ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದರು, ಸಿಎಂ ಬೊಮ್ಮಾಯಿಗೆ ನನ್ನ ಬೆಂಬಲ, ಯಾವುದೇ ಪಕ್ಷಕ್ಕಲ್ಲ: ನಟ ಸುದೀಪ್ ಸ್ಪಷ್ಟನೆ

ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನಾನು ಬೆಂಬಲ ನೀಡುತ್ತೇನೆಂದು ನಟ ಕಿಚ್ಚ ಸುದೀಪ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ಸಿಎಂ ಬೊಮ್ಮಾಯಿ.
ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ಸಿಎಂ ಬೊಮ್ಮಾಯಿ.

ಬೆಂಗಳೂರು: ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನಾನು ಬೆಂಬಲ ನೀಡುತ್ತೇನೆಂದು ನಟ ಕಿಚ್ಚ ಸುದೀಪ್ ಅವರು ಬುಧವಾರ ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ಅವರು, ಬಿಜೆಪಿ ಸೇರುವ ವಿಚಾರ ಮಾತನಾಡಲಿಲ್ಲ ಪಕ್ಷದ ಪರವಾಗಿ ಪ್ರಚಾರ ಮಾಡುವೆ ಎಂದೂ ಹೇಳಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆಂದು ಹೇಳಿದ್ದಾರೆ.

ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತಿದ್ದು ಸಿಎಂ ಬೊಮ್ಮಾಯಿಯವರು. ನಾನು ಚಿಕ್ಕವಯಸ್ಸಿನಿಂದ ಅವರನ್ನು ನೋಡಿದ್ದೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಅಂತಹವರು ನನ್ನ ಮಾಮ ಸಿಎಂ ಬೊಮ್ಮಾಯಿ. ನಾನು ಅವರ ಪರವಾಗಿ ನಿಲ್ಲಲು ಬಂದೆ. ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಟೈಮ್​ಲ್ಲಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ. ಹಾಗೆ ಕೆಲ ಸ್ನೇಹಿತರು ಇದ್ದಾರೆ. ಅವರ ಪರವೂ ನಿಲ್ಲುತ್ತೇನೆ ಎಂದು ತಿಳಿಸಿದರು.

ನನ್ನ ಲೈಫ್ ನಲ್ಲಿ ಬೊಮ್ಮಾಯಿಯವರು ಒಳ್ಳೆಯ ಸ್ಥಾನದಲ್ಲಿದ್ದಾರೆ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ. ತಯಾರಿದ್ದೇನೆ. ಒಬ್ಬ ತಂದೆಯ ಮಾತು ಕೇಳುವ ರೀತಿ ಅವರ ಮಾತು ಕೇಳುತ್ತೇನೆ. ಪಕ್ಷ ಕರೆದಿರೋದು ನನಗೆ ಗೊತ್ತಿಲ್ಲ. ಬೊಮ್ಮಾಯಿ ಬೇರೆ ಪಕ್ಷದಲ್ಲಿದ್ದರೂ ಅವರ ಜೊತೆ ನಾನು‌ ನಿಲ್ಲುತ್ತಿದ್ದೆ. ನಾನು ಸಿಎಂ ಬೊಮ್ಮಾಯಿ ಅವರ ವಿಷಯದಲ್ಲಿ ಪಕ್ಷ ನೋಡುತ್ತಿಲ್ಲ, ವ್ಯಕ್ತಿ ನೋಡುತ್ತೇನೆ ಎಂದರು.

ನನಗೆ ಎಲ್ಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆಗಲ್ಲ. ಪಕ್ಷ ಅಂತಾ ಇಲ್ಲಿಗೆ ಬಂದಿಲ್ಲ, ವ್ಯಕ್ತಿಯ ಕಾಳಜಿಗೆ ಬಂದಿದ್ದೇನೆ.  ಹಣಕ್ಕಾಗಿ ನಾನು ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಸಿಎಂ ಬೊಮ್ಮಾಯಿ ಅವರಿಗೆ ಮಾತ್ರ ನನ್ನ ಬೆಂಬಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ ಎಂದು ಹೇಳಿದರು. ಈ ಮೂಲಕ ರಾಜಕೀಯ ಪ್ರವೇಶ ಕುರಿತ ಸುದ್ದಿಗಳಿಗೆ ತೆರೆ ಎಳೆದರು.

ಪ್ರಧಾನಿ ಮೋದಿ ಬಗ್ಗೆ ಗೌರವವಿದೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಯಗಳ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಅವರ ನಿರ್ಣಯಗಳ ಬಗ್ಗೆ ಹೆಮ್ಮ ಇದೆ. ಆದರೆ, ನಾನಿಂದು ಬಂದಿರುವುದು ರಾಜಕೀಯ ಪ್ರವೇಶ ವಿಚಾರವಾಗಿ ಅಲ್ಲ. ನಾನು ಬಂದಿರೋದು ಕೇವಲ ವ್ಯಕ್ತಿಗೋಸ್ಕರ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com