ಅಯೋಧ್ಯೆ ಮಾದರಿಯಲ್ಲಿ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ; ಡಿಸಿಗೆ ಧಾರ್ಮಿಕ ದತ್ತಿ ಇಲಾಖೆ ಪತ್ರ
ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮಾದರಿಯಲ್ಲಿಯೇ ರಾಜ್ಯದ ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ರಾಮನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಇಲಾಖೆಗೆ ಸೇರಿದ 19 ಎಕರೆ ಜಾಗದಲ್ಲಿ ಯೋಜನೆ ಅನುಷ್ಠಾನಗೊಳಿಸುವ ಕುರಿತು ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಲು ಅಭಿವೃದ್ಧಿ ಸಮಿತಿ ರಚಿಸಿ ಕಾರ್ಯಸಾಧ್ಯತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಜನವರಿ 3ರಂದು ಪತ್ರದ ಮೂಲಕ ಕೋರಲಾಗಿದೆ.
ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯರು ಮತ್ತು ಭಕ್ತರಿಂದ ಬೇಡಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಐಟಿ ಮತ್ತು ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆದರೆ, ಈ ಸ್ಥಳವು ದೇಶದ ಪ್ರಮುಖ ರಣಹದ್ದು ಸಂರಕ್ಷಿತ ಪ್ರದೇಶವಾಗಿದ್ದು, ದೇವಾಲಯದ ನಿರ್ಮಾಣದ ಪ್ರಾರಂಭಕ್ಕೆ ಅಡೆತಡೆ ಎದುರಾಗಿದೆ. ಏಕೆಂದರೆ, ಇದಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಅಗತ್ಯವಿರುತ್ತದೆ ಎಂದು ಮೂಲಗಳು ಟಿಎನ್ಐಇಗೆ ತಿಳಿಸಿವೆ.
'ಇದು ಮೂರು ಜಾತಿಯ ರಣಹದ್ದುಗಳ ಆವಾಸಸ್ಥಾನವಾಗಿದೆ. 2022ರ ಫೆಬ್ರವರಿಯಲ್ಲಿ, ಅಪರೂಪವಾಗಿ ಕಾಣುವ ಉದ್ದನೆಯ ಕೊಕ್ಕಿನ ರಣಹದ್ದು ಇಲ್ಲಿ ಮೊಟ್ಟೆಗಳನ್ನು ಇಟ್ಟಿತ್ತು' ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ