ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ: ವಿವಿಧ ಜಿಲ್ಲೆಗಳ 48 ಕಡೆ ದಾಳಿ; ಸುಖ ನಿದ್ದೆಯಲ್ಲಿದ್ದ  ಸರ್ಕಾರಿ ಅಧಿಕಾರಿಗಳಿಗೆ ಶಾಕ್

ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಂಜಾನೆಯ ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆ ಬೆಂಗಳೂರು, ಕೊಡಗು, ಚಿತ್ರದುರ್ಗ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ದಾಳಿ
ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಂಜಾನೆಯ ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆ ಬೆಂಗಳೂರು, ಕೊಡಗು, ಚಿತ್ರದುರ್ಗ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಗಳು ದಾಳಿ ನಡೆಸಿದ್ದಾರೆ.

ಮಹದೇವಪುರ ವಲಯದ ಬಿಬಿಎಂಪಿ RI ನಟರಾಜ್ ಮನೆ ಮೇಲೆ ದಾಳಿ. ಅಧಿಕಾರಿ ನಟರಾಜು ಮನೆಮೇಲೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ನಟರಾಜು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಹಣ ಪಡೆಯುವಾಗ ನಟರಾಜ್ ಟ್ರಾಪ್ ಆಗಿದ್ದರು. ಬೆಂಗಳೂರು ಒಂದರಲ್ಲೇ ಹತ್ತಕ್ಕೂ ಹೆಚ್ಚುಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಹಲವು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ‌ ಇಲಾಖೆ ಇಂಜಿನಿಯರ್ ಕೆ.ಮಹೇಶ್, ಪತ್ನಿ ಬಿಬಿಎಂಪಿ ಎಇ ಹೆಚ್.ಭಾರತಿ ಮನೆ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾವಣಗೆರೆಯ ಜಯನಗರದಲ್ಲಿರುವ ಮಹೇಶ್​​ ಮನೆ ಮೇಲೂ ದಾಳಿ ನಡೆಸಿ, ಪರಿಶೀಲಿಸುತ್ತಿದ್ದಾರೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ.

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಅವರ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ದೇವನೂರು ಚರ್ಚ್ ಬಳಿ ಇರುವ ನಾಗರಾಜು ಮನೆ ಮತ್ತು ನಗರದ ಬೆಳಗುಂಬ ರಸ್ತೆಯಲ್ಲಿರುವ ಟೂಡಾ (ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ) ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಾಗರಾಜು ಪಾವಗಡ ತಾಲ್ಲೂಕಿನ ಅರಸಿಕೆರೆಯವರು. ಕಳೆದ ಒಂದೂವರೆ ವರ್ಷದಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅರಸಿಕೆರೆಯಲ್ಲಿರುವ ಮನೆ ಸೇರಿದಂತೆ ಒಟ್ಟು ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯಕ್ಕೂ ಮೀರಿ ಆಸ್ತಿ ಆರೋಪ ಹಿನ್ನೆಲೆ ಇಂದು ಕೊಡುಗು ಎಡಿಸಿ ನಂಜುಂಡೇಗೌಡ ಅವರ ಮನೆ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದರು. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಡಿವೈಎಸ್‌ಪಿ ಪವನ್ ಕುಮಾರ ನೇತೃತ್ವದಲ್ಲಿ ಮೂವರು ಇನ್ಸ್‌ಪೆಕ್ಟರ್ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ದಾಳಿ ನಡೆದಿದೆ. ದಾಳಿ ವೇಳೆ ಹಣ ಲೆಕ್ಕ ಹಾಕಲು ಮಷಿನ್ ತಂದ ಅಧಿಕಾರಿಗಳು. ಮನೆಯಲ್ಲಿ ಭಾರೀ ನಗದು ಹಣ ದೊರೆತಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆ ಕೊಪ್ಪಳ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ ಬನ್ನಿಕೊಪ್ಪ ಅವರ ನಿರ್ಮಿತಿ ಕೇಂದ್ರ, ಮನೆ, ಹುಲಗಿಯಲ್ಲಿನ ಲಾಡ್ಜ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಮಂಗಲಾ ಆಸ್ಪತ್ರೆ ಹಿಂಭಾಗದದಲ್ಲಿರುವ ಮನೆ ಮೇಲೂ ದಾಳಿ ಮಾಡಿದ್ದಾರೆ.. ರಾಯಚೂರು ಲೋಕಾಯುಕ್ತ ಎಸ್ಪಿ ಆರ್ ಎಲ್ ಅರಸಿದ್ದಿ ನೇತೃತ್ವದಲ್ಲಿ ಒಟ್ಟು ಮೂರು ಸ್ಥಳಗಳಲ್ಲಿ ಐದು ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಆರ್.ಎಫ್.ಒ ಸತೀಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವು ವರ್ಷಗಳಿಂದ ಆರ್‌ಎಫ್ ಓ ಆಗಿರುವ ಸತೀಶ್ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ನಡೆದಿದೆ ಪರಿಶೀಲನೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com