ಕಳಪೆ ಗುಣಮಟ್ಟದ ಆಹಾರ: ಬಳ್ಳಾರಿ ಡಿಸಿ ನಿವಾಸದ ಮುಂದೆ ಪ್ರತಿಭಟನೆ; ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳ ಹೊರಹಾಕಿದ ಅಧಿಕಾರಿಗಳು!
ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದ ಹಿನ್ನೆಲೆಯಲ್ಲಿ ಇದರ ವಿರುದ್ಧ ಬಳ್ಳಾರಿ ಜಿಲ್ಲಾಧಿಕಾರಿಗಳ ನಿವಾಸ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ನಿಂದ ಹೊರಹಾಕಿದ ಘಟನೆ ಬುಧವಾರ ನಡೆದಿದೆ.
Published: 28th January 2023 08:59 AM | Last Updated: 28th January 2023 07:24 PM | A+A A-

ಹಾಸ್ಟೆಲ್ ನ ಹೊರ ನಿಂತಿರುವ ವಿದ್ಯಾರ್ಥಿಗಳು.
ಬಳ್ಳಾರಿ: ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದ ಹಿನ್ನೆಲೆಯಲ್ಲಿ ಇದರ ವಿರುದ್ಧ ಬಳ್ಳಾರಿ ಜಿಲ್ಲಾಧಿಕಾರಿಗಳ ನಿವಾಸ ಮುಂದೆ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಎಸ್‌ಸಿ/ಎಸ್‌ಟಿ ಹಾಸ್ಟೆಲ್‌ನಿಂದ ಹೊರಹಾಕಿದ ಘಟನೆ ಬುಧವಾರ ನಡೆದಿದೆ.
ಕಳೆದ ರಾತ್ರಿ ಬಳ್ಳಾರಿ ಜಿಲ್ಲಾಧಿಕಾರಿ (ಡಿಸಿ) ಪವನ್‌ಕುಮಾರ್ ಮಾಲಪಾಟಿ ಅವರ ನಿವಾಸದ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ 25 ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಜಿಲ್ಲಾಧಿಕಾರಿಯ ಈ ಕ್ರಮದ ವಿರುದ್ಧ ಸಿಡಿದೆದ್ದಿರುವ ವಿದ್ಯಾರ್ಥಿಗಳು ಇದೀಗ ರಾಜ್ಯ ಮುಖ್ಯ ಕಾರ್ಯದರ್ಶಿಗಳ ಬಳಿ ಮಾಲಪಾಟಿ ವಿರುದ್ಧ ದೂರು ನೀಡಿದ್ದಾರೆ.
ಹಾಸ್ಟೆಲ್ ನಲ್ಲಿ ನೀಡಲಾಗುತ್ತಿರುವ ಮಾಂಸಾಹಾರದಲ್ಲಿ ಯಾವುದೇ ರುಚಿ ಇಲ್ಲ. ಗುಣಮಟ್ಟ ಕೂಡ ಕಳಪೆಯಾಗಿದೆ.. ಪ್ರತೀ ಬುಧವಾರ ಇದೇ ರೀತಿಯ ಆಹಾರವನ್ನು ಸೇವಿಸುವಂತಾಗಿದೆ. ಹೀಗಾಗಿ ಬೇಸತ್ತು ಜಿಲ್ಲಾಧಿಕಾರಿಗಳ ಮನೆ ಮುಂದೆ ಪ್ರತಿಭಟಿಸಿದ್ದೆವು ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೊರಹಾಕಿದ ಬಳ್ಳಾರಿ ಡಿಸಿಯನ್ನು ಅಮಾನತು ಮಾಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಈ ನಡುವೆ ತಡರಾತ್ರಿ ಡಿಸಿ ನಿವಾಸದ ಎದುರು ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳ ಮೇಲೆ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಸ್ಯೆಗಳಿದ್ದರೆ ಡಿಸಿಗೆ ಲಿಖಿತವಾಗಿ ದೂರು ನೀಡಲಿ. ಈ ಸಮಸ್ಯೆ ಬಗೆಹರಿಸುತ್ತೇನೆಂಬ ಭರವಸೆಯನ್ನು ನಾವು ನೀಡುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.