ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನವನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ ಎಎಪಿ

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವುದನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ಘಟಕ ತೀವ್ರವಾಗಿ ಖಂಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವುದನ್ನು ಆಮ್ ಆದ್ಮಿ ಪಕ್ಷದ (ಎಎಪಿ) ಕರ್ನಾಟಕ ಘಟಕ ತೀವ್ರವಾಗಿ ಖಂಡಿಸಿದೆ.

ಸೋಮವಾರ ಇಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ವಕ್ತಾರ ಪೃಥ್ವಿ ರೆಡ್ಡಿ, 'ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ತಪ್ಪಿಲ್ಲ, ಹೊಸ ಅಬಕಾರಿ ನೀತಿ ದೆಹಲಿಯಲ್ಲಿ ಇನ್ನೂ ಜಾರಿಯಾಗಬೇಕಿದೆ ಎಂಬುದನ್ನು ಇಲ್ಲಿ ಗಮನಿಸಬೇಕು ಮತ್ತು ಅದೇ ನೀತಿಯು ಇತರೆ ಅನೇಕ ರಾಜ್ಯಗಳಲ್ಲಿ ಜಾರಿಯಲ್ಲಿದೆ ಎಂಬುದನ್ನು ಇಲ್ಲಿ ಗಮನಿಸಬೇಕು' ಎಂದಿದ್ದಾರೆ.

'ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸುಮಾರು ಒಂದು ವರ್ಷದಿಂದ ಸಿಸೋಡಿಯಾ ಅವರನ್ನು ಗುರಿಯಾಗಿಸಿಕೊಂಡಿದ್ದರೂ, ಆರೋಪಗಳನ್ನು ರುಜುಪಡಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಯಾವುದೇ ನಗದು ಅಥವಾ ಯಾವುದೇ ಅಕ್ರಮ ದಾಖಲೆಗಳು ಪತ್ತೆಯಾಗಿಲ್ಲ. ಬಿಜೆಪಿಯನ್ನು ಎದುರಿಸುವ ಶಕ್ತಿ ಎಎಪಿಗೆ ಮಾತ್ರ ಇದೆ ಎಂಬುದನ್ನು ಅರಿತುಕೊಂಡು, ನಂತರ ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಕಾರಣ, ಅದು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ರೀತಿ ತೊಂದರೆ ಸೃಷ್ಟಿಸುತ್ತಿದೆ' ಎಂದು ಹೇಳಿದರು.

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಎಎಪಿ ವಿಜೃಂಭಿಸುತ್ತಿದೆ. ಜನರು ಎಎಪಿ ಪರವಾಗಿರುವುದನ್ನು ಬಿಜೆಪಿ ಸಹಿಸುವುದಿಲ್ಲ. ಮನೀಶ್ ಸಿಸೋಡಿಯಾ ಅವರು ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಬಂದಾಗ ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಆತಂಕದಲ್ಲಿ ಕೇಂದ್ರ ಸರ್ಕಾರ ಸಿಬಿಐ ಮೂಲಕ ಬಂಧಿಸಿದೆ ಎಂದು ದೂರಿದರು.

ನಾವು ಬಂಧನಕ್ಕೆ ಮಾತ್ರ ಸಿದ್ಧರಲ್ಲ, ದೇಶ ಮತ್ತು ಜನರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ. ರಾಷ್ಟ್ರ ರಾಜಧಾನಿಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಎಎಪಿ ತಂದ ಶಿಕ್ಷಣದಲ್ಲಿನ ಕ್ರಾಂತಿಯನ್ನು ಹಲವಾರು ವಿದೇಶಿ ರಾಷ್ಟ್ರಗಳು ಸಹ ಶ್ಲಾಘಿಸಿವೆ. ಆದರೆ, ಬಿಜೆಪಿಗೆ ಇದನ್ನು ಸಹಿಸಲಾಗುತ್ತಿಲ್ಲ. ಮನೀಶ್ ಸಿಸೋಡಿಯಾ ಅವರು ಶಿಕ್ಷಣ ಸಚಿವರಾಗಿ 25,000 ಅತ್ಯಾಧುನಿಕ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಸುಮಾರು 20 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ವಕ್ತಾರರು ಹೇಳಿದರು.

'ಮನೀಶ್ ಸಿಸೋಡಿಯಾ ಅವರಂತಹವರ ವಿರುದ್ಧ ಬಿಜೆಪಿ ಇಂತಹ ಕೀಳುಮಟ್ಟದ ತಂತ್ರಗಾರಿಕೆ ನಡೆಸುತ್ತಿರುವುದು ಖಂಡನೀಯ. ಬಿಜೆಪಿ ಅಡ್ಡಿಪಡಿಸಿದರೆ ಆಮ್ ಆದ್ಮಿ ಪಕ್ಷವು ಹೇಗೆ ಒಂದು ಗಿಡ ಚಿಗುರೊಡೆಯುತ್ತದೋ, ಹಾಗೆಯೇ ವೇಗವಾಗಿ ಬೆಳೆಯುತ್ತದೆ' ಎಂದು ರೆಡ್ಡಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com