ರಾಜ್ಯ ಸರ್ಕಾರದ್ದು ದೂರದೃಷ್ಟಿ ಇಲ್ಲದ, ಜನ ವಿರೋಧಿ ಬಜೆಟ್: ಬಿ.ಕೆ.ಹರಿಪ್ರಸಾದ್

ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ದೂರದೃಷ್ಟಿಯಿಲ್ಲದ, ಜನ ವಿರೋಧಿ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.
ಬಿಕೆ. ಹರಿಪ್ರಸಾದ್
ಬಿಕೆ. ಹರಿಪ್ರಸಾದ್

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ದೂರದೃಷ್ಟಿಯಿಲ್ಲದ, ಜನ ವಿರೋಧಿ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

ಗುರುವಾರ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಹರಿಪ್ರಸಾದ್ ಅವರು, 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. "ಡಬಲ್ ಇಂಜಿನ್ ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿತು. ಆದರೆ, ದುರಾದೃಷ್ಟಕರ ಸಂಗತಿ ಎಂದರೆ, ರೈತರ ಆತ್ಮಹತ್ಯೆ ಸಂಖ್ಯೆಯನ್ನು ದ್ವಿಗುಣಗೊಳಿಸಿರುವುದಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಸಂಸದರೊಬ್ಬರು ಕೃಷಿ ಸಾಲ ಮನ್ನಾ ಮಾಡಿರುವುದು ವ್ಯರ್ಥ ಎಂದು ಹೇಳಿದ್ದರು. ಈ ಹೇಳಿಕೆ ಸರ್ಕಾರಕ್ಕೆ ರೈತರಿ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಮಂಡಿಸಿದ್ದು ಜನಪರ ಬಜೆಟ್ ಅಲ್ಲ. ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂಪಾಯಿ ದಾಟಿದ್ದು, ಡೀಸೆಲ್ ಕೂಡ ಶೀಘ್ರದಲ್ಲೇ ಅದೇ ಬೆಲೆಗೆ ತಲುಪಲಿದೆ. ಬಡವರಿಗೆ ಅನ್ನ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ ನಡೆಸಲು ಸರ್ಕಾರದ ಬಳಿ ಹಣವಿಲ್ಲ. ಈಗ ನಮ್ಮ ಚಿಕಿತ್ಸಾಲಯ ಆರಂಭಿಸಿದ್ದರೂ ಅಲ್ಲಿ ಔಷಧಗಳಿಲ್ಲ. ಇದು ಸರ್ಕಾರದ ಆದ್ಯತೆಗಳನ್ನು ತೋರಿಸುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಇವಿ ಹಬ್ ಆರಂಭಿಸಲು ಓಲಾ ತಮಿಳುನಾಡು ರಾಜ್ಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಉಲ್ಲೇಖಿಸಿದ ಅವರು, ಬೆಂಗಳೂರನ್ನು ಅವಕಾಶಗಳ ನಗರ ಎಂದು ಕರೆಯಲಾಗುತ್ತದೆ ಆದರೆ ಸರ್ಕಾರದ ನೀತಿಗಳಿಂದಾಗಿ ನಗರ ಈ ಹೆಗ್ಗಳಿಕೆಯನ್ನು ಕಳೆದುಕೊಳ್ಳುತ್ತಿದೆ, ಇದು ನಿರುದ್ಯೋಗಕ್ಕೂ ಕಾರಣವಾಗುತ್ತದೆ ಎಂದು ಹೇಳಿದರು.

''ಚುನಾವಣೆಗೂ ಮುನ್ನ ಸಿಎಂ ಬಜೆಟ್‌ ಮಂಡಿಸಿದ್ದಾರೆ. ಆದರೆ, ಈ ಬಜೆಟ್ ನಲ್ಲಿ ಯಾವುದೇ ದೂರದೃಷ್ಟಿಗಳಿಲ್ಲ. ರೈತರು, ಕಾರ್ಮಿಕರು ಮತ್ತು ಯುವಕರ ವಿರುದ್ಧದ ಬಜೆಟ್ ಇದಾಗಿದೆ. ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ಅಥವಾ ಹಣದುಬ್ಬರವನ್ನು ನಿಭಾಯಿಸುವ ಯೋಜನೆಗಳ ಬಗ್ಗೆ ಯಾವುದೇ ಉಲ್ಲೇಖವೂ ಬಜೆಟ್ ನಲ್ಲಿ ಇಲ್ಲ ಎಂದರು.

ಚರ್ಚೆ ವೇಳೆ ಹರಿಪ್ರಸಾದ್ ಅರು ರನ್ನಿಂಗ್ ಕಾಮೆಂಟರಿ ಎಂಬ ಪದ ಬಳಸಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದಕ್ಕೂ ಕಾರಣವಾಯಿತು.
 
‘ರನ್ನಿಂಗ್ ಕಾಮೆಂಟರಿ’ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ನೀವು ನಿರಂತರವಾಗಿ ಸುಳ್ಳುಗಳನ್ನೇ ಹೇಳಿದರೆ ಕೇಳಿಕೊಂಡು ಕೂರಲು ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

‘ವಿಧಾನಸೌಧದಲ್ಲೇ ರೂ. 10 ಲಕ್ಷ ಪಡೆಯಲು ಹೊರಟವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸುಳ್ಳು ನಿಮ್ಮ ಮನೆಯ ದೇವರು ಎನ್ನುವುದು ಎಲ್ಲರಿಗೂ ಗೊತ್ತು’ ಎಂದು ಹರಿಪ್ರಸಾದ್ ಹರಿಹಾಯ್ದರು. ಏಕ ವಚನಗಳ ಬಳಕೆಯೂ ಆಯಿತು. ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಕೆಲ ಸಮಯ ವಾಗ್ವಾದ ನಡೆಸಿದರು.

ನಂತರ ಮಾತು ಮುಂದುವರಿಸಿದ ಹರಿಪ್ರಸಾದ್, ಡಬಲ್‌ ಎಂಜಿನ್‌ ಸರ್ಕಾರವಿದ್ದರೂ, ತಾರತಮ್ಯ ಎದ್ದುಕಾಣುತ್ತಿದೆ. ರೂ.1,91,573 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ರಾಜ್ಯಕ್ಕೆ ಶೇ 42ರಷ್ಟು ವಾಪಸ್‌ ನೀಡಬೇಕು. ಆದರೆ, ಸಿಕ್ಕಿರುವುದು ರೂ.29 ಸಾವಿರ ಕೋಟಿ ಮಾತ್ರ. ಇತರೆ ರಾಜ್ಯಗಳಿಗೆ ಸಾಕಷ್ಟು ನೆರವು ನೀಡಿರುವ ಕೇಂದ್ರ ಸರ್ಕಾರ, ರಾಜ್ಯದ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಹಣಕಾಸಿನ ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವ ಕುರಿತು ಸ್ಪಷ್ಟತೆಯೇ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com