ಬೆಂಗಳೂರು: ಕಾಲೇಜುಗಳಲ್ಲಿ ದಾಖಲಾತಿ ಮಾಡಿಸುವುದಾಗಿ 104 ವಿದೇಶಿ ವಿದ್ಯಾರ್ಥಿಗಳಿಗೆ ವಂಚನೆ, ಆರೋಪಿ ಬಂಧನ

ಬೆಂಗಳೂರು ಮೂಲದ ಕಾಲೇಜುಗಳಲ್ಲಿ ಪ್ರವೇಶ ಬಯಸಿ ಬರುವ ಸುಮಾರು 104 ವಿದೇಶಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದ ಮೇಲೆ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಬೆಂಗಳೂರು ಮೂಲದ ಕಾಲೇಜುಗಳಲ್ಲಿ ಪ್ರವೇಶ ಬಯಸಿ ಬರುವ ಸುಮಾರು 104 ವಿದೇಶಿ ವಿದ್ಯಾರ್ಥಿಗಳನ್ನು ವಂಚಿಸಿದ ಆರೋಪದ ಮೇಲೆ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕಾವಲ್ ಬೈರಸಂದ್ರದ ಮುನೇಶ್ವರ ನಗರದ ನಿವಾಸಿ ಸಮೀರ್ ಖಾನ್ ಅಲಿಯಾಸ್ ಸಮೀರ್ ಎಂಬಾತ ತಾನು ಸಂಜಯನಗರದ ಖಾಸಗಿ ಕಾಲೇಜಿನ ಮಾಲೀಕ ಎಂದು ಹೇಳಿಕೊಂಡು ವಿದ್ಯಾರ್ಥಿಗಳಿಗೆ ಪದವಿ ಮತ್ತು ಭಾಷಾ ಕೋರ್ಸ್‌ಗಳಿಗೆ ಪ್ರವೇಶ ನೀಡುತ್ತಿದ್ದ. ವಿದ್ಯಾರ್ಥಿಗಳು ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ ದಾಖಲೆಗಳಾಗಿ ಸ್ವೀಕಾರಾರ್ಹವಾದ ಪ್ರಮಾಣಪತ್ರಗಳನ್ನೇ ಆತ ನೀಡುತ್ತಿದ್ದ. ನಗರಕ್ಕೆ ಬಂದಿಳಿದ ನಂತರವೇ ಅವರಿಗೆ ತಾವು ಮೋಸ ಹೋಗಿರುವುದು ಅರಿವಾಗಿದೆ. 104 ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಯೆಮೆನ್‌ನಿಂದ ಬಂದವರು.

ಎಲ್ಲಾ ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಫ್‌ಆರ್‌ಆರ್‌ಒ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿದ ನಂತರವಷ್ಟೇ ಅವರು ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಆದಾಗ್ಯೂ, ಕಾಲೇಜು ಆಡಳಿತ ಮಂಡಳಿಯು ಆರೋಪಿಯು ತಮ್ಮ ಕಾಲೇಜಿನ ಮಾಲೀಕರಲ್ಲ ಮತ್ತು ಯಾವುದೇ ವಿದೇಶಿ ವಿದ್ಯಾರ್ಥಿಗಳು ಇಲ್ಲಿ ಓದುತ್ತಿಲ್ಲ ಎಂದು ಎಪ್ಆರ್‌ಆರ್‌ಒಗೆ ಮಾಹಿತಿ ನೀಡಿದೆ.

ಎಫ್‌ಆರ್‌ಆರ್‌ಒ ಏಪ್ರಿಲ್ 6 ರಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ ದೂರು ದಾಖಲಿಸಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದೆ.

'ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಕೆಲವು ಸರ್ಟಿಫಿಕೇಶನ್ ಕೋರ್ಸ್‌ಗಳಿಗೆ ದಾಖಲಾಗಲು ಬಂದಿದ್ದರು. ಅವರನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಆರೋಪಿಯು ವೀಸಾ ಷರತ್ತುಗಳನ್ನು ಉಲ್ಲಂಘಿಸಿ ನಕಲಿ ಕಾಲೇಜು ಪ್ರವೇಶ ಪ್ರಮಾಣಪತ್ರಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾನೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆಯಲ್ಲಿ ಕಾಲೇಜಿನ ಪಾತ್ರವಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ. ವಂಚನೆಯಲ್ಲಿ ಪ್ರವೇಶ ಏಜೆಂಟ್‌ಗಳ ಸಾಧ್ಯತೆಯನ್ನು ನಾವು ತಳ್ಳಿಹಾಕುವುದಿಲ್ಲ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com