ಚಂದ್ರಯಾನ-3 ಮಿಷನ್ ಯಶಸ್ವಿ: ಕರ್ನಾಟಕದ ಗದಗ, ಶಿವಮೊಗ್ಗ ಜಿಲ್ಲೆಯ ವಿಜ್ಞಾನಿಗಳ ಕೊಡುಗೆ ಏನು?
ಚಂದ್ರಯಾನ-3ರ ಯಶಸ್ಸಿಗೆ ಇಡೀ ದೇಶವೇ ಸಂಭ್ರಮದಿಂದ ಕೂಡಿದ್ದರೆ, ಪ್ರೊಪಲ್ಷನ್ ಸಿಸ್ಟಮ್, ಪ್ರೊಪಲ್ಷನ್ ಮಾಡ್ಯೂಲ್‌ನ ಉಪ ಯೋಜನಾ ನಿರ್ದೇಶಕ (ಡಿಪಿಡಿ) ಸಿ. ರಾಮು ಅವರ ತವರೂರಾದ ಶಿವಮೊಗ್ಗ ನಗರವು ಹೆಮ್ಮೆಯಿಂದ ಕುಣಿದಾಡಿದೆ.
Published: 25th August 2023 10:21 AM | Last Updated: 25th August 2023 12:56 PM | A+A A-

ಪ್ರಾತಿನಿಧಿಕ ಚಿತ್ರ: ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಇಳಿಯುವ ಸಮಯದಲ್ಲಿ ಭೂಮಿ ಮತ್ತು ಚಂದ್ರನ ನೋಟ.
ಶಿವಮೊಗ್ಗ: ಚಂದ್ರಯಾನ-3ರ ಯಶಸ್ಸಿಗೆ ಇಡೀ ದೇಶವೇ ಸಂಭ್ರಮದಿಂದ ಕೂಡಿದ್ದರೆ, ಪ್ರೊಪಲ್ಷನ್ ಸಿಸ್ಟಮ್, ಪ್ರೊಪಲ್ಷನ್ ಮಾಡ್ಯೂಲ್‌ನ ಉಪ ಯೋಜನಾ ನಿರ್ದೇಶಕ (ಡಿಪಿಡಿ) ಸಿ. ರಾಮು ಅವರ ತವರೂರಾದ ಶಿವಮೊಗ್ಗ ನಗರವು ಹೆಮ್ಮೆಯಿಂದ ಕುಣಿದಾಡಿದೆ.
ಟಿಎನ್ಐಇ ಜೊತೆಗೆ ಮಾತನಾಡಿದ ರಾಮು, ಇದು ಜೀವಮಾನವಿಡೀ ಸಂಭ್ರಮಿಸಬೇಕಾದ ಕ್ಷಣ ಮತ್ತು ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದರು.
ರಾಮು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಗರದ ಆರ್‌ಸಿ ಶಾಲೆಯಲ್ಲಿ ಮಾಡಿದ್ದಾರೆ. ಅವರು ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಮಾಡಿದರು. ನಂತರ ಅವರು ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮಾಡಿದರು. ನಂತರ 2004 ರಲ್ಲಿ ಅವರು ಇಸ್ರೋಗೆ ಸೇರಿದರು ಮತ್ತು ಸದ್ಯ ಬೆಂಗಳೂರಿನ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್‌ನಲ್ಲಿ ವಿಜ್ಞಾನಿ/ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಾಕೆಟ್ ರಿತು: ಇಸ್ರೋದ ಐತಿಹಾಸಿಕ ಚಂದ್ರಯಾನ-3 ಯೋಜನೆಗೆ ಮಹಿಳಾ ವಿಜ್ಞಾನಿ ಸಾರಥ್ಯ
ಗದಗ: ಚಂದ್ರಯಾನ-3 ಮಿಷನ್‌ಗೆ ಗದಗ ಜಿಲ್ಲೆಯ ಸಂಪರ್ಕವೂ ಇದೆ. ಚಂದ್ರಯಾನದ ವಿಜ್ಞಾನಿಗಳಲ್ಲಿ ಒಬ್ಬರು ಗದಗ ಮೂಲದವರು. 1986ರಲ್ಲಿ ಇಸ್ರೋ ಸೇರಿದ್ದ ಸುಧೀಂದ್ರ ಬಿಂದಗಿ ಅವರು ಕಳೆದ ತಿಂಗಳಷ್ಟೇ ನಿವೃತ್ತರಾಗಿದ್ದರು. ಅವರನ್ನು ಚಂದ್ರಯಾನ-3ರ ಯಶಸ್ಸಿನ ಹಿಂದಿನ ಪ್ರಮುಖ ಎಂಜಿನಿಯರ್‌ಗಳಲ್ಲಿ ಒಬ್ಬರು ಎಂದೇ ಹೇಳಲಾಗುತ್ತದೆ.
ಗದಗದ ವಿಡಿಎಸ್ ಬಾಲಕರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ವಿಜ್ಞಾನಿ ಗುರುವಾರ ತಮ್ಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ಇದನ್ನೂ ಓದಿ: ಚಂದ್ರಯಾನ-3: ಸಂವಹನದಲ್ಲಿ ನಿರ್ಣಾಯಕ ಪಾತ್ರ ವಹಿಸುವ 'ಆಂಪ್ಲಿಫಯರ್' ಅಭಿವೃದ್ಧಿಪಡಿಸಿದ ಕನ್ನಡಿಗ ದಾರುಕೇಶ!
ಬಿಂದಗಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗದಗದಲ್ಲಿ ಕನ್ನಡ ಮಾಧ್ಯಮದಲ್ಲಿ ಮುಗಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗದಗದ ವೀರನಾರಾಯಣ ದೇವಸ್ಥಾನ ಬಡಾವಣೆಯ ನಿವಾಸಿಯಾದ ಬಿಂದಗಿ ಅವರು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಅವರು 1992ರಲ್ಲಿ ಸ್ಯಾಟಲೈಟ್ ಥರ್ಮಲ್ ಡಿಸೈನರ್ ಆಗಿ ಮತ್ತು ಕಮ್ಯುನಿಕೇಶನ್ ಸ್ಯಾಟಲೈಟ್ INSAT-LE ಗೆ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು.