ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಹೆಚ್ಚಳ; ಮಳೆ ನೀರು ಕೊಯ್ಲು ಕಾರಣ!

ಎನ್‌ಜಿಒವೊಂದರ ವಿಶಿಷ್ಟ ಉಪಕ್ರಮವೊಂದು ರಾಜ್ಯದ ವಿವಿಧ ಜಿಲ್ಲೆಗಳ 15 ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿನಿಯರ ಹಾಜರಾತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎನ್‌ಜಿಒವೊಂದರ ವಿಶಿಷ್ಟ ಉಪಕ್ರಮವೊಂದು ರಾಜ್ಯದ ವಿವಿಧ ಜಿಲ್ಲೆಗಳ 15 ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿನಿಯರ ಹಾಜರಾತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಶೌಚಾಲಯಗಳಲ್ಲಿ ಮೂಲಸೌಕರ್ಯ ಇಲ್ಲದಿರುವುದು, ಅಸಮರ್ಪಕ ನೀರಿನ ಪೂರೈಕೆಯಿಂದಾಗಿ ವಿದ್ಯಾರ್ಥಿನಿಯರು ಪ್ರತೀ ತಿಂಗಲೂ 3-4 ದಿನಗಳ ಕಾಲ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದರು. ಸೌಲಭ್ಯಗಳಿಲ್ಲದ ಕಾರಣ ವಿದ್ಯಾರ್ಥಿನಿಯರು ಋತು ಚಕ್ರ ಸಮಯದಲ್ಲಿ ಗೈರು ಹಾಜರಾಗುತ್ತಿದ್ದರು ಎಂಬುದನ್ನು ಅಧ್ಯಯನವೊಂದು ತಿಳಿಸಿತ್ತು.

ಈ ಸಮಸ್ಯೆಯನ್ನ ಮನಗಂಡ ಎನ್ವಿರಾನ್ಮೆಂಟ್ ಅಸೋಸಿಯೇಷನ್ ​​ಆಫ್ ಬೆಂಗಳೂರು (ಇಎಬಿ), ಸರ್ಕಾರೇತರ ಸಂಸ್ಥೆಯು ಸೌಲಭ್ಯಗಳನ್ನು ಸ್ಥಾಪಿಸುವುದರ ಜೊತೆಗೆ ನೀರಿನ ಸಮಸ್ಯೆ ಬಗೆಹರಿಸಲು ಮಳೆನೀರು ಕೊಯ್ಲು ವಿಧಾನವನ್ನು ಅಳವಡಿಸಲು ಮುಂದಾಯಿತು.

ಸಂಸ್ಥೆಯು ದೇವನಹಳ್ಳಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಮಳೆ ನೀರು ಕೊಯ್ಲು ಘಟಕವನ್ನು ಸ್ಥಾಪಿಸಿದ್ದು, ಈ ಸ್ಥಳಗಳಲ್ಲಿನ ಶಾಲೆಗಳಲ್ಲಿ ವರ್ಷವಿಡೀ ಸಮರ್ಪಕ ನೀರು ಲಭ್ಯವಾಗುತ್ತಿದೆ. ಸಂಸ್ಥೆಯ ಈ ಉಪಕ್ರಮದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಹಾಜರಾತಿ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ಎನ್ವಿರಾನ್ಮೆಂಟ್ ಅಸೋಸಿಯೇಷನ್ ​​ಆಫ್ ಬೆಂಗಳೂರು ಸಂಸ್ಥೆಯನ್ನು 25 ವರ್ಷಗಳ ಹಿಂದೆ ಇಸ್ರೋ ಮಾಜಿ ಅಧ್ಯಕ್ಷ ಡಾ ಕೆ ಕಸ್ತೂರಿರಂಗನ್ ಆರಂಭಿಸಿದ್ದರು.

ಇಎಬಿಯ ಈ ಉಪಕ್ರಮದ ಬಗ್ಗೆ ಮಾತನಾಡಿರುವ ವಿದ್ಯಾರ್ಥನಿಯರು, ಮಳೆನೀರು ಕೊಯ್ಲು ವಿಧಾನದಿಂದ ದೊಡ್ಡ ಸಮಸ್ಯೆಯೊಂದು ಪರಿಹಾರವಾದಂತಾಗಿದೆ ಎಂದು ಹೇಳಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಮತ್ತು ಇಎಬಿಯ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಆರ್.ಜಿ.ನಡದೂರ್ ಅವರು ಮಾತನಾಡಿ, “ನಮ್ಮ ಉಪಕ್ರಮದಿಂದ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ತರಗತಿಗಳಲ್ಲಿ ಹಾಜರಾತಿ ಸಂಖ್ಯೆ ಹೆಚ್ಚಿರುವುದು ಮಾತ್ರವಲ್ಲದೆ ಹೊಸ ದಾಖಲಾತಿಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಇದೀಗ ಶಾಲೆಗಳಿಂದ ಕೃತಜ್ಞತಾ ಪತ್ರಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಹಲವು ಶಾಲೆಗಳು ತಮ್ಮ ಶಾಲೆಗಳಲ್ಲಿಯೂ ಮಳೆನೀರು ಕೊಯ್ಲು ಘಟಕಗಳ ಸ್ಥಾಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಉಪಕ್ರಮವು ನಾವು ಸಂಗ್ರಹಿಸುವ ನಿಧಿಯ ಮೇಲೆ ಅವಲಂಬಿತವಾಗಿದೆ. ಇದೀಗ ನಾವು ರಜತ ಮಹೋತ್ಸವ ವರ್ಷವನ್ನು ಆಚರಿಸುತ್ತಿದ್ದೇವೆ. ಸಿಎಸ್ಆರ್ ವಿಭಾಗದ ಅಡಿಯಲ್ಲಿ ಕಾರ್ಪೊರೇಟ್‌ ಸಂಸ್ಥೆಗಳಿಂದ ಉದಾರವಾದ ಬೆಂಬಲವನ್ನು ನಿರೀಕ್ಷಿಸುತ್ತಿದ್ದೇವೆಂದು ತಿಳಿಸಿದ್ದಾರೆ.

ಇಎಬಿ ಸಂಸ್ಥಾಪಕ ಡಾ.ಕೆ.ಕಸ್ತೂರಿರಂಗನ್ ಅವರು ಮಾತನಾಡಿ, “ಬೆಂಗಳೂರಿನಲ್ಲಿರುವ ಹಲವಾರು ಸಂಸ್ಥೆಗಳ ಬಳಿ ವಿವಿಧ ಹಂತಗಳಲ್ಲಿ ಅನುಭವ, ಜ್ಞಾನ ಮತ್ತು ಪ್ರತಿಭೆಗಳಿವೆ. ಬೆಂಗಳೂರಿನ ಅಸಂಖ್ಯಾತ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡಲು ಎಲ್ಲಾ ಜನರಿಗೆ ಇಎಬಿ ವೇದಿಕೆಯಾಗಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com