ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಏರ್​ಲೈನ್ಸ್​ ಸಿಬ್ಬಂದಿ ಎಡವಟ್ಟು: ಪ್ರಯಾಣಿಕರ ಬಿಟ್ಟು ಹಾರಿದ ಗೋ ಫಸ್ಟ್ ವಿಮಾನ, ​ವ್ಯಾಪಕ ಆಕ್ರೋಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ಲೈನ್ಸ್​ ಸಿಬ್ಬಂದಿಗಳು ಎಡವಟ್ಟೊಂದನ್ನು ಮಾಡಿದ್ದು, ದೆಹಲಿಗೆ ಹೊರಟಿದ್ದ ‘ಗೋ ಫಸ್ಟ್’​ ಕಂಪನಿಯ ವಿಮಾನವು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಟೇಕ್ ಆಫ್ ಆದ ಘಟನೆ ಸೋಮವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್​ಲೈನ್ಸ್​ ಸಿಬ್ಬಂದಿಗಳು ಎಡವಟ್ಟೊಂದನ್ನು ಮಾಡಿದ್ದು, ದೆಹಲಿಗೆ ಹೊರಟಿದ್ದ ‘ಗೋ ಫಸ್ಟ್’​ ಕಂಪನಿಯ ವಿಮಾನವು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಟೇಕ್ ಆಫ್ ಆದ ಘಟನೆ ಸೋಮವಾರ ನಡೆದಿದೆ.

ಈ ವಿಚಾರವು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಕೆಂಪೇಗೌಡ ವಿಮಾನ ನಿಲ್ದಾಣದ ಏರ್​ಲೈನ್ಸ್​ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿನ್ನೆ (ಜ.9) ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ G8 116 ನಂಬರ್​ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್​​ನಲ್ಲಿ ವಿಮಾನಕ್ಕೆ‌ ಬಸ್​ನಲ್ಲಿ ಹೋಗಿ 50 ಜನ ಪ್ರಯಾಣಿಕರು ಹತ್ತಿದ್ದರು. ಎರಡನೇ ಟ್ರಿಪ್​​ನಲ್ಲಿ 54 ಜನರನ್ನು ಟರ್ಮಿನಲ್​​ನಿಂದ ವಿಮಾನದ ಬಳಿಗೆ ಬಸ್ ಕರೆದೊಯ್ಯಬೇಕಿತ್ತು. ಆದರೆ, ಬಸ್​ ಪ್ರಯಾಣಿಕರನ್ನು ಕರೆತರುವ ಮುನ್ನವೆ ವಿಮಾನ ಟೇಕಾಫ್​ ಆಗಿದೆ.

ಪ್ರಯಾಣಿಕರನ್ನು ಗಮನಿಸದೆ ಏರ್​ಲೈನ್ಸ್​ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಘಟನೆ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಈ ಕುರಿತು ಗೋ ಫಸ್ಟ್ ಕಂಪನಿಯಿಂದ ವಿವರಣೆ ಕೇಳಲಾಗಿದೆ. ತಪ್ಪಾಗಿರುವುದು ದೃಢಪಟ್ಟರೆ ನಿಯಮಗಳ ಪ್ರಕಾರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋ ಫಸ್ಟ್ ಈವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com