‌ಸ್ಟೆಬಲ್ ಕೊಟ್ಟಿದ್ದ ಆಹಾರ ಪೊಟ್ಟಣದಲ್ಲಿ ಸತ್ತ ಇಲಿ ಕಂಡು ಬಂದಿದೆ. ಸತ್ತ ಇಲಿ ಮಿಶ್ರಿತ ಆಹಾರ ನೀಡಿದ್ದ ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಜನರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಪೂರೈಸಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪೊಲೀಸರಿಗೆ 180 ಆಹಾರ ಪೊಟ್ಟಣ ಪೂರೈಕೆ
‘ಪೊಲೀಸರಿಗೆ 180 ಆಹಾರ ಪೊಟ್ಟಣ ಪೂರೈಕೆ ಮಾಡಲಾಗಿತ್ತು. ಈ ಪೈಕಿ ಒಂದು ಪೊಟ್ಟಣದಲ್ಲಿ ಇಲಿ ಪತ್ತೆಯಾಗಿದೆ. ಉಳಿದ ಆಹಾರದಲ್ಲೂ ಸತ್ತ ಇಲಿಯ ಅಂಶ ಇರುವ ಅನುಮಾನವಿತ್ತು. ಹೀಗಾಗಿ, ಎಲ್ಲ ಪೊಟ್ಟಣಗಳನ್ನು ವಾಪಸು ಕಳುಹಿಸಲಾಗಿದೆ’ ಎಂದು ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರು ತಿಳಿಸಿದರು.

ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಂಟಿ ಕಮಿಷನರ್ ಎಂ.ಎನ್. ಅನುಚೇತ್, ಆಹಾರ ಪೂರೈಕೆ ಹೊಣೆ ಹೊತ್ತಿದ್ದ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್ ನೀಡಿದ್ದಾರೆ. ಆಹಾರ ತಯಾರಿಸಿದ್ದ ಹೋಟೆಲ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಹೊಟೆಲ್ ಗೆ ಬೀಗ
ಇನ್ನು ಈ ಘಟನೆ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ನಗರ ಪೊಲೀಸರು, ಕಳಪೆ ಆಹಾರ ಸರಬರಾಜು ಮಾಡಿದ್ದ ಯಶವಂತಪುರ ಮೇಲ್ಸೇತುವೆ ಬಳಿಯ ಅಶೋಕ ಹೋಟೆಲ್‌ಗೆ ಬೀಗ ಹಾಕಿಸಿದ್ದರು. ಆಹಾರ ಪೂರೈಕೆ ಹೊಣೆಗಾರಿಕೆ ಹೊತ್ತಿದ್ದ ಯಶವಂತಪುರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಜಿ. ಚಿದಾನಂದ್ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಗಣೇಶ ಹಬ್ಬದ ಬಂದೋಬಸ್ತ್ ಸಿಬ್ಬಂದಿಗೂ ಕಳಪೆ ಆಹಾರ
3 ದಿನಗಳ ಹಿಂದೆ ಯಲಹಂಕದಲ್ಲಿ ಗಣೇಶ ವಿಸರ್ಜನೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಕಳಪೆ ಆಹಾರ ಪೂರೈಕೆ ಮಾಡಿದ್ದರು. ಕೇಸರಿಬಾತ್, ಉಪ್ಪಿಟ್ಟು ಮತ್ತು ವಡೆಯಲ್ಲಿ ಅತೀ ಹೆಚ್ಚು ಎಣ್ಣೆ ಇರುವುದನ್ನು ಕಾನ್‌ಸ್ಟೆಬಲ್ ವಿಡಿಯೋ ಮಾಡಿ ತೋರಿಸಿದ್ದ ದೃಶ್ಯಾವಳಿ ಸಹ ಎಲ್ಲೆಡೆ ವೈರಲ್ ಆಗಿತ್ತು.

ಇದರ ಬೆನ್ನೆಲ್ಲೆ ರೈಸ್‌ಬಾತ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಈ ಸಂಬಂಧ ಅಶೋಕ ಹೋಟೆಲ್‌ಗೆ ಬೀಗ ಜಡಿದು ಮಾಲಿಕನ ವಿರುದ್ಧ ಕಳಪೆ ಆಹಾರ ಪೂರೈಕೆ ಆರೋಪದಡಿ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಪ್ರತ್ಯೇಕ ತನಿಖೆ ಸಹ ನಡೆಸಲು ಬಿಬಿಎಂಪಿ ಆಹಾರ ಪರಿವೀಕ್ಷಕ ತಂಡ, ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. ತಪ್ಪು ಕಂಡುಬಂದರೇ 4 ರಿಂದ 5 ಲಕ್ಷ ರೂ.ದಂಡವನ್ನು ಬಿಬಿಎಂಪಿ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com