ಹಾಸನ: ಮನೆಯಲ್ಲಿದ್ದ ಡಬಲ್ ಸಿಲಿಂಡರ್ ಸ್ಫೋಟ, ಮೂವರು ಪ್ರಾಣಾಪಾಯದಿಂದ ಪಾರು, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ
ಮನೆಯ ಒಳಗೆ ಮತ್ತು ಹೊರಗೆ ಇದ್ದ ಎರಡು ಅಡುಗೆ ಗ್ಯಾಸಿ ಸಿಲಿಂಡರ್ ಗಳು ಸ್ಫೋಟಗೊಂಡು ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಹಾಸನದಲ್ಲಿ ನಡೆದಿದೆ.
Published: 11th January 2023 10:47 AM | Last Updated: 11th January 2023 10:47 AM | A+A A-

ಸಿಲಿಂಡರ್ ಸ್ಫೋಟ (ಸಾಂದರ್ಭಿಕ ಚಿತ್ರ)
ಹಾಸನ: ಮನೆಯ ಒಳಗೆ ಮತ್ತು ಹೊರಗೆ ಇದ್ದ ಎರಡು ಅಡುಗೆ ಗ್ಯಾಸಿ ಸಿಲಿಂಡರ್ ಗಳು ಸ್ಫೋಟಗೊಂಡು ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ೨.೪೫ರ ಹೊತ್ತಿಗೆ ಈ ದುರ್ಘಟನೆ ನಡೆದಿದ್ದು, ವಾಸದ ಮನೆಯ ಹೊರಗೆ ಮತ್ತು ಒಳಗೆ ಇದ್ದ ಎರಡು ಗ್ಯಾಸ್ ಸಿಲಿಂಡರ್‌ಗಳು ಕೆಲವೇ ನಿಮಿಷಗಳ ಅಂತರದಲ್ಲಿ ಸ್ಫೋಟಗೊಂಡು (Cylinder Blast) ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯಲ್ಲಿ ಮೂವರು ವಾಸವಾಗಿದ್ದು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಟ್ರ್ಯಾಜಿಡಿ: ಅವಳಿ ಮಕ್ಕಳಿಗಾಗಿ ವರ್ಕ್ ಫ್ರಮ್ ಹೋಮ್ ನಿರಾಕರಿಸಿದ್ದ ತೇಜಸ್ವಿನಿ!
ಶೇಖ್ ಅಲಿ ಎಂಬುವವರ ಮನೆಯಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ರಾತ್ರಿ 2.45ರ ಮನೆಯವರೆಲ್ಲ ಮಲಗಿದ್ದ ಸಂರ್ಭದಲ್ಲಿ ಮನೆಯ ಹೊರಗಿದ್ದ ಗ್ಯಾಸ್ ಸಿಲಿಂಡರ್‌ನಲ್ಲಿ ಲೀಕ್ ಆಗಿ ಸ್ಫೋಟ ಸಂಭವಿಸಿತು. ಮನೆಯ ಹೊರಗಡೆ ಏನೋ ಆಯಿತು. ರಾತ್ರಿ ಅಲ್ವಾ ಹೊರಗೆ ಹೋಗುವುದು ಬೇಡ ಎಂದು ಶೇಖ್ ಅಲಿ ಅವರ ಮಗಳು, ಅಳಿಯ ಹಾಗೂ ಮಗು ಸುಮ್ಮನೆ ಮಲಗಿದರು.
ಮನೆಯಲ್ಲಿದ್ದ ಸಿಲಿಂಡರ್ ನಲ್ಲೂ ಗ್ಯಾಸ್ ಲೀಕ್, ಹತ್ತೆ ನಿಮಿಷದ ಅಂತರದಲ್ಲಿ ಸ್ಫೋಟ
ಆದರೆ, ಕೇವಲ ಹತ್ತೆ ನಿಮಿಷದ ಅಂತರದಲ್ಲಿ ಮನೆಯ ಒಳಗಿದ್ದ ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ನಲ್ಲೂ ಅನಿಲ ಸೋರಿಕೆ ಶುರುವಾಗಿದೆ. ಗ್ಯಾಸ್ ವಾಸನೆಗೆ ಎಚ್ಚೆತ್ತ ದಂಪತಿ ಮನೆಯಿಂದ ಹೊರಗೆ ಓಡಿ ಬಂದರು. ಅವರು ಹೊರಗೆ ಓಡಿ ಬರುತ್ತಿದ್ದಂತೆಯೇ ಮನೆಯ ಒಳಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. ಆಗ ಆಸುಪಾಸಿನ ಮನೆಯವರೆಲ್ಲ ಓಡಿಬಂದರು. ಬೆಂಕಿ ಅಕ್ಕಪಕ್ಕದ ಮನೆಗೆ ವ್ಯಾಪಿಸದಂತೆ ನೀರು, ಮರಳು ಎರಚಿ ಬೆಂಕಿ ನಂದಿಸಲಾಯಿತು. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿರೂ ಅಷ್ಟು ಹೊತ್ತಿಗಾಗಲೇ ಗ್ರಾಮಸ್ಥರೇ ಬೆಂಕಿ ಆರಿಸಿದ್ದರು.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ: ಸುರಕ್ಷತಾ ಕ್ರಮವಿಲ್ಲದೆ ಕಾಮಗಾರಿ ನಡೆಸಿದ್ದೇ ದುರಂತಕ್ಕೆ ಕಾರಣ- ಮೃತ ತೇಜಸ್ವಿನಿ ಮಾವ
ಮನೆಯ ಹೊರಗಿನಿಂದ ಗ್ಯಾಸ್ ಕನೆಕ್ಷನ್; ಕೂದಲೆಳೆ ಅಂತರದಲ್ಲಿ ಕುಟುಂಬ ಬಚಾವ್
ಅನಿಲ ಸುರಕ್ಷತೆಯ ಬಗ್ಗೆ ಸಂಪೂರ್ಣ ಅರಿವಿದ್ದ ಈ ಕುಟುಂಬ ಹೊರಗಿನಿಂದಲೇ ಅಡುಗೆ ಅನಿಲ ಸಂಪರ್ಕ ಮಾಡಿತ್ತು. ಆದರೂ ಈ ದುರಂತ ಸಂಭವಿಸಿದೆ. ಮನೆಯ ಹೊರಗಿನ ಮಾತ್ರವಲ್ಲ ಒಳಗಿನ ಸಿಲಿಂಡರ್ ಕೂಡಾ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಮನೆಯ ಗೋಡೆ ಕುಸಿದಿದ್ದು ಹೆಂಚುಗಳು ಹಾರಿಹೋಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.