ಏರೋ ಇಂಡಿಯಾ 2023: 5 ದಿನಗಳ ಕಾಲ ಸಂಚಾರ ಮಾರ್ಗ ಬದಲಾವಣೆ, ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಬಂದ್‌

ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ 17ರವರೆಗೆ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸುಮಗ ಸಂಚಾರಕ್ಕೆ ಅನುವಾಗುವಂತೆ ಪೊಲೀಸರು, ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆಗಳನ್ನು ತಂದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆ.13ರಿಂದ 17ರವರೆಗೆ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸುಮಗ ಸಂಚಾರಕ್ಕೆ ಅನುವಾಗುವಂತೆ ಪೊಲೀಸರು, ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಕೆಲ ಬದಲಾವಣೆಗಳನ್ನು ತಂದಿದ್ದಾರೆ.

ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ನಗರದ ಕೆಲ ರಸ್ತೆಗಳಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ ಲಾರಿ, ಟ್ರಕ್‌, ಖಾಸಗಿ ಬಸ್‌ ಹಾಗೂ ಭಾರೀ ಸರಕು ವಾಹನ ಸಂಚಾರ ನಿಷೇಧಿಸಲಾಗಿದೆ.

ಬಳ್ಳಾರಿ ರಸ್ತೆಯಿಂದ ಮೇಖ್ರಿ ವೃತ್ತದವರೆಗೆ, ಎಂ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೇಟ್‌ವರೆಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಹೊರತುಪಡಿಸಿ, ಲಾರಿ, ಟ್ರಕ್‌ಗಳು, ಖಾಸಗಿ ಬಸ್‌ಗಳು ಮತ್ತು ಎಲ್ಲಾ ರೀತಿಯ ಭಾರೀ ಮತ್ತು ಮಧ್ಯಮ ಸರಕುಗಳ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಗೊರಗುಂಟೆಪಾಳ್ಯದಿಂದ ಹೆಣ್ಣೂರು, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆಯಿಂದ ರೇವಾ ಕಾಲೇಜು ಜಂಕ್ಷನ್, ಬೆಂಗಳೂರು-ತುಮಕೂರು ರಸ್ತೆ, ಗೊರಗುಂಟೆಪಾಳ್ಯ, ಹೆಸರಘಟ್ಟ ಮತ್ತು ಚಿಕ್ಕಬಾಣಾವರದಿಂದ ನಗರದ ಕಡೆಗೆ ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.

ಬೆಂಗಳೂರು-ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ನಾಗೇನಹಳ್ಳಿ ಗೇಟ್‌ನಿಂದ ಆಂಬಿಯನ್ಸ್ ಡಾಬಾ ಕ್ರಾಸ್‌ವರೆಗೆ, ಮೇಖ್ರಿ ವೃತ್ತದಿಂದ ಬೆಂಗಳೂರು-ಬಳ್ಳಾರಿ ರಸ್ತೆಯ ದೇವನಹಳ್ಳಿವರೆಗೆ, ಗೊರಗುಂಟೆಪಾಳ್ಯದಿಂದ ಹೆಣ್ಣೂರು ಜಂಕ್ಷನ್‌ವರೆಗೆ, ರೇವಾ ಕಾಲೇಜು ಜಂಕ್ಷನ್‌ನಿಂದ ಬಾಗಲೂರು ಕ್ರಾಸ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಬಾಗಲೂರು ಮುಖ್ಯರಸ್ತೆ, ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯರಸ್ತೆ ಮೂಲಕ ಬಾಗಲೂರು ಜಂಕ್ಷನ್‌ವರೆಗೆ ಸಂಚಾರ ನಿಷೇಧಿಸಲಾಗಿದೆ. ಪಾಸ್ ಇಲ್ಲದ ಖಾಸಗಿ ವಾಹನಗಳು ತಮ್ಮ ವಾಹನಗಳನ್ನು ಜಿಕೆವಿಕೆ ಕ್ಯಾಂಪಸ್ ಪಾರ್ಕಿಂಗ್ ಸ್ಥಳದಲ್ಲಿ ಅಥವಾ ಜಕ್ಕೂರಿನಲ್ಲಿ ನಿಲ್ಲಿಸಲು ಮತ್ತು ಬಿಎಂಟಿಸಿ ಬಸ್‌ಗಳ ಮೂಲಕ ಸ್ಥಳಕ್ಕೆ ತಲುಪಲು ಸೂಚಿಸಲಾಗಿದೆ.

ವಿಮಾನ ನಿಲ್ದಾಣಕ್ಕೆ ತೆರಳಲು ಪರ್ಯಾಯ ಮಾರ್ಗ...
ಬೆಂಗಳೂರು ಪೂರ್ವ ಭಾಗದಿಂದ ಕೆಐಎಗೆ: ಕೆಆರ್ ಪುರಂ-ಹೆಣ್ಣೂರು ಕ್ರಾಸ್-ಬಾಗಲೂರು-ಮೈಲನಹಳ್ಳಿ-ಬೇಗೂರು ಹಿಂದಿನ ಗೇಟ್ ಮತ್ತು ಕೆಐಎಎಲ್ ತಲುಪುತ್ತದೆ.

ಬೆಂಗಳೂರು ಪಶ್ಚಿಮ ಭಾಗದಿಂದ ಕೆಐಎಎಲ್‌ಗೆ: ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ-ಗಂಗಮ್ಮ ವೃತ್ತ-ಮದರ್ ಡೈರಿ-ಉನ್ನಿಕೃಷ್ಣನ್ ಜಂಕ್ಷನ್-ದೊಡ್ಡಬಳ್ಳಾಪುರ ರಸ್ತೆ-ರಾಜನಕುಂಟೆ-ಅಡ್ಡಿಗಾನಹಳ್ಳಿ-ಎಂವಿಐಟಿ-ವಿದ್ಯಾನಗರ ಕ್ರಾಸ್-ಕೆಐಎಎಲ್.

ಬೆಂಗಳೂರು ದಕ್ಷಿಣದಿಂದ ಕೆಐಎಎಲ್‌ಗೆ: ಮೈಸೂರು ರಸ್ತೆ-ನಾಯಂಡಹಳ್ಳಿ-ಚಂದ್ರಾಲೇಔಟ್-ಗೊರಗುಂಟೆಪಾಳ್ಯ-ಬಿಇಎಲ್ ವೃತ್ತ-ಗಂಗಮ್ಮ ವೃತ್ತ-ಮದರ್ ಡೈರಿ-ಉನ್ನಿಕೃಷ್ಣನ್ ಜಂಕ್ಷನ್-ದೊಡ್ಡಬಳ್ಳಾಪುರ ರಸ್ತೆ-ರಾಜನುಕುಂಟೆ-ಅಡ್ಡಿಗಾನಹಳ್ಳಿ-ಎಂವಿಐಟಿ ಕ್ರಾಸ್-ವಿದ್ಯಾನಗರ ಕ್ರಾಸ್ ಮೂಲಕ ವಿಮಾನ ನಿಲ್ದಾಣ ತಲುಪಬಹುದು.

ಮಿಟ್ಟಗಾನಹಳ್ಳಿ ಕಸ ವಿಲೇವಾರಿ ಬಂದ್‌
ವೈಮಾನಿತ ಪ್ರದರ್ಶನ ಹಿನ್ನೆಲೆಯಲ್ಲಿ ಫೆ.18ವರೆಗೆ ಮಿಟ್ಟಗಾನಹಳ್ಳಿಯ ಭೂಭರ್ತಿ ಕೇಂದ್ರಕ್ಕೆ ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡದಂತೆ ಬಿಬಿಎಂಪಿ ಸೂಚನೆ ನೀಡಿದೆ.

ಈ ಸಂಬಂಧ ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಐದು ದಿನ ಏರ್‌ಕ್ರಾಫ್ಟ್, ಫೈಟರ್‌ ಜೆಟ್‌, ಹೆಲಿಕಾಪ್ಟರ್‌ಗಳ ಹಾರಾಟ ಹೆಚ್ಚಾಗಿರಲಿದೆ. ಮಿಟ್ಟಗಾನಹಳ್ಳಿಯ ಭೂಭರ್ತಿ ಕೇಂದ್ರಕ್ಕೆ ಕಸ ವಿಲೇವಾರಿ ಮಾಡುವುದರಿಂದ ಹಕ್ಕಿ-ಪಕ್ಷಿಗಳು ಆಗಮಿಸುತ್ತವೆ. ಇದರಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ, ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರಕ್ಕೆ ತ್ಯಾಜ್ಯ ವಿಲೇವಾರಿ ಮಾಡದಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.

ಮಿಟ್ಟಗಾನಹಳ್ಳಿ ಭೂಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದ ತ್ಯಾಜ್ಯವನ್ನು ಬೈಯಪ್ಪನಹಳ್ಳಿಯಲ್ಲಿ ನೂತನವಾಗಿ ತೆರೆಯಲಾಗಿರುವ ಭೂಭರ್ತಿ ಕೇಂದ್ರದಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಈಗಾಗಲೇ ಯಲಹಂಕ ವೈಮಾನಿಕ ನೆಲೆ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com