ಎಚ್ಚೆತ್ತ ಸರ್ಕಾರ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸದಂತೆ ಸುತ್ತೋಲೆ ಹೊರಡಿಸಿ ಶಿಕ್ಷಣ ಇಲಾಖೆ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸದಂತೆ ಸುತ್ತೋಲೆ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸದಂತೆ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಬೇಡಿ. ಸ್ವಚ್ಛಗೊಳಿಸಿದರೆ ಎಫ್‌ಐಆ‌ರ್ ದಾಖಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದೆ.

ಕಳೆದ ಕೆಲವು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೆಂಗಳೂರಿನ ಅಂದ್ರಹಳ್ಳಿ ಹಾಗೂ ಶಿವಮೊಗ್ಗದ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳು ಸುದ್ದಿಯಾಗಿದ್ದವು.

ಈ ಎಲ್ಲ ಬೆಳವಣಿಗೆಳ ಬೆನ್ನಲ್ಲೇ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, “ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆ, ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಹಾಗೆಯೇ ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು” ಎಂದು ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

“ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕರ, ಸಿಬ್ಬಂದಿಯ ಕರ್ತವ್ಯ. ಆದರೆ ಈ ಹೊಣೆಗಾರಿಕೆ ಮರೆತು ವಿದ್ಯಾರ್ಥಿಗಳನ್ನು ಸ್ವಚ್ಛತೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಖಂಡನೀಯ” ಎಂದಿದೆ.

“ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಶೌಚಾಲಯಗಳ ಸ್ವಚ್ಛತೆ ಕೈಗೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸರ್ಕಾರಿ ಮಾತ್ರವಲ್ಲದೇ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಸಹ ಇಂತಹ ಯಾವುದೇ ಪ್ರಕರಣಗಳು ಜರುಗಬಾರದು” ಎಂದು ಸ್ಪಷ್ಟಪಡಿಸಿದೆ.

ಅನುದಾನವನ್ನು ಪ್ರಥಮ ಪ್ರಾಶಸ್ತ್ರದಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಂಡು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಸಹಕಾರದೊಂದಿಗೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೇ ವಿದ್ಯಾರ್ಥಿಗಳು ಶಾಲಾ ಶೌಚಾಲಯಗಳಲ್ಲಿ ತೊಡಗಿಸಿಕೊಂಡಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದೆ.

“ಶಾಲೆಗಳಿಗೆ ಕಾಲ-ಕಾಲಕ್ಕೆ ಖುದ್ದು ಭೇಟಿ ನೀಡಿ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾದ ಬಳಕೆಗೆ ಯೋಗ್ಯವಾದ ಶೌಚಾಲಯಗಳು ಲಭ್ಯವಿರುವುದನ್ನು ಪರಿಶೀಲಿಸಬೇಕು. ಶಾಲಾ ಅವಧಿಯಲ್ಲಿ ಈ ಶೌಚಾಲಯಗಳಿಗೆ ಬೀಗ ಹಾಕದೇ ವಿದ್ಯಾರ್ಥಿಗಳ ಉಪಯೋಗಕ್ಕೆ ಅವಕಾಶ ಕಲ್ಪಿಸಿರುವುದನ್ನು ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ” ಎಂದು ಶಾಲಾ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಕೂಡ ಸೂಚಿಸಿದೆ.

ಶಾಲೆಯ ಸಂದರ್ಶನದ ವೇಳೆಯಲ್ಲಿ ಒಂದು ವೇಳೆ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ತಕ್ಷಣವೇ ಕ್ರಮವಹಿಸಲು ಅನುವಾಗುವಂತೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರಿಗೆ(ಆಡಳಿತ) ತಕ್ಷಣ ವರದಿ ಮಾಡಲು ಶಾಲಾ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದೆ.

ಒಂದು ವೇಳೆ ಪ್ರಕರಣಗಳು ಬೆಳಕಿಗೆ ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಇಲಾಖಾ ವತಿಯಿಂದ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು. ಹಾಗೆಯೇ ಎಫ್‌ಐಆ‌ರ್ ಕೂಡ ದಾಖಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com