'ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಡಿಕೆಶಿ ಜೊತೆ ನ್ಯಾಯಮೂರ್ತಿಗಳು ವೇದಿಕೆ ಹಂಚಿಕೊಳ್ಳಬಹುದೇ?': ಮಾಜಿ ಸಚಿವ ಸುರೇಶ್ ಕುಮಾರ್
ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ಆಗಸ್ಟ್ 12ರಂದು ಆಯೋಜನೆಯಾಗಿರುವ ಬೆನ್ನಿಗೇ ಕಾರ್ಯಕ್ರಮದ ವೇದಿಕೆಯಲ್ಲಿ ನ್ಯಾಯಮೂರ್ತಿಗಳೊಂದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವೇದಿಕೆ ಹಂಚಿಕೊಳ್ಳುವ ವಿಷಯ ಶಿಷ್ಟಾಚಾರ ಹಾಗೂ ರಾಜಕಾರಣದ ಚರ್ಚೆಗೆ ಕಾರಣವಾಗಿದೆ.
Published: 06th August 2023 09:56 AM | Last Updated: 06th August 2023 01:25 PM | A+A A-

ಮಾಜಿ ಸಚಿವ ಸುರೇಶ್ ಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ಆಗಸ್ಟ್ 12ರಂದು ಆಯೋಜನೆಯಾಗಿರುವ ಬೆನ್ನಿಗೇ ಕಾರ್ಯಕ್ರಮದ ವೇದಿಕೆಯಲ್ಲಿ ನ್ಯಾಯಮೂರ್ತಿಗಳೊಂದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವೇದಿಕೆ ಹಂಚಿಕೊಳ್ಳುವ ವಿಷಯ ಶಿಷ್ಟಾಚಾರ ಹಾಗೂ ರಾಜಕಾರಣದ ಚರ್ಚೆಗೆ ಕಾರಣವಾಗಿದೆ.
“ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಿದ್ದು, ಇಂಥವರ ಜೊತೆ ಮುಂದಿನ ವಾರ ಮೈಸೂರಿನಲ್ಲಿ ನಡೆಯಲಿರುವ ವಕೀಲರ ಸಮಾವೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಗಳು ವೇದಿಕೆ ಹಂಚಿಕೊಳ್ಳಬಹುದೇ? ಇದು ನ್ಯಾಯಸಮ್ಮತವೇ ಮತ್ತು ಶಿಷ್ಟಾಚಾರ ಎಲ್ಲರಿಗೂ ಅನ್ವಯವಾಗಬೇಕಲ್ಲವೇ” ಎಂದು ಮಾಜಿ ಕಾನೂನು ಸಚಿವ ಹಾಗೂ ಶಾಸಕ ಎಸ್ ಸುರೇಶ್ ಕುಮಾರ್ ಅವರು ಪ್ರಶ್ನೆ ಎತ್ತಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3 ಬಗ್ಗೆ ಕನ್ನಡ ಉಪನ್ಯಾಸಕ ಅಪಹಾಸ್ಯ; ಸ್ಪಷ್ಟನೆ ಕೋರಿ ಮಧು ಬಂಗಾರಪ್ಪಗೆ ಬಿಜೆಪಿ ಶಾಸಕ ಪತ್ರ
ಈ ಕುರಿತು ಫೇಸ್‌ಬುಕ್‌ನಲ್ಲಿ ಶನಿವಾರ ಪೋಸ್ಟ್ ಮಾಡಿರುವ ಅವರು “ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶ ಆಗಸ್ಟ್ 12ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎ ಎಸ್ ಬೋಪಣ್ಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಸೇರಿದಂತೆ ಹಲವು ನ್ಯಾಯಮೂರ್ತಿಗಳು, ಸಚಿವರು ಸೇರಿದಂತೆ ಹಲವರು ಭಾಗವಹಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸಹ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಎಂದು ಓದಿ ಆಶ್ಚರ್ಯವಾಯಿತು” ಎಂದು ಬಿಜೆಪಿಯ ಮುಖಂಡರಾದ ಸುರೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: 'ಸಕಾಲ' ಯೋಜನೆ ಬಗ್ಗೆ ಆಸಕ್ತಿ ವಹಿಸುವಂತೆ ಸರ್ಕಾರಕ್ಕೆ ಎಸ್.ಸುರೇಶ್ ಕುಮಾರ್ ಒತ್ತಾಯ
“ನ್ಯಾಯಾಂಗದ ಶಿಷ್ಟಾಚಾರದ ಪ್ರಕಾರ ಡಿ ಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಬಹುದೇ? ನಾನು ಹಿಂದೆ ಕಾನೂನು ಸಚಿವನಾಗಿದ್ದಾಗ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನ್ಯಾಯಾಲಯದ ಹೊಸ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಆಗ ಮುಖ್ಯ ನ್ಯಾಯಮೂರ್ತಿಗಳೊಡನೆ ವೇದಿಕೆಯಲ್ಲಿ ಕುಳಿತುಕೊಳ್ಳುವ ಅತಿಥಿಗಳ ವಿರುದ್ಧ (ಕಾನೂನು ಸಚಿವನಾಗಿದ್ದ ನನ್ನದೂ ಸೇರಿದಂತೆ) ಯಾವುದಾದರೂ ಕ್ರಿಮಿನಲ್ ಕೇಸ್ ಇದೆಯೇ ಎಂದು ಪ್ರಶ್ನಿಸಲಾಗಿದ್ದ ಘಟನೆ ನೆನಪಿಗೆ ಬರುತ್ತಿದೆ. ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ ಎಂಬುದು ಬೇರೆ ವಿಚಾರ” ಎಂದು ತಿಳಿಸಿದ್ದಾರೆ.
ಮುಂದುವರಿದು, “ಡಿ ಕೆ ಶಿವಕುಮಾರ್ ಅವರು ಎದುರಿಸುತ್ತಿರುವ ಕೆಲವು ಪ್ರಕರಣಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಇರುವುದು ಎಲ್ಲರಿಗೂ ತಿಳಿದ ವಿಷಯ. ಅಂತಹ ವ್ಯಕ್ತಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸರ್ವೋಚ್ಚ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಜೊತೆ ಭಾಗವಹಿಸುವುದು ಸೂಕ್ತವೇ? ಕಾರ್ಯಕ್ರಮ ಆಯೋಜಿಸಿರುವ ವಕೀಲರ ಪರಿಷತ್ ಈ ಕುರಿತು ಸ್ಪಷ್ಟೀಕರಣ ನೀಡಬೇಕು” ಎಂದು ಆಗ್ರಹಿಸಿದ್ದಾರೆ.