ಬೆಂಗಳೂರು: ಏರ್‌ಪೋರ್ಟ್ ಶಟಲ್ ಬಸ್ ಬರಲು ವಿಳಂಬ, ತಾಸುಗಟ್ಟಲೆ ಆಕಾಶ ಏರ್ ವಿಮಾನದಲ್ಲೇ ಕುಳಿತ ಪ್ರಯಾಣಿಕರು!
ಮುಂಬೈನಿಂದ ಬೆಂಗಳೂರಿಗೆ ಬಂದ ಆಕಾಶ ಏರ್ ವಿಮಾನ ಬುಧವಾರ ರಾತ್ರಿ ವಿಮಾನ ನಿಲ್ದಾಣ ತಲುಪಿದ ನಂತರ 40 ನಿಮಿಷಗಳಾದರೂ ಶಟಲ್ ಬಸ್ ಟರ್ಮಿನಲ್ ಗೆ ಬಾರದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರು, ತಾಸುಗಟ್ಟಲೇ ತಮ್ಮ ವಿಮಾನದೊಳಗೆ ಇರಬೇಕಾಯಿತು.
Published: 02nd February 2023 10:13 AM | Last Updated: 02nd February 2023 02:17 PM | A+A A-

ಆಕಾಶ ಏರ್ ವಿಮಾನ
ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಬಂದ ಆಕಾಶ ಏರ್ ವಿಮಾನ ಬುಧವಾರ ರಾತ್ರಿ ವಿಮಾನ ನಿಲ್ದಾಣ ತಲುಪಿದ ನಂತರ 40 ನಿಮಿಷಗಳಾದರೂ ಶಟಲ್ ಬಸ್ ಟರ್ಮಿನಲ್ ಗೆ ಬಾರದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರು, ತಾಸುಗಟ್ಟಲೇ ತಮ್ಮ ವಿಮಾನದೊಳಗೆ ಇರಬೇಕಾಯಿತು. ವಿಮಾನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ತಡವಾಗಿ ಹೊರಟ ಕಾರಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) 21 ನಿಮಿಷ ತಡವಾಗಿ ಆಗಮಿಸಿತ್ತು.
ಕ್ಯೂಪಿ 1306 ಸಂಖ್ಯೆಯ ವಿಮಾನ ಮುಂಬೈನಿಂದ ಸಂಜೆ 7 ಗಂಟೆಗೆ ಹೊರಡಬೇಕಿತ್ತು ಆದರೆ ರಾತ್ರಿ 7.25 ಕ್ಕೆ ಹೊರಟು , ನಿಗದಿತ ಸಮಯ 8.50 ಕ್ಕೆ ಬದಲಿಗೆ 9.11 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿತು. 200ಕ್ಕೂ ಹೆಚ್ಚು ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಭರ್ತಿಯಾಗಿತ್ತು ಎಂದು ಹೇಳಲಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬೆಂಗಳೂರಿನ ರಿಶಿತಾ ಸಿಂಗ್, ವಿಮಾನವು ಮುಂಬೈನಿಂದ 25 ನಿಮಿಷಗಳ ತಡವಾಗಿ ಹೊರಟಿತು. ಹಾರಾಟದ ಮಾರ್ಗ ಮಧ್ಯದಲ್ಲಿ ವಿಮಾನಕ್ಕಾಗಿ ಪಾರ್ಕಿಂಗ್ ಬೇ ಬದಲಾವಣೆ ಕುರಿತು ಪ್ರಕಟಣೆ ಮಾಡಲಾಯಿತು. ಬಳಿಕ ಲ್ಯಾಂಡ್ ಆದ ಬಳಿಕವೂ ವಿಮಾನದಲ್ಲಿಯೇ ಕುಳಿತುಕೊಳ್ಳಬೇಕಾಯಿತು ಎಂದು ತಿಳಿಸಿದರು.
ಇದನ್ನೂ ಓದಿ: ಅಮೆರಿಕಕ್ಕೆ ತೆರಳುವಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೆಕ್ಕು ನಾಪತ್ತೆ; ಕಾಣೆಯಾದ 'ಆರೆಂಜ್'ಗಾಗಿ ಕುಟುಂಬದವರ ಹುಡುಕಾಟ
ಶಟಲ್ ಬಸ್ ಎಲ್ಲಿಯೂ ಕಾಣಿಸಲಿಲ್ಲ ಎಂದು ಸಿಂಗ್ ಆರೋಪಿಸಿದ್ದಾರೆ. ಕೋಪಗೊಂಡ ಪ್ರಯಾಣಿಕರು ಕೆಳಗೆ ಇಳಿದು ನಡೆಯಲು ಬಯಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ನನ್ನ ಪಕ್ಕದಲ್ಲಿ ಕುಳಿತಿದ್ದ ಹಿರಿಯ ನಾಗರಿಕರೊಬ್ಬರು ಮಗುವೊಂದನ್ನು ಹಿಡಿದು ಕುಳಿತಿದ್ದರು ಎಂದು ಅವರು ವಿವರಿಸಿದರು. ಪೈಲಟ್ ಹಾಗೂ ವಿಮಾನದ ಸಿಬ್ಬಂದಿ ಸಹಾಯ ಮಾಡಲು ಯತ್ನಿಸಿದರು. ಅಂತಿಮವಾಗಿ ಪ್ರಯಾಣಿಕರು ನಿಗದಿತ ಸಮಯ 8.50ಕ್ಕೆ ಬದಲಾಗಿ ರಾತ್ರಿ 10.10ಕ್ಕೆ ವಿಮಾನದಿಂದ ಹೊರಬಂದರು ಎಂದು ಸಿಂಗ್ ಹೇಳಿದರು.
ಆಕಾಶ ಏರ್ ವಿಮಾನ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ವಿಮಾನ ಸಂಚಾರ ದಟ್ಟಣೆಯಿಂದಾಗಿ ಮರು ಯೋಜನೆಯಲ್ಲಿ ವಿಳಂಬವಾಗಿದೆ. ಪ್ರಯಾಣಿಕರ ನೆಮ್ಮದಿ ಅತ್ಯಂತ ಮಹತ್ವದ್ದಾಗಿದೆ ಮತ್ತು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ ಎಂದು ಏರ್ ಲೈನ್ಸ್ ವಕ್ತಾರರು ತಿಳಿಸಿದ್ದಾರೆ.