ವಿದೇಶಿಗರ ಕಣ್ಮನ ಸೆಳೆದ 'ಮಂಗಳೂರು ಕಂಬಳ'
ಮಂಗಳೂರು: ಮಂಗಳೂರಿನ ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ 6ನೇ ವರ್ಷದ ರಾಮ- ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ಭಾನುವಾರ ಚಾಲನೆ ದೊರೆತಿದ್ದು, ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿರುವ ಈ ಮಂಗಳೂರು ಕಂಬಳ ವಿದೇಶಿಗರ ಕಣ್ಮನ ಸೆಳೆದಿದೆ.
ಅಫ್ಘಾನಿಸ್ತಾನ, ಜರ್ಮನಿ ಮತ್ತು ಡೆನ್ಮಾರ್ಕ್‌ನಿಂದ ಮಂಗಳೂರಿಗೆ ಬಂದ ವಿದೇಶಿಗರು ನಿನ್ನೆ ಕಂಬಳ ವೀಕ್ಷಿಸಿದರು.
ಡೆನ್ಮಾರ್ಕ್ ಮೂಲದ ಹೆನ್ರಿ ಎಂಬುವವರು ಮಾತನಾಡಿ, ಬಿಸ್ನೆಸ್ ಟ್ರಿಪ್ ನಲ್ಲಿದ್ದೆವು. ಕಂಬಳವನ್ನು ಲೈವ್ ಆಗಿ ನೋಡುವುದು ನಮ್ಮ ಆಸೆಯಾಗಿತ್ತು. ಮಂಗಳೂರು ಕಂಬಳ ಹಾಗೂ ಶ್ರೀನಿವಾಸ್ ಗೌಡ ಬಗ್ಗೆ ಆನ್ ಲೈನ್ ಮೂಲಕ ಮಾಹಿತಿ ಪಡೆದುಕೊಂಡಿದ್ದೆವು. ಇಂತಹ ವಿಶಿಷ್ಟವಾದ ಕ್ರೀಡೆ ವೀಕ್ಷಿಸಲು ಬಹಳಷ್ಟು ಉತ್ಸುಕರಾಗಿದ್ದೆವು. ಕಂಬಳ ವೀಕ್ಷಿಸಿದ್ದು ಬಹಳ ಸಂತಸ ತಂದಿದೆ ಎಂದು ಹೇಳಿದ್ದಾರೆ. ಹೆನ್ರಿಯವರು ಕಂಬಳ ವೀಕ್ಷಿಸುತ್ತಿದ್ದ ವೇಳೆ ಅವರ ಸ್ನೇಹಿತರಾದ ಥಾಮಸ್, ಕಾರ್ಸ್ಟನ್, ಪೀಟ್ ಮತ್ತು ಸುಸನ್ನಾ ಅವರ ಜೊತೆಗಿದ್ದರು.
ಇದನ್ನೂ ಓದಿ: ಕೊರೋನಾ ಕರ್ಫ್ಯೂ ತೆರವು: ಮತ್ತೆ ಮೊಳಗಲಿದೆ ಕಂಬಳದ ಕಹಳೆ
ಅಫ್ಘಾನಿಸ್ತಾನದ ಪ್ರಜೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಯ್ಯದ್ ಅಹ್ಮದ್ ಕೂಡ ಕಂಬಳವನ್ನು ತನ್ನ ಕುಟುಂಬದೊಂದಿಗೆ ಮೊದಲ ಬಾರಿಗೆ ವೀಕ್ಷಿಸಿದರು.
ಇದೊಂದು ವಿಶಿಷ್ಟ ಕ್ರೀಡೆಯಾಗಿದ್ದು, ದಕ್ಷಿಣ ಕನ್ನಡದ ಸಂಸ್ಕೃತಿ ಸುಂದರವಾಗಿದೆ ಎಂದು ಸಯ್ಯದ್ ಅಹ್ಮದ್ ಅವರು ಹೇಳಿದ್ದಾರೆ.
2020ರಲ್ಲಿ ನಡೆದ ಕಂಬಳದ ಓಟದಲ್ಲಿ ಮೂಡುಬಿದಿರೆಯ ಮಿಜಾರ್‌ನ ಕಟ್ಟಡ ಕಾರ್ಮಿಕರಾದ ಶ್ರೀನಿವಾಸ್ ಗೌಡ ಅವರು 100 ಮೀ ದೂರವನ್ನು 9.55 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದರು. ಈ ಮೂಲಕ ಉಸೇನ್ ಬೋಲ್ಟ್ ದಾಖಲೆಯನ್ನು ಮುರಿದಿದ್ದರು. 2009ರಲ್ಲಿ ಉಸೇನ್ ಬೋಲ್ಟ್ ಅವರು 100 ಮೀಟರ್ ನ್ನು 9.58 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ