ಬೆಂಗಳೂರು ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ; ಘಟನೆಗೆ ಸ್ಪಷ್ಟ ಕಾರಣ ತಿಳಿಸದೆ ಮೌನ ವಹಿಸಿದ ಬಿಎಂಆರ್‌ಸಿಎಲ್

ಬೆಂಗಳೂರಿನ ಮೆಟ್ರೋ ನಿರ್ಮಾಣ ಸ್ಥಳದಲ್ಲಿ ಪಿಲ್ಲರ್ ಕುಸಿದು ತಾಯಿ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂದಿಸಿದಂತೆ ನಿಖರ ಕಾರಣ ಏನೆಂಬುದರ ಬಗ್ಗೆ ಬಿಎಂಆರ್‌ಸಿಎಲ್ ಮೌನವಾಗಿರುವುದರ ಬಗ್ಗೆ ಅನುಮಾನಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ.
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ನಿರ್ಮಾಣ ಸ್ಥಳದಲ್ಲಿ ಪಿಲ್ಲರ್ ಕುಸಿದು ತಾಯಿ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂದಿಸಿದಂತೆ ನಿಖರ ಕಾರಣ ಏನೆಂಬುದರ ಬಗ್ಗೆ ಬಿಎಂಆರ್‌ಸಿಎಲ್ ಮೌನವಾಗಿರುವುದರ ಬಗ್ಗೆ ಅನುಮಾನಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಡಿ. 10 ರಂದು ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್‌ಸಿಎಲ್ ಎಂಡಿ ವರದಿಯನ್ನು ಪಡೆದ ಮೂರು ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ತಾಂತ್ರಿಕ ದೋಷವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಆರ್‌ಐಟಿಇಎಸ್ ಮತ್ತು ಬಿಎಂಆರ್‌ಸಿಎಲ್ ಆಂತರಿಕ ಸಮಿತಿಯ ತಂಡವು ತನಿಖೆಯನ್ನು ಕೈಗೆತ್ತಿಕೊಂಡಿದೆ.

ಆದರೆ, ಸಮಿತಿಯ ವರದಿ ಬಗ್ಗೆ ಬಿಎಂಆರ್‌ಸಿಎಲ್‌ ಬಾಯಿ ಬಿಟ್ಟಿಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಮೂವರು ಎಂಜಿನಿಯರ್‌ಗಳನ್ನು ಬಿಎಂಆರ್‌ಸಿಎಲ್ ಅಮಾನತುಗೊಳಿಸಿದೆ ಮತ್ತು ಗುತ್ತಿಗೆಯನ್ನು ನಿರ್ವಹಿಸುತ್ತಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಗೆ ಎರಡು ಬಾರಿ ನೋಟಿಸ್ ಕಳುಹಿಸಿದೆ. ಅಲ್ಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಸ್ಥಗಿತಗೊಂಡಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.

ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ ಮತ್ತು ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ಈ ವಿಚಾರದಲ್ಲಿ ಬಿಎಂಆರ್‌ಸಿಎಲ್ ಉದ್ದೇಶಪೂರ್ವಕ ಮೌನ ವಹಿಸುತ್ತಿದೆ ಎಂದು ಆರೋಪಿಸಲಾಗಿದೆ.

ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳು ಮತ್ತು ಕಾಯಂ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

ಈ ದುರಂತಕ್ಕೆ ಗುತ್ತಿಗೆದಾರರ ಜತೆಗೆ ಬಿಎಂಆರ್‌ಸಿಎಲ್‌ನ ಎಂಡಿ ಮತ್ತು ಸಿಇಒ ಹೊಣೆಗಾರರು. ತಾಂತ್ರಿಕ ಪರಿಜ್ಞಾನ ಇಲ್ಲದ ಅಧಿಕಾರಿಗಳು ಇರುವುದು ಇಂತಹ ದುರಂತಕ್ಕೆ ಕಾರಣವಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಮುಚ್ಚಿಟ್ಟು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೆಟ್ರೊ ನೌಕರರ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಮೂರ್ತಿ ಆರೋಪಿಸಿದರು.

ಪತಿಯೊಂದಿಗೆ ಬೈಕ್‌ನಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಹಾದು ಹೋಗುತ್ತಿದ್ದಾಗ ಕಬ್ಬಿಣದ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಮಹಿಳೆ ಮತ್ತು ಮಗ ಮೃತಪಟ್ಟಿದ್ದರು. ಮೃತರನ್ನು 25 ವರ್ಷದ ತೇಜಸ್ವಿನಿ ಮತ್ತು ಎರಡೂವರೆ ವರ್ಷದ ಮಗ ವಿಹಾನ್ ಎಂದು ಗುರುತಿಸಲಾಗಿದೆ.

ದುರಂತಕ್ಕೆ ಬಿಎಂಆರ್‌ಸಿಎಲ್ ಅನ್ನು ಹೊಣೆಗಾರರನ್ನಾಗಿ ಮಾಡಿ, ಗುತ್ತಿಗೆದಾರ ಮತ್ತು ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ವಿರುದ್ಧ ಮೃತರ ಕುಟುಂಬವು ದೂರು ದಾಖಲಿಸಿದೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ. ಕರ್ನಾಟಕ ಹೈಕೋರ್ಟ್ ಕೂಡ ಈ ಪ್ರಕರಣವನ್ನು ಸ್ವಂತವಾಗಿ ತನಿಖೆಗೆ ಕೈಗೆತ್ತಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com