ಬೆಂಗಳೂರು: ಕೆಆರ್ ಮಾರ್ಕೆಟ್ ಫ್ಲೈ ಓವರ್ ನಿಂದ ನೋಟಿನ ಮಳೆ ಸುರಿಸಿದ ವ್ಯಕ್ತಿ; ಹಣ ಪಡೆಯಲು ಮುಗಿಬಿದ್ದ ಜನ; ಇಷ್ಟಕ್ಕೂ ಯಾರು ಈತ?

ಆಕಾಶದಿಂದ ಹಣ ಸುರಿದರೆ ಹೇಗಿರತ್ತೆ.. ಹೀಗೆ ಎಷ್ಟೋ ಬಾರಿ ನಾವು ಅಂದುಕೊಂಡಿದ್ದೂ ಇದೆ.. ಆದರೆ ಇದು ನಿಜವಾದರೆ.. ಅಕ್ಷರಶಃ ನಿಜ.. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಆಕಾಶದಿಂದ ಹಣದ ಸುರಿಮಳೆಯೇ ಸುರಿದಿದೆ...
ಕೆಆರ್ ಮಾರ್ಕೆಟ್ ಫ್ಲೈ ಓವರ್ ನಿಂದ ಹಣ ಎಸೆದ ವ್ಯಕ್ತಿ
ಕೆಆರ್ ಮಾರ್ಕೆಟ್ ಫ್ಲೈ ಓವರ್ ನಿಂದ ಹಣ ಎಸೆದ ವ್ಯಕ್ತಿ
Updated on

ಬೆಂಗಳೂರು: ಆಕಾಶದಿಂದ ಹಣ ಸುರಿದರೆ ಹೇಗಿರತ್ತೆ.. ಹೀಗೆ ಎಷ್ಟೋ ಬಾರಿ ನಾವು ಅಂದುಕೊಂಡಿದ್ದೂ ಇದೆ.. ಆದರೆ ಇದು ನಿಜವಾದರೆ.. ಅಕ್ಷರಶಃ ನಿಜ.. ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಆಕಾಶದಿಂದ ಹಣದ ಸುರಿಮಳೆಯೇ ಸುರಿದಿದೆ...

ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಕೆಆರ್‌ ಮಾರುಕಟ್ಟೆ ಫ್ಲೈಒವರ್‌ನಿಂದ ಹಣದ ಮಳೆ ಸುರಿದಿದ್ದು, ಹತ್ತು ರೂಪಾಯಿ ನೋಟುಗಳ ಈ ಮಳೆಯಿಂದ ಜನರು ಆಶ್ಚರ್ಯಚಕಿತರಾದರೆ ಕೆಲವರು ಹಣವನ್ನು ಆಯ್ದುಕೊಳ್ಳಲು ಮುಂದಾಗಿದ್ದಾರೆ.

ಬೆಂಗಳೂರಿನ ಕೆಆರ್‌ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣವನ್ನು ತೂರಿ ಹಣದ ಮಳೆ ಸುರಿಸಿದ್ದಾನೆ. ಮಾರುಕಟ್ಟೆ ಸಿಗ್ನಲ್ ಮೇಲಿರುವ ಫ್ಲೈಓವರ್ ಮೇಲೆ ನಿಂತು ತಾನು ತಂದಿದ್ದ 10 ರೂ ನೋಟುಗಳ ರಾಶಿಯನ್ನು ಫ್ಲೈಓವರ್ ನ ಎರಡೂ ಬದಿಯಲ್ಲಿ ಎರೆಚಿದ್ದಾನೆ. ಆಗಸದಿಂದ ನೋಟಿನ ರಾಶಿ ಕೆಳಗೆ ಬೀಳುತ್ತಿರುವುದನ್ನು ನೋಡಿದ ಜನ ಹಿಂದೆ ಮುಂದೆ ನೋಡದೇ ಅದನ್ನು ಆಯ್ದು ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸುಮಾರು ಅರ್ಧಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.

ವ್ಯಕ್ತಿಯ ವರ್ತನೆಯಿಂದ ಕೆಳಗೆ ಮಾತ್ರವಲ್ಲದೇ ಫ್ಲೈ ಓವರ್ ಮೇಲೂ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಣವನ್ನು ಎರಚಿದ ಬಳಿಕ ವ್ಯಕ್ತಿ ತನ್ನ ಹೋಂಡಾ ಆಕ್ಟೀವಾ ಗಾಡಿ ಹತ್ತಿ ಅಲ್ಲಿಂದ ಹೋಗಿದ್ದಾನೆ. ಇನ್ನು ಈ ವ್ಯಕ್ತಿ ಹಣ ಎರಚುತ್ತಿರುವ ವಿಡಿಯೋಗಳು ವ್ಯಾಪಕ ವೈರಲ್ ಆಗಿದ್ದು, ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಈ ವ್ಯಕ್ತಿ ಫ್ಲೈ ಓವರ್ ಮೇಲಿಂದ 10 ರೂ. ನೋಟುಗಳಿರುವ ಸುಮಾರು 3 ಕಂತೆ ಹಣವನ್ನು ಎಸೆದು ಹೋಗಿದ್ದಾನೆ. ಸುಮಾರು ಮೂರು ನಾಲ್ಕು ಸಾವಿರದಷ್ಟು ಹಣ ಎಸೆದಿದ್ದಾನೆ. ವಿಡಿಯೋದಲ್ಲಿ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾನೆ.

ಯಾರು ಈ ವ್ಯಕ್ತಿ?
ಸೂಟು ಬೂಟು.. ಕತ್ತಲ್ಲಿ ಗಡಿಯಾರ.. ಕೈಯಲ್ಲಿ ಗರಿ ಗರಿ ನೋಟು.. ಬೇಕಾಬಿಟ್ಟಿ ಹಣ ಎಸೆದು ಹೋದ ವ್ಯಕ್ತಿ ಯಾರು ಎಂದರೆ ಆತ ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿರುವ ಅರುಣ್... ಹೌದು.. ಬೆಂಗಳೂರಿನ ನಾಗರಬಾವಿಯ ನಿವಾಸಿ ಅರುಣ್ ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿರುವ ಅರುಣ್, ಅರುಣ್ ವಿ ಡಾಟ್ 9 ಇವೆಂಟ್‌ನ ಸಿಇಓ ಆಗಿದ್ದಾರೆ. ಅರುಣ್ ವಿವಿಧ ಕಾರ್ಯಕ್ರಮಗಳಿಗೆ ಇವೆಂಟ್ ಆಯೋಜನೆ ಮಾಡುತ್ತಿದ್ದರು.

ಹಣ ಎಸೆದು ಫಜೀತಿ
ಇನ್ನು ಕೆಆರ್ ಮಾರುಕಟ್ಟೆ ಫ್ಲೈ ಓವರ್ ಮೇಲೆ ಹಣ ಎಸೆದ ಅರುಣ್ ಇದೀಗ ಫಜೀತಿಗೆ ಸಿಲುಕಿದ್ದು,  ಕೆ.ಆರ್.ಮಾರ್ಕೆಟ್ ಪೊಲೀಸರು ಅರುಣ್ ವಿರುದ್ಧ NCR ದಾಖಲು ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ವರ್ತಿಸಿದ್ದು ಯಾಕೆ ಅನ್ನೋ ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com