ಕರ್ನಾಟಕ ವಿಧಾನಸಭೆ ಚುನಾವಣೆ: 10 ಲಕ್ಷ ರೂ.ಗಿಂತ ಹೆಚ್ಚು ನಗದು ಸಿಕ್ಕರೆ ಐಟಿ ತನಿಖೆ!

ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಹಣದ ಹೊಳೆಯ ಭೀತಿ ಎದುರಾಗಿದ್ದು, ಈ ಬಗ್ಗೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 10 ಲಕ್ಷಕ್ಕಿಂತ ಹೆಚ್ಚು ನಗದು ಸಿಕ್ಕರೆ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ
ಕರ್ನಾಟಕ ವಿಧಾನಸಭೆ ಚುನಾವಣೆ

ಬೆಂಗಳೂರು: ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಹಣದ ಹೊಳೆಯ ಭೀತಿ ಎದುರಾಗಿದ್ದು, ಈ ಬಗ್ಗೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 10 ಲಕ್ಷಕ್ಕಿಂತ ಹೆಚ್ಚು ನಗದು ಸಿಕ್ಕರೆ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಮಾರ್ಚ್ 29ರಂದು ವೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದ್ದು, ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರಾಜ್ಯದಲ್ಲಿ ಹಣದ ಹರಿವಿನ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಅಭ್ಯರ್ಥಿಗಳು, ಅವರ ಬೆಂಬಲಿಗರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಚುನಾವಣಾ ವೆಚ್ಚ ವೀಕ್ಷಕರು, ಯಾವುದೇ ಅಕ್ರಮ ನಡೆಯದಂತೆ ಮತ್ತು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಿದ್ದಾರೆ.

ಚುನಾವಣಾ ಸಮಯದಲ್ಲಿನ ಹಣ ಹಂಚಿಕೆ, ಹಣ ಸಾಗಣೆ ಮೇಲೆ ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಕಣ್ಗಾವಲು ವಹಿಸಿದ್ದಾರೆ. ಒಂದು ವೇಳೆ 10 ಲಕ್ಷಕ್ಕಿಂತ ಅಧಿಕ ಹಣ ಸಾಗಣೆ ಪ್ರಕರಣಗಳು ಬೆಳಕಿಗೆ ಬಂದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲದ ಬಗ್ಗೆ ತನಿಖೆ ನಡೆಸಲಿದ್ದಾರೆ.

ಈ ವರೆಗೂ ಎಷ್ಟು ಹಣ ವಶಕ್ಕೆ?
ಮಾರ್ಚ್ 29ರಂದು ಕರ್ನಾಟಕದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಇಲ್ಲಿಯ ತನಕ ರಾಜ್ಯದಲ್ಲಿ 71.27 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 55.11 ಕೋಟಿ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 16.15 ಕೋಟಿ ರೂ. ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ಪ್ರಮಾಣದ ಹಣವನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಿದ್ದಾರೆ. ಪೊಲೀಸರು ಇನ್ನು ಮುಂದೆ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ವಶಕ್ಕೆ ಪಡೆದರೆ ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.

ಈ ಕುರಿತು ಕರ್ನಾಟಕದ ಪೊಲೀಸ್ ಇಲಾಖೆಗೆ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕ (ಚುನಾವಣಾ ನೋಡೆಲ್ ಅಧಿಕಾರಿ) ಪ್ರಿಯದರ್ಶಿ ಮಿಶ್ರಾ ಲಿಖಿತ ಸೂಚನೆ ನೀಡಿದ್ದಾರೆ. ಪೊಲೀಸರು ವಶಪಡಿಸಿಕೊಳ್ಳುವ ನಗದು ಹಣದ ಕುರಿತು ಮೊದಲು ಕೋರ್ಟ್‌ಗೆ ಮಾಹಿತಿ ನೀಡಬೇಕು. ಬಳಿಕ ಈ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿದ್ದು, ಅವರು ತನಿಖೆ ನಡೆಸಲಿದ್ದಾರೆ.

ಎಷ್ಟು ಹಣ ಸಾಗಣೆ ಮಾಡಬಹುದು?
ಮಾರ್ಚ್ 29ರಿಂದ ಮೇ 14ರ ತನಕ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಎಲ್ಲಾ ಜಿಲ್ಲೆಗಳ ಗಡಿಗಳಲ್ಲಿ ಚೆಕ್‌ಪೋಸ್ಟ್‌ ತೆರೆದು ವಾಹನಗಳ ತಪಾಸಣೆಯನ್ನು ಚುನಾವಣಾ ಆಯೋಗದ ಸೂಚನೆಯಂತೆ ನಡೆಸಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 50 ಸಾವಿರ ರೂ. ತನಕ ಸಾಗಣೆ ಮಾಡಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಹಣವನ್ನು ಸಾಗಣೆ ಮಾಡುವಾಗ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ದಾಖಲೆ ಇಲ್ಲವಾದಲ್ಲಿ ಹಣವನ್ನು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು.

ಉಳಿದಂತೆ ಆಸ್ಪತ್ರೆ, ಶುಭ ಸಮಾರಂಭ ಸೇರಿದಂತೆ ವೈಯಕ್ತಿಕ ವೆಚ್ಚಕ್ಕಾಗಿ ಹಣ ತೆಗೆದುಕೊಂಡು ಹೋಗಲು ಯಾವುದೇ ಅಡ್ಡಿ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆದರೆ ಅಧಿಕಾರಿಗಳು ಕೇಳಿದಾಗ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಚುನಾವಣಾ ಆಯೋಗದ ಸಿಬ್ಬಂದಿ, ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡುತ್ತಾರೆ. ಒಂದು ವೇಳೆ 10 ಲಕ್ಷಕ್ಕಿಂತ ಅಧಿಕ ಹಣ ಪತ್ತೆಯಾದರೆ ಪೊಲೀಸರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ಆಗ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣ ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ವಿಚಾರಣೆಯನ್ನು ಪೊಲೀಸರ ಸಹಕಾರದಲ್ಲೇ ನಡೆಸುತ್ತಾರೆ, ದಾಖಲೆಗಳ ಪರಿಶೀಲನೆ ನಡೆಸುತ್ತಾರೆ. ವ್ಯವಹಾರದ ಉದ್ದೇಶಕ್ಕಾಗಿ ಸಾಗಣೆ ಮಾಡುವ ಹಣವಾದರೆ ವಿನಾಯಿತಿ ಸಿಗಲಿದೆ. ಇಲ್ಲವಾದಲ್ಲಿ ಹೆಚ್ಚುವರಿ ತನಿಖೆಯನ್ನು ಎದುರಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com