ಓಲಾ, ಊಬರ್ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ; ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಆ್ಯಪ್‌ ಆಧಾರಿತ ಪ್ರಯಾಣ ಸೇವೆ ಒದಗಿಸುತ್ತಿರುವ ಓಲಾ, ಉಬರ್‌ (Uber, Ola) ಕಂಪನಿಗಳ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ ನಿಗದಿಪಡಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ (Karnataka High Court) ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 
ಓಲಾ-ಉಬರ್ ಆಟೋ (ಸಂಗ್ರಹ ಚಿತ್ರ)
ಓಲಾ-ಉಬರ್ ಆಟೋ (ಸಂಗ್ರಹ ಚಿತ್ರ)

ಬೆಂಗಳೂರು: ಆ್ಯಪ್‌ ಆಧಾರಿತ ಪ್ರಯಾಣ ಸೇವೆ ಒದಗಿಸುತ್ತಿರುವ ಓಲಾ, ಉಬರ್‌ (Uber, Ola) ಕಂಪನಿಗಳ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ ನಿಗದಿಪಡಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ (Karnataka High Court) ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಮೋಟರ್‌ ವಾಹನ ಅಗ್ರಿಗೇಟರ್ಸ್‌ -2020 ಪ್ರಕಾರ ದರವನ್ನು ಶೇ.50ರಿಂದ ಶೇ.150ರಷ್ಟು ಏರಿಕೆ ಮಾಡಬಹುದು. ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನೇ ಬಂಡವಾಳವಾಗಿಟ್ಟುಕೊಂಡು ಓಲಾ, ಉಬರ್‌ ಕಂಪನಿಗಳು ಪ್ರಯಾಣಿಕರ ಸುಲಿಗೆಗೆ ನಿಂತಿದ್ದವು. ಆದರೆ, ಇದಕ್ಕೆ ರಾಜ್ಯ ಸರ್ಕಾರ ಬ್ರೇಕ್​ ಹಾಕಿ ಶೇ.5ರಷ್ಟು ಮಾತ್ರ ಸೇವಾಶುಲ್ಕ ನಿಗದಿಪಡಿಸಿತ್ತು. ಇದರ ವಿರುದ್ಧ ಓಲಾ, ಉಬರ್‌ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.

ಇದೀಗ ಈ ಪ್ರಕರಣ ವಿಚಾರಣೆ ಸಂಬಂಧ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಏನಿದು ಪ್ರಕರಣ?
ಕೇಂದ್ರ ಸರ್ಕಾರದ ಮೋಟರ್‌ ವಾಹನ ಅಗ್ರಿಗೇಟರ್ಸ್‌ ಮಾರ್ಗಸೂಚಿ-2020’ರಂತೆ ಅಗ್ರಿಗೇಟರ್ಸ್‌ಗಳಿಗೆ ಶೇ.50 ರಿಂದ ಶೇ.150ರಷ್ಟು ದರ ಏರಿಳಿಕೆ ಮಾಡುವ ಅವಕಾಶವಿದೆ. ಇದನ್ನೇ ಮುಂದಿಟ್ಟುಕೊಂಡಿರುವ ಓಲಾ, ಉಬರ್‌ ಸೇರಿದಂತೆ ಆಗ್ರಿಗೇಟರ್ಸ್‌ ಆ್ಯಪ್‌ಗಳು ಆಟೋ ರಿಕ್ಷಾ, ಕಾರುಗಳ ದರವನ್ನು ಸಾಕಷ್ಟುಏರಿಕೆ ಮಾಡಿ ಪ್ರಯಾಣಿಕರಿಂದ ಹೆಚ್ಚಿನ ದರವನ್ನು ಪಡೆಯುತ್ತಿದ್ದವು. ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ-2016’ರ ಕಾಯ್ದೆಯಡಿ ಈ ಆ್ಯಪ್‌ಗಳು ಅನುಮತಿ ಪಡೆದಿದ್ದರೂ, ಕೇಂದ್ರದ ನೂತನ ಮಾರ್ಗಸೂಚಿ ತೋರಿಸಿ ಪ್ರಯಾಣಿಕರ ಸುಲಿಗೆ ಮಾಡುತ್ತಿದ್ದವು.

ಮಾರ್ಗಸೂಚಿಯನ್ನೇ ಬಂಡವಾಳ ಮಾಡಿಕೊಂಡು ವಸೂಲಿ
ಆಟೋ ಸೇವೆ ನೀಡುತ್ತಿದ್ದ ಓಲಾ, ಉಬರ್‌ ಕಂಪನಿಗಳು 2 ಕಿ. ಮೀ. ಗೆ ಪ್ರಯಾಣಿಕರಿಂದ ಕನಿಷ್ಠ 100 ರೂ. ದರ ವಸೂಲಿ ಮಾಡುತ್ತಿದ್ದವು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪರಿಣಾಮ, ಸಾರಿಗೆ ಇಲಾಖೆಯು ಓಲಾ, ಊಬರ್‌ ಕಂಪನಿಗಳ ಆಟೋ ಸೇವೆ ಸ್ಥಗಿತಕ್ಕೆ ಆದೇಶಿಸಿತು. ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿತು. ಕಂಪನಿಗಳೊಂದಿಗೆ ಚರ್ಚಿಸಿ ದರ ನಿಗದಿ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ ಸಾರಿಗೆ ಇಲಾಖೆ ಓಲಾ, ಊಬರ್​ ಆಟೋಗಳಿಗೆ ದರ ನಿಗದಿ ಪಡಿಸಿತ್ತು. ಕನಿಷ್ಠ ದರ ​ ಜತೆಗೆ ಶೇ.5ರಷ್ಟು ದರ ನಿಗದಿ ಮಾಡಿದೆ. ಕನಿಷ್ಠ ದರ 30, 40, 60 ರೂ. ಇದ್ದರೆ ಇದೀಗ ಜತೆಗೆ ಶೇ.5ರಷ್ಟು ಹೆಚ್ಚಳ ಮಾಡಿತ್ತು.

ಕೋರ್ಟ್ ಮೆಟ್ಟಿಲೇರಿದ್ದ ಸಂಸ್ಥೆಗಳು
ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಓಲಾ ಹಾಗೂ ಉಬರ್‌ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುತ್ತೇವೆ. ಇದರಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸುತ್ತಿದೆ, ಹಾಗೇ ಕೇಂದ್ರದ ಸಾರಿಗೆ ಇಲಾಖೆಯ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎನ್ನುವುದು ಓಲಾ, ಊಬರ್​ನ ವಾದಗಿದೆ. ಇದೀಗ ಇದಕ್ಕೆ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಶೇ. 5ರಷ್ಟು ಸೇವಾಶುಲ್ಕ ನಿಗದಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com