ವೈದ್ಯಕೀಯ ಸಾಮಾಗ್ರಿಗಳಲ್ಲಿ ಕೊರತೆ: ರೋಗಿಗಳ ಚಿಕಿತ್ಸೆಗೆ ನಿರಾಕರಿಸುತ್ತಿರುವ ಪಿಹೆಚ್'ಸಿ!

ಅನಾರೋಗ್ಯ ಅಥವಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ಜನರು ಸಂಪರ್ಕಿಸಲು ಮೊದಲ ಕೇಂದ್ರಬಿಂದುವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಮೂಲ ಚಿಕಿತ್ಸಾ ಸಾಮಗ್ರಿಗಳ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅನಾರೋಗ್ಯ ಅಥವಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ಜನರು ಸಂಪರ್ಕಿಸಲು ಮೊದಲ ಕೇಂದ್ರಬಿಂದುವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಮೂಲ ಚಿಕಿತ್ಸಾ ಸಾಮಗ್ರಿಗಳ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ 201 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಶೇ.40ರಷ್ಟು ಕೇಂದ್ರಗಳಲ್ಲಿ ಮೂಲಭೂತ ವೈದ್ಯಕೀಯ ಸಾಮಗ್ರಿಗಳ ಕೊರತೆಯಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಕೆಎಸ್‌ಎಂಎಸ್‌ಸಿಎಲ್), ರಾಜ್ಯದಲ್ಲಿನ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ಪೂರೈಕೆದಾರಿಗೆ ಕಳೆದ ಎರಡು ವರ್ಷಗಳಿಂದ ಬಿಲ್ ಗಳು ಬಾಕಿ ಉಳಿಸಿಕೊಂಡಿದ್ದು, ಇದನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು, ರೋಗಿಗಳಿಗೆ ಚಿಕಿತ್ಸೆ ನೀಡಲು ಜನೌಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸಲು ಪಿಎಚ್‌ಸಿಗಳ ವೈದ್ಯರು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕೆಎಸ್‌ಎಂಎಸ್‌ಸಿಎಲ್‌ನ ಕೆಲವು ಟೆಂಡರ್‌ಗಳನ್ನು ಇಲ್ಲಿಯವರೆಗೆ ತೆರವುಗೊಳಿಸಲಾಗಿಲ್ಲ, ಇದು ಸರಬರಾಜು ಕೊರತೆಗೆ ಕಾರಣವಾಗಿದೆ. ಸಮಸ್ಯೆಗಳು ಬಗೆಹರಿಯುವವರೆಗೆ ಅಗತ್ಯಗಳಿಗೆ ಅನುಗುಣವಾಗಿ ಜನೌಷಧಿ ಕೇಂದ್ರಗಳಿಂದ ಔಷಧಿಗಳ ಖರೀದಿಸುವಂತೆ ಪಿಎಚ್‌ಸಿ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಬಿಲ್ ಗಳ ತೆರವುಗೊಳಿಸದಿರಲು ಹಲವು ಕಾರಣಗಳಿವೆ. ಅದನ್ನು ಪರಿಹರಿಸಬೇಕಿದೆ ಎಂದಿದ್ದಾರೆ. ಆದರೆ, ಕಾರಣವೇನು ಎಂಬುದರ ಬಗ್ಗೆ ತ್ರಿಲೋಕ್ ಚಂದ್ರ ಅವರು ಸ್ಪಷ್ಟಪಡಿಸಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮಾತನಾಡಿ, 2 ವಾರಗಳಿಂದ ನಾನ್ ಸ್ಟೆರೈಲ್ ಗ್ಲೌಸ್ ಗಳಿಲ್ಲಿದೆ ಕೆಲಸ ಮಾಡುತ್ತಿದ್ದೇವೆಂದು ಹೇಳಿದ್ದಾರೆ.

ಹತ್ತಿ, ಹೊಲಿಗೆಯ ಕಿಟ್‌ಗಳು, ಸಿಟ್ರಜಿನ್‌ನಂತಹ ಔಷಧಿಗಳು, ಐರನ್ ಮಾತ್ರೆಗಳು, ಮೆಟ್‌ಫಾರ್ಮಿನ್ (ಮಧುಮೇಹದ ಔಷಧಗಳು) ಮತ್ತು ಕೆಮ್ಮಿನ ಸಿರಪ್‌ಗಳಂತಹ ಮೂಲಭೂತ ಔಷಧಿಗಳ ಕೊರತೆಯನ್ನು ಎದುರಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಬೆಂಗಳೂರಿನ ವೈದ್ಯಕೀಯ ಚಿಕಿತ್ಸಾ ಸಾಮಾಗ್ರಿ ಸರಬರಾಜುದಾರರೊಬ್ಬರು ಮಾತನಾಡಿ, ನಮ್ಮ ಬಿಲ್‌ಗಳು ಬಾಕಿಯಿರುವುದರಿಂದ, ಸರಬರಾಜುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ. ರೂ.50 ಕೋಟಿ ಮೌಲ್ಯದ ಬಿಲ್‌ಗಳು ರಾಜ್ಯ ಸರ್ಕಾರದ ಮುಂದೆ ಕ್ಲಿಯರೆನ್ಸ್‌ಗಾಗಿ ಬಾಕಿ ಉಳಿದಿವೆ ಎಂದು ಹೇಳಿದ್ದಾರೆ.

ಬುಧವಾರವಷ್ಟೇ ತಮ್ಮ ಹುದ್ದೆಯಿಂದ ಬಿಡುಗಡೆಗೊಂಡ ಕೆಎಸ್‌ಎಂಎಸ್‌ಸಿಎಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ್ ಎಸ್‌ಜೆ ಅವರು ಮಾತನಾಡಿ, ಪೂರೈಕೆದಾರರೊಂದಿಗೆ ಬಾಕಿ ಇರುವ ಬಿಲ್‌ಗಳನ್ನು ಕ್ಲಿಯರ್ ಮಾಡುವ ಪ್ರಕ್ರಿಯೆಗಳು ಸುದೀರ್ಘವಾಗಿವೆ. ಬಿಲ್‌ಗಳು ಕ್ಲಿಯರ್ ಆಗಲು ಹಲವಾರು ಕಾರಣಗಳಿವೆ ಎಂದು ತಿಳಿಸಿದ್ದಾರೆ.

ನಿರಂತರವಾಗಿ ಬದಲಾಗುತ್ತಿರುವ ವ್ಯವಸ್ಥಾಪಕ ಅಧಿಕಾರಿಗಳಿಂದಾಗಿ ಕೆಎಸ್‌ಎಂಎಸ್‌ಸಿಎಲ್ ಇಲಾಖೆ ಬಿಲ್‌ಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಏತನ್ಮಧ್ಯೆ, ಸೋಮಶೇಖರ್ ಅವರ ಸ್ಥಾನಕ್ಕೆ ಕೆಎಸ್‌ಎಂಎಸ್‌ಸಿಎಲ್‌ಗೆ ಹೊಸ ವ್ಯವಸ್ಥಾಪಕ ನಿರ್ದೇಶಕರು ಇನ್ನೂ ನೇಮಕಗೊಂಡಿಲ್ಲ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com