ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ: ಸಿಎಂ ಸಿದ್ದರಾಮಯ್ಯ

ಕಾವೇರಿ ನೀರು ಬಿಡುಗಡೆ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ನೀರಿಲ್ಲದೇ ಬಣಗುಡುತ್ತಿರುವ ಅಣೆಕಟ್ಟು
ನೀರಿಲ್ಲದೇ ಬಣಗುಡುತ್ತಿರುವ ಅಣೆಕಟ್ಟು

ಬೆಂಗಳೂರು: ಕಾವೇರಿ ನೀರು ಬಿಡುಗಡೆ ಆದೇಶಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಆದೇಶವನ್ನು ಎತ್ತಿ ಹಿಡಿದಿರುವ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ (CWMA) ನಿರ್ಧಾರವನ್ನು ಮರು ಪರಿಶೀಲಿಸುವಂತೆ ಇದೀಗ ರಾಜ್ಯ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿದೆ. ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ತನ್ನ ಪರಿಶೀಲನಾ ಅರ್ಜಿಯಲ್ಲಿ ಹೇಳಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಹಾಲಿ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ತನ್ನ ಪರಿಶೀಲನಾ ಅರ್ಜಿಯಲ್ಲಿ ಹೇಳಿದೆ. ಅಲ್ಲದೆ, ರಾಮನಗರ ತಾಲೂಕಿನ ಕನಕಪುರ ಬಳಿಯ ಮೇಕೆದಾಟು ಎಂಬಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಬ್ಯಾಲೆನ್ಸಿಂಗ್ ಜಲಾಶಯ ನಿರ್ಮಿಸಲು ಸರ್ಕಾರ ಅನುಮತಿ ಕೋರಿತ್ತು. ಪರಿಸ್ಥಿತಿಯನ್ನು ಅವಲೋಕಿಸಿದ ನಂತರ, ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

'ಕಾವೇರಿ ನೀರು ಬಿಡುಗಡೆ ಆದೇಶಕ್ಕೆ ಸಂಬಂಧಿಸಿದಂತೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಯಿತು. ಪರಿಸ್ಥಿತಿ ಅವಲೋಕಿಸಿದ ನಂತರ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು. ನಿನ್ನೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ಸಲಹೆಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭ: ಪ್ರಯೋಗ ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲೂ ಯತ್ನ!
 
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಶುಕ್ರವಾರ ಬಂದ್‌ಗೆ ಸಾಕ್ಷಿಯಾಗಿತ್ತು. ಅದಕ್ಕೂ ಮುನ್ನ ಮಂಗಳವಾರ ಬೆಂಗಳೂರು ಬಂದ್ ಆಗಿತ್ತು.

ಸಿಎಂ ಮಹತ್ತರ ಸಭೆ
ಕಾವೇರಿ ಕಾನೂನು ಹೋರಾಟ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ(ಸೆ.29) ಹಿರಿಯ ನ್ಯಾಯಾಧೀಶರು, ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಸಭೆಯಲ್ಲಿ ಕಾನೂನಿನ ಹೋರಾಟ ಮುಂದುವರೆಸುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಇಂದು ಅರ್ಜಿ ಸಲ್ಲಿಸಿದೆ. ಇನ್ನು ನಿನ್ನೆ ನಡೆದ ಸಭೆಯಲ್ಲಿ ರಾಜ್ಯದ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಿ. ಪ್ರಾಧಿಕಾರದ ಆದೇಶ ಪಾಲನೆ ಅಸಾಧ್ಯ ಎಂದು ಹೇಳಿದೆ. ಡ್ಯಾಂಗಳ ಮತ್ತು ಬೆಳೆಯ ಜಮೀನಿನ ಫೋಟೋ ಮತ್ತು ವಿಡಿಯೋಗಳನ್ನು ಕೋರ್ಟ್​ಗೆ ಸಲ್ಲಿಸಿ ಎಂದು ಸಲಹೆ ಕೂಡ ನೀಡಿದ್ದಾರೆ.

ಇದರ ಜೊತೆಗೆ ನ್ಯಾಯಮೂರ್ತಿಗಳು ಹಾಗೂ ವಕೀಲರು ‘ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಿದರೇ ಜನರಿಗೆ ಉಳಿಗಾಲವಿಲ್ಲ. ಮೂರು ಪಕ್ಷಗಳ ನಾಯಕರು ಒಂದಾಗಿ, ವಿಪಕ್ಷಗಳು ಮತ್ತು ಸರ್ಕಾರದ ಕೆಲ ಸಚಿವರು ನೀರಾವರಿ ಅಂಕಿ-ಅಂಶಗಳನ್ನ ಹೊರಗಡೆ ಹೇಳುವುದು ಸರಿಯಲ್ಲ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಇನ್ನು ನ್ಯಾಯಮೂರ್ತಿಗಳ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಜಿ ಶಶಿಕಿರಣ್ ಶೆಟ್ಟಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com