ರಾಜ್ಯದಲ್ಲಿ ಹವಾಮಾನ ವೈಪರೀತ್ಯ: ಮಾವಿನ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ

ಕೆಲವು ದಿನಗಳ ಹಿಂದೆ ತಮಿಳುನಾಡಿಗೆ ಅಪ್ಪಳಿಸಿದ್ದ ಮಿಚಾಂಗ್ ಚಂಡಮಾರುತದ ಕಾರಣದಿಂದಾಗಿ ರಾಜ್ಯದಲ್ಲಿ ಮೋಡ ಕವಿದ ಮತ್ತು ಚಳಿ, ತುಂತುರು ಮಳೆ ಕಂಡುಬಂತು. ಆದರೆ, ಇದೀಗ ಚಳಿಗಾಲದ ಹೊರತಾಗಿಯೂ ತಾಪಮಾನವು ಏರುತ್ತಾ ಸಾಗುತ್ತಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೆಲವು ದಿನಗಳ ಹಿಂದೆ ತಮಿಳುನಾಡಿಗೆ ಅಪ್ಪಳಿಸಿದ್ದ್ ಮಿಚಾಂಗ್ ಚಂಡಮಾರುತದ ಕಾರಣದಿಂದಾಗಿ ರಾಜ್ಯದಲ್ಲಿ ಮೋಡ ಕವಿದ ಮತ್ತು ಚಳಿ, ತುಂತುರು ಮಳೆ ಕಂಡುಬಂತು. ಆದರೆ, ಇದೀಗ ಚಳಿಗಾಲದ ಹೊರತಾಗಿಯೂ ತಾಪಮಾನವು ಏರುತ್ತಾ ಸಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಅಧಿಕಾರಿಗಳ ಪ್ರಕಾರ, ಈ ವರ್ಷ ಹಗಲು ಮತ್ತು ರಾತ್ರಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುತ್ತದೆ. ಅಂದರೆ ಈ ಋತುವಿನಲ್ಲಿ ಕೊರೆಯುವ ಚಳಿಯ ಅನುಭವವಿರುವುದಿಲ್ಲ. ಇದು ಹಣ್ಣುಗಳ ರಾಜ ಮಾವಿನ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಮಾವು ಡಿಸೆಂಬರ್‌ನಲ್ಲಿ ಹೂಬಿಡುತ್ತದೆ.
ಐಎಂಡಿಯ ಬೆಂಗಳೂರಿನ ವಿಜ್ಞಾನಿ ಎ ಪ್ರಸಾದ್ ಟಿಎನ್ಐಇ ಜೊತೆಗೆ ಮಾತನಾಡಿ, ಎಲ್ ನಿನೊ ಪರಿಣಾಮದಿಂದಾಗಿ, ಹಗಲಿನಲ್ಲಿ (ಗರಿಷ್ಠ) ತಾಪಮಾನವು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ (ರಾತ್ರಿ) ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಿರುತ್ತದೆ ಮತ್ತು ಬೆಂಗಳೂರಿನಲ್ಲಿ ಈಗಾಗಲೇ ಆ ಅನುಭವ ಉಂಟಾಗುತ್ತಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಚಳಿಗಾಲವು ಡಿಸೆಂಬರ್ ಅಂತ್ಯದಿಂದ ಪ್ರಾರಂಭವಾಗುತ್ತದೆ. ಆದರೆ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಇದು ಡಿಸೆಂಬರ್ ಮೊದಲ ವಾರದಿಂದಲೇ ಪ್ರಾರಂಭವಾಗಿದೆ. ಕಳೆದ ವರ್ಷ, ಚಳಿಗಾಲ ಡಿಸೆಂಬರ್ ಎರಡನೇ ವಾರದಿಂದ ಪ್ರಾರಂಭವಾಯಿತು. ಈ ವರ್ಷ ಅಷ್ಟಾಗಿ ಚಳಿಯು ಇರುವುದಿಲ್ಲ. ಆದರೆ, ವಾತಾವರಣವು ತಂಪಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ. ಕಳೆದ ವರ್ಷ, ಡಿಸೆಂಬರ್‌ನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ವರ್ಷ, ಇದು ಬಹುಶಃ ಹೆಚ್ಚಿರುತ್ತದೆ. ಲಘು ಚಳಿಗಾಲದ ಅನುಭವ ಕರ್ನಾಟಕದಾದ್ಯಂತ ಇರುತ್ತದೆ.

ಐಎಂಡಿ ದಾಖಲೆಗಳ ಪ್ರಕಾರ, ನಗರದಲ್ಲಿ ಬುಧವಾರ ಗರಿಷ್ಠ 31.2 ಮತ್ತು ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗುರುವಾರ ಗರಿಷ್ಠ 31.2 ಮತ್ತು ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಋತುವಿನಲ್ಲಿ ಬೆಂಗಳೂರಿನ ಸಾಮಾನ್ಯ ತಾಪಮಾನವು ಕ್ರಮವಾಗಿ 26.9 ಮತ್ತು 16.4 ಡಿಗ್ರಿ ಸೆಲ್ಸಿಯಸ್ ಆಗಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಮಾತನಾಡಿ, ಈ ಋತುವಿನಲ್ಲಿ ಇಲ್ಲಿಯವರೆಗೆ ಮಾವಿನ ಹೂವು ಕಡಿಮೆಯಾಗಿದೆ. ಮಾವನ್ನು ಹೆಚ್ಚಾಗಿ ಬೆಳೆಯುವ ಶ್ರೀನಿವಾಸಪುರ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಚಂಡಮಾರುತದ ಪರಿಣಾಮದಿಂದಾಗಿ ಬಂದ ಮಳೆಯು ಹೂಬಿಡುವಿಕೆಯ ಮೇಲೂ ಪರಿಣಾಮ ಬೀರಿದೆ ಎಂದರು.

ಮಾವು ಒಂದು ಗಟ್ಟಿಮುಟ್ಟಾದ ಬೆಳೆ. ಆದರೆ, ಹವಾಮಾನ ಪರಿಸ್ಥಿತಿಗಳಿಗೆ ಸೂಕ್ಷ್ಮವಾಗಿರುತ್ತದೆ. ಉತ್ತಮ ಇಳುವರಿಯನ್ನು ಪಡೆಯಲು ಹೂವುಗಳಲ್ಲಿ ಒತ್ತಡವನ್ನು ಉಂಟುಮಾಡಲು ತಂಪಾದ ಸಂಜೆ ಮತ್ತು ರಾತ್ರಿ ಕಡಿಮೆ ತಾಪಮಾನ ಮತ್ತು ಬೆಚ್ಚಗಿನ ದಿನಗಳು ಬೇಕಾಗುತ್ತದೆ. ಹವಾಮಾನ ವೈಪರೀತ್ಯದ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಮುಂದಿನ ದಿನಗಳಲ್ಲಿ ತಾಂತ್ರಿಕ ಸಮಿತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com