ಹೊಸ ಯೋಜನೆಗಳಿಂದ ಹೊಸ ಗುರಿ, ಹೊಸ ಹೆಜ್ಜೆ ಇಡಲಾಗುತ್ತಿದೆ: ಸಿಎಂ ಬೊಮ್ಮಾಯಿ
ಹೊಸ ಯೋಜನೆಗಳಿಂದ ಹೊಸ ಹೆಜ್ಜೆ , ಹೊಸ ಗುರಿಯೊಂದಿಗೆ ಮುಂದೆ ಕೇಂದ್ರ ಸರ್ಕಾರ ಮುಂದೆ ಸಾಗುತ್ತಿದ್ದು, ದೇಶವು ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.
Published: 06th February 2023 12:26 PM | Last Updated: 06th February 2023 06:28 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಹೊಸ ಯೋಜನೆಗಳಿಂದ ಹೊಸ ಹೆಜ್ಜೆ , ಹೊಸ ಗುರಿಯೊಂದಿಗೆ ಮುಂದೆ ಕೇಂದ್ರ ಸರ್ಕಾರ ಮುಂದೆ ಸಾಗುತ್ತಿದ್ದು, ದೇಶವು ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.
ಮಾದಾವರದಲ್ಲಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಧನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಬದುಕಿನ ಹಲವು ಮುಖಗಳು ಬದಲಾಗಿವೆ. ಇದನ್ನು ಗಮನಿಸಿದ ಪ್ರಧಾನಿ ಮೋದಿ ಹೊಸ ಗುರಿಗಳನ್ನು ಕೊಟ್ಟಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು ಮೋದಿ. ‘ನೆಟ್ ಝೀರೊ’ ಎನ್ನುವುದು ಇಡೀ ಜಗತ್ತಿನ ಎದುರು ಇರುವ ದೊಡ್ಡ ಸವಾಲು. 2047ಕ್ಕೆ ಭಾರತವು ಈ ಗುರಿ ಮುಟ್ಟಬೇಕು ಎಂದು ಪ್ರಧಾನಿ ಸೂಚಿಸಿದ್ದರು. ದೇಶವು ಈ ಗುರಿ ಮುಟ್ಟಲು ಕರ್ನಾಟಕವು ತನ್ನ ಕೊಡುಗೆ ನೀಡಲಿದೆ ಎಂದು ಹೇಳಿದರು.
ಕರ್ನಾಟಕವು ಅತಿಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದನಿಸುತ್ತಿದೆ. 15 ಸಾವಿರ ಮೆಗಾವಾಟ್ ವಿದ್ಯುತ್ ಪರಿಸರ ಸ್ನೇಹಿ ವಿಧಾನಗಳಲ್ಲಿ ಉತ್ಪಾದನೆಯಾಗುತ್ತಿದೆ. ಒಟ್ಟು ವಿದ್ಯುತ್ ಉತ್ಪಾದನೆಯ ಅರ್ಧದಷ್ಟು ಪರಿಸರ ಸ್ನೇಹಿ ವಿಧಾನದಲ್ಲಿಯೇ ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸರ ಇಂಧನಗಳ ಹೊಸ ಅವತಾರಗಳಿಗೆ ಕರ್ನಾಟಕ ತೆರೆದುಕೊಳ್ಳಲಿದೆ. ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಗೆ ವಿಶೇಷ ಒತ್ತು ಸಿಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೈಗೆಟುಕುವ ದರದಲ್ಲಿ ಇಂಧನ ಒದಗಿಸಲು ಹಲವು ಕ್ರಮಗಳ ಕೈಗೊಳ್ಳಲಾಗಿದೆ: ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ
ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಮಾದರಿಯ ವಾಹನಗಳು ಪರಿಚಯವಾಗಲಿದೆ. ಎಥೆನಾಲ್ ಬೆರೆತ ಇಂಧನದ ವಿಚಾರದಲ್ಲಿ ಕರ್ನಾಟಕ ಮಹತ್ವದ ಸಾಧನೆ ಮಾಡಿದೆ. ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಅಭಿವೃದ್ಧಿ ಇಂಧನ ಅತ್ಯಗತ್ಯ. ಪ್ರಧಾನಿ ಮೋದಿ ಅವರು ಇಂಧನದಲ್ಲಿ ಬದಲಾವಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅತಿಹೆಚ್ಚು ಶಕ್ತಿ, ಅತಿ ಕಡಿಮೆ ಮಾಲಿನ್ಯ ಎನ್ನುವ ಮೋದಿ ಕನಸನ್ನು ಕರ್ನಾಟಕ ನನಸು ಮಾಡುತ್ತದೆ ಎಂದು ಭರವಸೆ ನೀಡಿದರು.