ಫೆ.1ರೊಳಗೆ ಬಾಕಿ ಹಣ ಪಾವತಿಸದಿದ್ದರೆ, ಕಸ ಸಂಗ್ರಹ ಬಂದ್: ಬಿಬಿಎಂಪಿ ಗುತ್ತಿಗೆದಾರರ ಎಚ್ಚರಿಕೆ

2020ರಿಂದ ಬಾಕಿ ಉಳಿದಿರುವ 2,700 ಕೋಟಿ ರೂ.ಗಳನ್ನು ಫೆಬ್ರವರಿ 1ರೊಳಗೆ ಪಾವತಿಸದಿದ್ದರೆ, ಕಸ ಸಂಗ್ರಹ ಬಂದ್ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಪ್ರತಿಭಟನಾನಿರತ ಬಿಬಿಎಂಪಿ ಗುತ್ತಿಗೆದಾರರ ಸಂಘ.
ಪ್ರತಿಭಟನಾನಿರತ ಬಿಬಿಎಂಪಿ ಗುತ್ತಿಗೆದಾರರ ಸಂಘ.

ಬೆಂಗಳೂರು: 2020ರಿಂದ ಬಾಕಿ ಉಳಿದಿರುವ 2,700 ಕೋಟಿ ರೂ.ಗಳನ್ನು ಫೆಬ್ರವರಿ 1ರೊಳಗೆ ಪಾವತಿಸದಿದ್ದರೆ, ಕಸ ಸಂಗ್ರಹ ಬಂದ್ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಸೋಮವಾರ ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿದಾರರ ಸಂಘದ ಪದಾಧಿಕಾರಿಗಳು, ಪಾಲಿಕೆ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ ಕಳೆದ 25 ತಿಂಗಳಿನಿಂದ ಬಿಡುಗಡೆ ಮಾಡಬೇಕಿದ್ದ ರೂ.2,700 ಕೋಟಿಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಗುತ್ತಿಗೆದಾರರಿಗೆ ಕಾರ್ಯನಿರ್ವಹಿಸಲು, ಕೆಲಸಗಾರರಿಗೆ ವೇತನ ನೀಡಲು ಕಷ್ಟವಾಗುತ್ತಿದ್ದು, ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಸೋಮವಾರ ಮಾತನಾಡಿ, ಪೌರಕಾರ್ಮಿಕರು ಬಾಕಿ ಪಾವತಿಸದ ಕಾರಣ ಗುತ್ತಿಗೆದಾರರು ಸಾಲದ ಸುಳಿಗೆ ಸಿಲುಕಿದ್ದಾರೆ. ಅಧಿಕಾರಿಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಹೀಗಾಗಿ ಬಾಕಿ ಹಣ ಪಾವತಿ ಮಾಡದಿದ್ದರೆ, ಫೆಬ್ರವರಿ 1 ರಿಂದ ನಾವು ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ.

“ಮುಷ್ಕರವು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ ಎಂದು ನಮಗೆ ತಿಳಿದಿದೆ ಆದರೆ ನಾವು ನಮ್ಮ ಕುಟುಂಬಗಳನ್ನು ಕೂಡ ನೋಡಿಕೊಳ್ಳಬೇಕು. ಬಿಬಿಎಂಪಿ ಒಂದು ಅಥವಾ ಎರಡು ಕಂತುಗಳಲ್ಲಿ ಹಣವನ್ನು ನೀಡಿದರೆ ನಾವು ಬದುಕಬಹುದು' ಎಂದು ಬಿಬಿಎಂಪಿ ಕೇಂದ್ರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಗುತ್ತಿಗೆದಾರ ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ, ಬಿಬಿಎಂಪಿ ಗುತ್ತಿಗೆದಾರರಿಗೆ 2020 ನವೆಂಬರ್ ವರೆಗೆ ಎಲ್ಲಾ ರೀತಿಯ ಬಿಲ್ ಗಳನ್ನು ಪಾವತಿ ಮಾಡಲಾಗಿದೆ. ಡಿಸೆಂಬರ್ ತಿಂಗಳ 100ರಿಂದ 150 ಕೋಟಿ ಮಾತ್ರ ಬಿಲ್ ಬಾಕಿ ಇದ್ದು, ಅದನ್ನು ಶೀಘ್ರವೇ ಪಾವತಿ ಮಾಡುತ್ತೇವೆ. ಬಿಬಿಎಂಪಿಯಿಂದ ತೆರಿಗೆ ವಸೂಲಿ ಅಭಿಯಾನ ನಡೆಯುತ್ತಿದ್ದು, ಕಳೆದ ವಾರ 35 ರಿಂದ 36 ಕೋಟಿ ಸಂಗ್ರಹವಾಗಿದೆ. ಹೀಗಾಗಿ ಗುತ್ತಿಗೆದಾರರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

2021-2022ರ ಬಾಕಿ ಪಾವತಿಗೂ ಕ್ರಮ ಕೈಗೊಳ್ಳುತ್ತೇವೆ. ಎರಡು ವರ್ಷ ನಿರೀಕ್ಷಣಾ ಅವಧಿ (ವೈಟಿಂಗ್ ಪಿರಿಯಡ್) ಇದೆ ಎಂಬುದು ಗುತ್ತಿಗೆದಾರರಿಗೂ ಗೊತ್ತಿದೆ. ಸಮಸ್ಯೆಯಿದ್ದರೆ ಗುತ್ತಿಗೆದಾರರು ಹೊಸ ಟೆಂಡರ್ ನಲ್ಲಿ ಭಾಗವಹಿಸಬಾರದಿತ್ತು. ಕೆಲವರು ಮೈನಸ್ 20-25ಗೆ ಮೊತ್ತ ದಾಖಲಿಸಿದ್ದಾರೆ. ಬಹುತೇಕ ಗುತ್ತಿಗೆದಾರರು ಪಾಲಿಕೆ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಯಾಗದಂತೆ ಎಂದಿನಂತೆ ಎಲ್ಲಾ ಕೆಲಸಗಳು ನಡೆಯುತ್ತವೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com