ಫಸಲ್ ಭೀಮಾ ಯೋಜನೆ: ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ!

ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ಪಿಎಂಎಫ್‌ಬಿವೈ) ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂದು ಘೋಷಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ಪಿಎಂಎಫ್‌ಬಿವೈ) ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂದು ಘೋಷಿಸಲಾಗಿದೆ.

ಏಪ್ರಿಲ್ 14 ರಂದು ಛತ್ತೀಸ್​ಗಢದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

2018ರಿಂದ 2022ರ ಮೇ 31ರ ವರೆಗೆ ವಿವಿಧ ಕಾರ್ಯಾಚರಣೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ 5.66 ಲಕ್ಷ ರೈತರ 687.4 ಕೋಟಿ ರೂ.ಗಳ ಕ್ಲೇಮ್​ಗಳು ಬಾಕಿ ಉಳಿದಿದ್ದವು. ಇದನ್ನು ಪೂರ್ಣಗೊಳಿಸಲು ರಾಜ್ಯದಾದ್ಯಂತ ಅಭಿಯಾನ ಆರಂಭಿಸಲಾಯಿತು. ಈ ಪ್ರಯತ್ನಗಳಿಂದಾಗಿ 2018 ರಿಂದ ಬಾಕಿ ಉಳಿದಿದ್ದ 5.66 ಲಕ್ಷ ರೈತರ 687.4 ಕೋಟಿ ರೂ.ಗಳ ಕ್ಲೇಮ್​ಗಳನ್ನು ಇತ್ಯರ್ಥಪಡಿಸಲಾಗಿದೆ. ಇಲಾಖೆಯ ಕ್ಷಿಪ್ರ ಸೇವೆಯಿಂದಾಗಿ 5.66 ಲಕ್ಷ ರೈತರು ಬಾಕಿ ಪ್ರಯೋಜನ ಪಡೆದಿದ್ದಾರೆ.

2021 ರಲ್ಲಿ, ಪಿಎಂಎಫ್​ಬಿವೈಗೆ 16.15 ಲಕ್ಷ ರೈತರು ನೋಂದಾಯಿಸಿಕೊಂಡಿದ್ದರು ಮತ್ತು 2022 ರಲ್ಲಿ ದಾಖಲಾದ ರೈತರ ಸಂಖ್ಯೆ 23.86 ಲಕ್ಷಕ್ಕೆ ಏರಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ದಾಖಲಾತಿಯಲ್ಲಿ ಶೇಕಡಾ 47.74 ರಷ್ಟು ದಾಖಲೆಯ ಹೆಚ್ಚಳವಾಗಿದೆ. ಇದೇ ರೀತಿ, 2021 ರಲ್ಲಿ, ಪಿಎಂಎಫ್​ಬಿವೈ ಯೋಜನೆಯಡಿ ರಾಜ್ಯದಲ್ಲಿ 13.35 ಲಕ್ಷ ಹೆಕ್ಟೇರ್ ಪ್ರದೇಶವನ್ನು ವಿಮೆ ಮಾಡಲಾಗಿದೆ ಮತ್ತು 2022 ರಲ್ಲಿ ಇದು 18.94 ಲಕ್ಷ ಹೆಕ್ಟೇರ್​ಗಳಿಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿಮಾ ಪ್ರದೇಶದಲ್ಲಿ ಶೇ.41.8 ಹೆಚ್ಚಳವಾಗಿದೆ. ರಾಜ್ಯದಾದ್ಯಂತ ನಡೆಸಿದ ಬೃಹತ್ ಐಇಸಿ ಅಭಿಯಾನಗಳಿಂದಾಗಿ ಈ ಹೆಚ್ಚಳ ಸಾಧಿಸಲಾಗಿದೆ.

ಸಾಮಾನ್ಯ ಸೇವಾ ಕೇಂದ್ರಗಳು ಕಳೆದ 6 ವರ್ಷಗಳಿಂದ ಸಾಲ ಪಡೆಯದ ರೈತರ ನೋಂದಣಿಯಲ್ಲಿ ತೊಡಗಿವೆ. 2022 ರಿಂದ, ರಾಜ್ಯದಲ್ಲಿ ಗ್ರಾಮ-ಒನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳ ಮೂಲಕ 4.66 ಲಕ್ಷ ರೈತರನ್ನು ನೋಂದಾಯಿಸಲಾಗಿದೆ. ಇದು ಮತ್ತೆ ಸಾಲ ಪಡೆಯದ ರೈತರ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ವಿಮಾ ಉತ್ಪನ್ನವನ್ನು ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಇದೇ ರೀತಿ, 2022ರಲ್ಲಿ, ನೈಸರ್ಗಿಕ ವಿಪತ್ತುಗಳಿಂದ ಹಾನಿಗೊಳಗಾದ 5.60 ಲಕ್ಷ ರೈತರಿಗೆ ಈಗಾಗಲೇ ಅದೇ ವರ್ಷದೊಳಗೆ (ಹಿಂದಿನ ವರ್ಷಗಳಲ್ಲಿ ಇದನ್ನು ಮಾಡಲಾಗಿರಲಿಲ್ಲ) ಬೆಳೆ ವಿಮಾ ಕ್ಲೈಮ್​ಗಳನ್ನು 298.57 ಕೋಟಿ ರೂ.ಗಳ ಆಡ್-ಆನ್ ಕವರೇಜ್​ಗಳ ಅಡಿಯಲ್ಲಿ ಇತ್ಯರ್ಥಪಡಿಸಲಾಗಿದೆ. ಕರ್ನಾಟಕದಲ್ಲಿ ಶೇ. 100 ರಷ್ಟು ಬೆಳೆ ಕಟಾವು ಪ್ರಯೋಗಗಳನ್ನು ಸಿಸಿಇ ಅಗ್ರಿ ಆಪ್ ಬಳಸಿ ನಡೆಸಲಾಗುತ್ತದೆ.

“ಹಿಂದಿನ ವರ್ಷಗಳಲ್ಲಿ ರೈತರಿಗೆ ವಿಮಾ ಪರಿಹಾರವನ್ನು ಸಾಮಾನ್ಯವಾಗಿ ಒಂದರಿಂದ ಎರಡು ವರ್ಷಗಳ ನಂತರ ಇತ್ಯರ್ಥಪಡಿಸಲಾಗುತ್ತಿತ್ತು. ಈ ಅಂತರವು ರೈತರು ತಮ್ಮ ಬೆಳೆಗಳನ್ನು ವಿಮೆ ಮಾಡಿಸಿಕೊಳ್ಳಲು ನಿರುತ್ಸಾಹಗೊಳಿಸುತ್ತಿತ್ತು. ವಿಮಾ ದಾಖಲಾತಿಗಳು ಮತ್ತು ಪಾವತಿ ಅಥವಾ ಇತ್ಯರ್ಥದ ನಡುವಿನ ಈ ವಿಳಂಬವನ್ನು ನಿವಾರಿಸುವ ಸಲುವಾಗಿ ಕೃಷಿ ಇಲಾಖೆಯು ವಿಮಾ ಕ್ಲೇಮ್​ಗಳ ನೋಂದಣಿ ಮತ್ತು ಕ್ಲೇಮ್​ ಒಂದೇ ವರ್ಷದೊಳಗೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಉತ್ತೇಜಿಸಿತು. 2022 ರಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡ ಕಾರಣ ನಾವು ಅದೇ ವರ್ಷದಲ್ಲಿ ಕ್ಲೈಮ್​ಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಯಿತು. ಸದ್ಯ ರೈತರು ತಮ್ಮ ಬೆಳೆ ವಿಮೆ ಕ್ಲೈಮ್​ಗಳನ್ನು ಇತ್ಯರ್ಥಪಡಿಸಲು ವರ್ಷಗಟ್ಟಲೆ ಕಾಯಬೇಕಾಗಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಪೂರ್ಣ 3 ವರ್ಷಗಳ ಟೆಂಡರ್ ಅವಧಿಗೆ, ರಾಜ್ಯವು ಆ ವರ್ಷದ ಪೂರ್ಣಗೊಳ್ಳುವೊಳಗೆ ತನ್ನ ಪಾಲನ್ನು ಪೂರ್ಣವಾಗಿ ಬಿಡುಗಡೆ ಮಾಡಿದೆ. ರಾಜ್ಯದ ಪಾಲನ್ನು ಪೂರ್ಣವಾಗಿ ಬಿಡುಗಡೆ ಮಾಡುವುದರಿಂದ ವಿಮಾ ಕಂಪನಿಗಳು ಕ್ಲೈಮ್​ಗಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸುತ್ತವೆ. 2023 ರಲ್ಲಿ ಪಿಎಂಎಫ್​ಬಿವೈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯವು 951 ಕೋಟಿ ರೂ.ಗಳ ಮುಂಗಡ ಪಾಲನ್ನು ಬಿಡುಗಡೆ ಮಾಡಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕ ರಾಜ್ಯವು ಯೋಜನೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ಕ್ಲೈಮ್​ಗಳನ್ನು ಸಮಯೋಚಿತವಾಗಿ ಇತ್ಯರ್ಥಪಡಿಸುವ ಮೂಲಕ ದೇಶಕ್ಕೆ ಉದಾಹರಣೆಯಾಗಿ ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com