ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಗುರುವಾರ ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರಗತಿ ಪರಿಶೀಲನೆ ನಡೆಸಿದರು.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ರಾಮನಗರ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಿದರು.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ರಾಮನಗರ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಿದರು.

ಬೆಂಗಳೂರು: ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಗುರುವಾರ ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರಗತಿ ಪರಿಶೀಲನೆ ನಡೆಸಿದರು.

ಬೆಂಗಳೂರು-ಚೆನ್ನೈ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕೋಲಾರದ ವಡಗಾನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, 2024ರ ಜನವರಿಯೊಳಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು- ಚೆನೈ ಹೈವೇ ಕರ್ನಾಟಕದಲ್ಲಿ 3 ಪ್ಯಾಕೇಜ್ ಇದ್ದು, ಈ ಪೂರ್ಣ ಎಕ್ಸ್‌ಪ್ರೆಸ್ ವೇಯನ್ನು ಸುಮಾರು 1700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಹಾದು ಹೋಗುವ ಹೆದ್ದಾರಿ ಉದ್ದ 71 ಕಿ.ಮೀ ಇದ್ದು, ಇದಕ್ಕಾಗಿ 5096 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕರ್ನಾಟಕ ಭಾಗದಲ್ಲಿನ ಹೆದ್ದಾರಿಯ ಕಾಮಗಾರಿ ಪೈಕಿ ಈಗಾಗಲೇ ಶೇ.34ರಷ್ಟು ಪೂರ್ಣಗೊಂಡಿದೆ. ಈ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೊಂಡ ಬಳಿಕ, ಬೆಂಗಳೂರಿನಿಂದ 2.15 ಗಂಟೆಯಲ್ಲಿ ಚೆನ್ನೈಗೆ ಹೋಗಬಹುದು. ಲಾಜಿಸ್ಟಿಕ್ ವೆಚ್ಚ ಉಳಿಸಲು ಇದರಿಂದ ಸಾಧ್ಯವಾಗಲಿದೆ. ದೇಶದಲ್ಲಿ ಸದ್ಯ ಲಾಜಿಸ್ಟಿಕ್ ವೆಚ್ಚ ಶೇ. 16ರಷ್ಟಿದೆ. ಹಾಗಾಗಿ, ಎಕ್ಸ್‌ಪ್ರೆಸ್ ವೇಯಿಂದ ಶೇ.4ರಷ್ಟು ವೆಚ್ಚವನ್ನು ತಗ್ಗಿಸಬಹುದಾಗಿದೆ ಎಂದು ತಿಳಿಸಿದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯನ್ನು ಅಮೃತ ಮಹೋತ್ಸವ ಪಕ್ಷಿಗಳ ಗಾರ್ಡನ್ ಮಾಡಲಿದ್ದೇವೆ. ಜೊತೆಗೇ ಅಮೃತ್ ಸರೋವರ ಕೂಡ ನಿರ್ಮಾಣ ಮಾಡಲಾಗುವುದು ಎಂದರು.

ಬನ್ನೇರುಘಟ್ಟ ವಿಚಾರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗೆ ಮಾತನಾಡುತ್ತೇನೆ, ಈಗಾಗಲೇ ಮುಂಬೈನಲ್ಲಿ ಅರಣ್ಯ ಅಂಡರ್ ಪಾಸ್ ಇದೆ. ಒಂದೊಮ್ಮೆ ಸಾಧ್ಯವಾದರೆ, ಕರ್ನಾಟಕದಲ್ಲೂ ಅದೇ ರೀತಿಯ ಅರಣ್ಯ ಅಂಡರ್ ಪಾಸ್ ಮಾಡಲು ಮುಂದಾಗಲಿದ್ದೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರದಿಂದ ಹಲವಾರು‌ ಹಸಿರು ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಬೆಂಗಳೂರಿನ ಸಾಲಿಡ್ ವೇಸ್ಟ್ ಅನ್ನು ರಸ್ತೆಗೆ ಬಳಸಬಹುದಾ ಎಂಬ ಆಲೋಚನೆ ಇದೆ. ಮಿರೈ ಎಂಬ ಕಾರು ಗ್ರೀನ್ ಹೈಡ್ರೋಜನ್ ನಲ್ಲಿ ಸಂಚರಿಸುತ್ತೆ. ಆರ್ಗಾನಿಕ್ ವೇಸ್ಟ್, ಬಯೋಮಾಸ್‌ನಿಂದ ಗ್ರೀನ್ ಹೈಡ್ರೋಜನ್ ಉತ್ಪಾದಿಸಬಹುದು ಎಂದು ಹೇಳಿದರು.

ಹೊಸ ಎಕ್ಸ್‌ಪ್ರೆಸ್‌ ವೇ ಮಾರ್ಗದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಿದ್ದೇವೆ. ಮಾರ್ಚ್ 2024ರಲ್ಲಿ ಬೆಂಗಳೂರು ಚೆನೈ ವಿಮಾನ‌ ಬಳಕೆ ಕಡಿಮೆ ಆಗುತ್ತೆ. ಜನರು ವಾಹನಗಳಿಗೆ ಹಾಕ್ತಿದ್ದ ಇಂಧನ ವೆಚ್ಚ ಉಳಿಯಲಿದೆ. ಜನಸಾಮಾನ್ಯರು ಕೂಡ ಎನ್'ಹೆಚ್ಎಐ ಇನ್ವಿಡ್ ಬಾಂಡ್‌ನಲ್ಲಿ‌ ಹಣ ಹೂಡಿಕೆ‌ ಮಾಡಲಿ. ನಾವು ತಿಂಗಳಿಗೆ ೮ ಪರ್ಸೆಂಟ್ ರಿಟರ್ನ್ ನೀಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ, ಬೆಂಗಳೂರು ನಗರದಲ್ಲಿ ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ತಿಳಿಸಿದ ಅವರು, ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮಾಡಲಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ಪೀಣ್ಯ ಫ್ಲೈ ಓವರ್ ವಿಚಾರ ಕುರಿತು ಮಾತನಾಡಿ, ಈಗಾಗಲೇ ಬಿಡ್ ಬಂದಿದ್ದು, ವ್ಯವಹಾರವನ್ನ ಪೂರ್ತಿ ಮಾಡಲಾಗುವುದು. ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ
ಈ ನಡುವೆ ಬೆಂಗಳೂರಿನಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹುದಾದ ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕಾಮಗಾರಿಯನ್ನು ಕೇಂದ್ರ ಸಚಿವರು ಪರಿಶೀಲನೆ ನಡೆಸಿದರು.

ಈ ವೇಳೆ ನಿತಿನ್ ಗಡ್ಕರಿಗೆ ಸಂಸದ ಪ್ರತಾಪ್ ಸಿಂಹ, ಸಚಿವರಾದ ಸಿ.ಸಿ ಪಾಟೀಲ್ ಸೇರಿದಂತೆ ಕೆಲ ಸಚಿವರು ಸಾಥ್ ನೀಡಿದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ವೈಮಾನಿಕ ಸಮೀಕ್ಷೆ
ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಕರ್ನಾಟಕದ ಪಿಡಬ್ಲುಡಿ ಸಚಿವ ಸಿಸಿ ಪಾಟೀಲ್ ಅವರೊಂದಿಗೆ ನಿತಿನ್ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯದ ವೈಮಾನಿಕ ಪರಿಶೀಲನೆ ನಡೆಸಿದರು.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ನಾವು 16,730 ಕೋಟಿ ರೂ. ಮೌಲ್ಯದ ಈ 262 ಕಿಮೀ ಉದ್ದದ 8 ಲೇನ್ ಹೆದ್ದಾರಿಯನ್ನು ನಿರ್ಮಿಸುತ್ತಿದ್ದೇವೆ. ಇದನ್ನು ಗಂಟೆಗೆ 120 ಕಿಮೀ ವೇಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರ 300 ಕಿಮೀ.ಯಿಂದ 262 ಕಿಮೀಗೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com