INTERVIEW: ಸಿಎಂ ಆಗುವ ಬಯಕೆ ಇದೆ, ನಾನೇಕೆ ಮುಖ್ಯಮಂತ್ರಿಯಾಗಬಾರದು?: ಡಾ ಜಿ ಪರಮೇಶ್ವರ್

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇದ್ದ ರಾಜಕೀಯ ಪರಿಸ್ಥಿತಿಯೇ ಇಂದೂ ಇದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇ ಆದರೆ, ಪಕ್ಶವು 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಹೇಳಿದ್ದಾರೆ.
ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇದ್ದ ರಾಜಕೀಯ ಪರಿಸ್ಥಿತಿಯೇ ಇಂದೂ ಇದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇ ಆದರೆ, ಪಕ್ಶವು 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತದ ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಚುನಾವಣೆಗೆ ಪಕ್ಷದ ಸಿದ್ಧತೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಕಾಂಗ್ರೆಸ್ ಬಹುಮತ ಪಡೆಯುವುದು ಕಷ್ಟ ಎಂದು ಹಲವು ಸಮೀಕ್ಷೆಗಳ ವರದಿಗಳು ತಿಳಿಸಿವೆ. ಇದನ್ನು ನೀವು ಹೇಗೆ ನೋಡುತ್ತೀರಿ?
ಈವರೆಗೆ ನಾಲ್ಕು ಸಮೀಕ್ಷೆಗಳ ವರದಿಗಳು ಬಂದಿವೆ. ನಾಲ್ಕು ಸಮೀಕ್ಷೆಗಳಲ್ಲಿನ ಯಾವುದೇ ವರದಿಯೂ ಕಾಂಗ್ರೆಸ್ ಅಥವಾ ಬಿಜೆಪಿಗೆ 100ಕ್ಕಿಂತ ಹೆಚ್ಚು ಸೀಟು ಗೆಲ್ಲುವ ಕುರಿತು ತಿಳಿಸಿಲ್ಲ. ಕಾರಣ ಮತದಾರರು ಇನ್ನೂ ನಿರ್ಧರಿಸಿಲ್ಲ. ಚುನಾವಣೆ ಘೋಷಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಜನರನ್ನು ತಲುಪಲು ರ್ಯಾಲಿಗಳ ನಡೆಸಲು ಮುಂದಾಗಿವೆ. ಅಧಿಕಾರಕ್ಕೆ ಬರುವ ಪಕ್ಷವನ್ನು ಮತದಾರ ನಿರ್ಧರಿಸಬೇಕು. ರಾಜ್ಯದ ಯಾವ ಭಾಗದಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಯಾವ ವರ್ಗದ ಜನರು ನಮ್ಮೊಂದಿಗೆ ಆರಾಮದಾಯಕವಾಗಿಲ್ಲ ಎಂಬುದನ್ನು ನಾವು ನೋಡುತ್ತೇವೆ. ಪ್ರಸ್ತುತ ನಾವು ಗಮನಹರಿಸುತ್ತಿರುವ ಅಂಶಗಳು ಇವು.

ಕಾಂಗ್ರೆಸ್ ಪಕ್ಷದ ನಿರೀಕ್ಷೆಗಳೇನು?
ನಾವು ಸುಮಾರು 130 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವತ್ತ ಗಮನ ಹರಿಸಿದ್ದೇವೆ. 2013ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ ಇದ್ದ ರಾಜಕೀಯ ಪರಿಸ್ಥಿತಿಯೇ ಇಂದಿಗೂ ಇದೆ. ಇದು ಈ ಬಾರಿ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ. ಆದರೆ, ನಾವು ನಮ್ಮ ಕಾರ್ಯವನ್ನು ಒಗ್ಗಟ್ಟಿನಿಂದ ಮಾಡಬೇಕಿದೆ. ಇದೀಗ ನಾವು ಒಗ್ಗಟ್ಟಾಗಿದ್ದೇವೆ, ಆದರೆ ರಾಜ್ಯದ ಕೆಲ ವರ್ಗದ ಜನಕ್ಕೆ ಮತ್ತು ಮಾಧ್ಯಮಕ್ಕೆ ನಾವು ವಿಭಜನೆಯಾಗಿದ್ದೇವೆಂದು ಕಾಣುತ್ತಿದೆ. ಅದು ನಿಜವಲ್ಲ. ಯಾವುದೇ ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತೇವೆ. ಆದರೆ, ನಮ್ಮ ನಡುವೆ ಮನಸ್ತಾಪಗಳಿಲ್ಲ. ನಾವು ನಮ್ಮ ಕಾರ್ಯವನ್ನು ಒಗ್ಗಟಿನಿಂದ ಮಾಡಬೇಕಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಈ ನಿಯತಾಂಕಗಳನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ, ನಾವು 130 ಸ್ಥಾನಗಳನ್ನು ಗೆಲ್ಲಬಹುದು.

2013 ವರ್ಷಕ್ಕಿಂತ ಪ್ರಸಕ್ತ ಸಾಲು ಉತ್ತಮವಾಗಿದೆ ಏಕೆ?
ತುಲನಾತ್ಮಕವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರಗಳು ಕೆಟ್ಟ ಆಡಳಿತ ನೀಡಿವೆ. ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ನಂತರ ಬಸವರಾಜ ಬೊಮ್ಮಾಯಿ ಅವರು ಅನೇಕ ಮಾತುಗಳನ್ನು ಹೇಳುತ್ತಲೇ ಇದ್ದರು, ಆದರೆ, ಅವುಗಳಿಂದ ಜನರು ಸಂತೋಷವಾಗಲಿಲ್ಲ. ಹಲವು ಕಾರ್ಯಕ್ರಮಗಳನ್ನು ಹಿಂಪಡೆಯಲಾಗಿದೆ. ಯೋಜನೆಗಳು ಅಥವಾ ಹಣ ಬಿಡುಗಡೆ ಮಾಡುವ ಕೆಲಸಗಳಾಗುತ್ತಿಲ್ಲ. ಇದಲ್ಲದೆ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಜನರ ಅಸಮಾಧಾನಗೊಂಡಿದ್ದಾರೆ. ಇದು ಜನರ ಮೇಲೆ ಪ್ರಭಾವ ಬೀರಿದೆ. ನಾವು ಜಿಲ್ಲಾ ಯಾತ್ರೆಗಳಿಗೆ ಹೋದಾಗ, ಜನರು ಬದಲಾವಣೆಯನ್ನು ಬಯಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ನೇತೃತ್ವ ವಹಿಸಿರುವ ನೀವು, ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ಯಾವ ರೀತಿಯ ಕಸರತ್ತು ಮಾಡುತ್ತಿದ್ದೀರಿ?
ನಾವು ಏನನ್ನು ಘೋಷಿಸುತ್ತೇವೆ ಎಂಬುದರ ಬಗ್ಗೆ ನಾವು ಜಾಗೃತರಾಗಿದ್ದೇವೆ. ಈ ಹಿಂದೆ ಪ್ರಣಾಳಿಕೆಗಳನ್ನು ರಹಸ್ಯವಾಗಿ ಸಿದ್ಧಪಡಿಸಿ ಸರಿಯಾದ ಸಮಯಕ್ಕೆ ಪ್ರಕಟಿಸುತ್ತಿದ್ದೆವು. ಆದರೆ, ಈಗ ನಾವು ವಿಭಿನ್ನ ತಂತ್ರವನ್ನು ಅನುಸರಿಸುತ್ತಿದ್ದೇವೆ. ಪ್ರಚಾರದ ವೇಳೆಯೇ ಕೆಲವು ಘೋಷಣೆಗಳನ್ನು ಮಾಡುತ್ತಿದ್ದೇವೆ. ಘೋಷಣೆಗಳನ್ನು ಮಾಡುವ ಮೊದಲು ನಾವು ಹಣಕಾಸಿನ ವಿವರಗಳನ್ನು ಕೆಲಸ ಮಾಡುವುದು ಸೇರಿದಂತೆ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಕುಟುಂಬದ ಒಬ್ಬ ಮಹಿಳೆಗೆ ರೂ.2000 ನೀಡುವುದಾಗಿ ಘೋಷಣೆ ಮಾಡಿದ್ದೆವು. ಇದಕ್ಕೆ ತಿಂಗಳಿಗೆ ರೂ.8,000 ಕೋಟಿ ವೆಚ್ಚವಾಗುತ್ತದೆ. ನಮ್ಮ ಬಜೆಟ್ ರೂ 2.65 ಲಕ್ಷ ಕೋಟಿಯಾಗಿದೆ. ಅನಗತ್ಯ ವೆಚ್ಚವನ್ನು ಕಡಿತಗೊಳಿಸುವುದರ ಮೂಲಕ ಮತ್ತು ಕೇಂದ್ರದ ಅನುದಾನವನ್ನು ಬಳಸಿಕೊಂಡು ಯೋಜನೆಗಳನ್ನು ಕಾರ್ಯಗತಗೊಳಿಸಬಹುದು.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಭಿನ್ನಾಭಿಪ್ರಾಯ ಕುರಿತು ಕೇಳಿಬಂದಿರುವ ಸುದ್ದಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸತ್ಯವಿಲ್ಲ, ಸಿದ್ದರಾಮಯ್ಯ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದು, ಅವರ ಸರ್ಕಾರದಲ್ಲಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ವಿಭಿನ್ನ ರೀತಿಯ ವ್ಯಕ್ತಿ ಖಂಡಿತಾ ಹೌದು. ಇಬ್ಬರ (ಸಿದ್ದರಾಮಯ್ಯ ಮತ್ತು ಡಿಕೆಶಿ) ನಡುವಿನ ವ್ಯತ್ಯಾಸವು ಪಕ್ಷದೊಳಗೆ ಆತಂಕಕಾರಿ ವಿಚಾರವಾಗಿದೆ. 2013ರಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಆದರೆ, ಸಮಸ್ಯೆಗಳನ್ನು ನಾವಿಬ್ಬರೂ ಬಗೆಹರಿಸಿದ್ದೆವು. ಕೆಲವು ಕ್ಷೇತ್ರಗಳಲ್ಲಿ ನಾವಿಬ್ಬರೂ ನಿರ್ಧಾರಕ್ಕೆ ಬರಲಾಗದಿದ್ದಾಗ ಕೇಂದ್ರ ಚುನಾವಣಾ ಸಮಿತಿಯ ನಿರ್ಧಾರಕ್ಕೆ ಬಿಡುತ್ತಿದ್ದೆವು.

ನಿಮ್ಮ ಮತ್ತು ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕಾರ್ಯಶೈಲಿಯಲ್ಲಿ ವ್ಯತ್ಯಾಸವಿದೆ?
ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳು ವಿಭಿನ್ನವಾಗಿವೆ. ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಕೆಲ ಸಲಹೆಗಳನ್ನು ನಾನು ಸದ್ದಿಲ್ಲದೆ ಒಪ್ಪಿಕೊಳ್ಳುತ್ತಿದ್ದೆ, ಕೆಲವರನ್ನು ತಿರಸ್ಕರಿಸುತ್ತಿದ್ದೆ. ಆದರೆ, ಶಿವಕುಮಾರ್ ಅದೇ ರೀತಿ ಮಾಡದಿರಬಹುದು. ಎಲ್ಲರ ಆಸಕ್ತಿ ಪಕ್ಷ. ಪಕ್ಷ ಅಧಿಕಾರಕ್ಕೆ ಬರಬೇಕೆಂಬುದಾಗಿದೆ. ನೀವೇ ಸಿಎಂ ಅಭ್ಯರ್ಥಿಯಾಗಲಿ ಅಥವಾ ಇನ್ನೊಬ್ಬರೇ ಆಗಲಿ, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ಎಲ್ಲರ ಗುರಿಯಾಗಿದೆ. ಅಂತಿಮವಾಗಿ ಎಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ನೀವೂ ಸಿಎಂ ಆಕಾಂಕ್ಷಿಯೇ?
ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ನಾವು ಬಹುಮತ ಪಡೆಯಬೇಕು. ನಾನು ಸಿಎಂ ಹುದ್ದೆ ಕೇಳಬಹುದು. ಬೇರೆಯವರು ಕೂಡ ಇದೇ ಸ್ಥಾನ ಕೇಳಬಹುದು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಕೂಡ ಕೇಳಬಹುದು. ಆದರೆ, ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಆ ಸಮಯದಲ್ಲಿ ಪ್ರಣಾಳಿಕೆಯಲ್ಲಿನ ಘೋಷಣೆಗಳನ್ನು ಜಾರಿಗೆ ಬರಬಲ್ಲರವನ್ನು ಹೈಕಮಾಂಡ್ ಸಿಎಂ ಆಗಿ ಆಯ್ಕೆ ಮಾಡುತ್ತದೆ. 2024ರಲ್ಲಿ ನಾವು ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಅದನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ.

ಹಾಗಾದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮಾತ್ರ ಸ್ಪರ್ಧೆ ಇದೆ ಅಲ್ಲವೇ?
ಇಲ್ಲ, ಅದು ಹಾಗಲ್ಲ. ಅದು ಏಕೆ ಇರಬೇಕು? ಹತ್ತಕ್ಕೂ ಹೆಚ್ಚು ಜನರಿದ್ದಾರೆ. ನಾನು ರಾಜಕೀಯಕ್ಕೆ ಯಾಕೆ ಬಂದೆ ಎಂದು ಕೇಳಿದರೆ ನಾನು ಮುಖ್ಯಮಂತ್ರಿಯಾಗಬೇಕು ಎಂದು ಹೇಳುತ್ತೇನೆ. ನಾನೇಕೆ ಮುಖ್ಯಮಂತ್ರಿ ಸ್ಥಾನ ಬಯಸಬಾರದು? ನಾನು ಇಲ್ಲಿಯವರೆಗೆ ಬಂದಿದ್ದೇನೆ. ನಾನು ಉಪಮುಖ್ಯಮಂತ್ರಿ ಆಗಿದ್ದೇನೆ. ಹೌದು, ಸ್ವಾಭಾವಿಕವಾಗಿ ನನಗೂ ಆಸಕ್ತಿ ಇದೆ. ಆದರೆ, ಇದು ಎಲ್ಲಾ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ.

ಮೀಸಲಾತಿ ವಿಚಾರವನ್ನು ಕಾಂಗ್ರೆಸ್ ಹೇಗೆ ನೋಡುತ್ತಿದೆ?
ಮೀಸಲಾತಿ ಸಮಸ್ಯೆಯನ್ನು ಅಷ್ಟು ಸುಲಭವಾಗಿ ಬಗೆಹರಿಸಲು ಸಾಧ್ಯವಿಲ್ಲ. ಈಗಾಗಲೇ ಎಸ್‌ಸಿಯಲ್ಲಿ 101 ಮತ್ತು ಎಸ್‌ಟಿಯಲ್ಲಿ 52 ಸಮುದಾಯಗಳಿವೆ. ಈ ವ್ಯಾಪ್ತಿಗೆ ಬರಲು ಬಯಸುವ ಅನೇಕ ಸಮುದಾಯಗಳಿವೆ. ಇದೊಂದು ಸಂಕೀರ್ಣವಾದ ಸಮಸ್ಯೆಯಾಗಿದ್ದು, ನಾವು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಮೀಸಲಾತಿ ವಿಚಾರದ ಬಗ್ಗೆ ನಮ್ಮ ಪ್ರಣಾಳಿಕೆ ಹೆಚ್ಚು ಮಾತನಾಡುವುದಿಲ್ಲ. ಇದು ನಮಗೆ ಕ್ಲಿಷ್ಟಕರವಾದ ಸಮಸ್ಯೆಯಾಗಿದೆ.

ಮತಾಂತರ ಕಾಯ್ದೆಯನ್ನು ಮರುಪರಿಶೀಲಿಸುತ್ತೀರಾ?
ಅಧಿಕಾರಕ್ಕೆ ಬಂದಾಗ ಅದನ್ನು ನೋಡುತ್ತೇವೆ. ನಾವು ಈಗ ಯಾವುದೇ ಘೋಷಣೆ ಮಾಡುವುದಿಲ್ಲ. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುತ್ತೇವೆ.

ಯುವ, ಮೊದಲ ಬಾರಿಗೆ ಮತದಾರರು ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ. ಪಕ್ಷದ ಪ್ರಣಾಳಿಕೆಯಲ್ಲಿ ಅವರಿಗಾಗಿ ಏನಾದರೂ ಇದೆಯೇ?
ಯುವಕರಿಗೆ ಗಂಭೀರವಾದ ವಿಚಾರಗಳನ್ನು ಹೇಳಲು ಹೊರಟಿದ್ದೇವೆ. ಯುವಕರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕಾರ್ಯಕ್ರಮಗಳನ್ನು ನೀಡುತ್ತೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.

ಉದ್ಯೋಗ ಸೃಷ್ಟಿ ಬಗ್ಗೆ ಏನು ಹೇಳುತ್ತೀರಿ?
ಮಂಜೂರಾದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಒಂದು ವರ್ಷದೊಳಗೆ, ನಾವು ಎಲ್ಲಾ ಬ್ಯಾಕ್‌ಲಾಗ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಆ ಬದ್ಧತೆಯನ್ನು ನಾವು ಮಾಡಿದ್ದೇವೆ. ಎಲ್ಲ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ನಾನು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಇಲ್ಲಿ ಶಿಕ್ಷಕರಿಲ್ಲ. ನಾನು ಸುಮಾರು 40 ಅನುದಾನಿತ ಪ್ರೌಢಶಾಲೆಗಳನ್ನು ಹೊಂದಿದ್ದೇನೆ ಮತ್ತು ನಮ್ಮಲ್ಲಿ 100 ಕ್ಕೂ ಹೆಚ್ಚು ಹುದ್ದೆಗಳಿವೆ. ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆ ಹುದ್ದೆಗಳ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಅರೆಕಾಲಿಕ ಶಿಕ್ಷಕರೊಂದಿಗೆ ನಾವು ನಿರ್ವಹಣೆ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೀಗಿದೆ. ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಸುಮಾರು ಎರಡು ಲಕ್ಷ ಜನರಿಗೆ ಉದ್ಯೋಗ ಸಿಕ್ಕಂತಾಗುತ್ತದೆ.

ನೀವು ರಾಜಕೀಯಕ್ಕೆ ಸೇರಿದ್ದು ಯಾಕೆ?
ನಾನು ಆಕಸ್ಮಿಕವಾಗಿ ರಾಜಕೀಯ ಸೇರಿದೆ. ನಾನು (ಕೃಷಿ) ವಿಜ್ಞಾನಿಯಾಗಿದ್ದೆ. ನಾನು ಆಸ್ಟ್ರೇಲಿಯಾದಲ್ಲಿದ್ದೆ. ಆ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಮಗ್ನನಾಗಿದ್ದೆ. ನಾನು ಆಗಲೇ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿ ಸೇರಿಕೊಂಡಿದ್ದೆ. ನಾಲ್ಕೂವರೆ ವರ್ಷಗಳ ನಂತರ ರಜೆಗಾಗಿ ಇಲ್ಲಿಗೆ ಬಂದಿದ್ದೆ. ನನ್ನ ತಂದೆ ವೈದ್ಯಕೀಯ ಕಾಲೇಜು ಪ್ರಾರಂಭಿಸುತ್ತಿದ್ದಾಗ ಆಂದಿನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ಆಹ್ವಾನಿಸಲು ಬಯಸಿದ್ದೆವು. ಆ ಸಮಯದಲ್ಲಿ ಅವರೊಂದಿಗೆ ಮಾತನಾಡುತ್ತಿದ್ದಾಗ, ಅವರು, ರಾಜಕೀಯಕ್ಕೆ ಸೇರ್ಪಡೆಗೊಳ್ಳುವಂತೆ ಕೇಳಿದ್ದರು. ನನಗೆ ಸ್ಫೂರ್ತಿ ನೀಡಿದ ವ್ಯಕ್ತಿ ಅವರೇ.

ಸಿಎಂ ಹುದ್ದೆ ವಿಚಾರದಲ್ಲಿ ನೀವು ಹೇಳಿಕೊಳ್ಳುವ ವ್ಯಕ್ತಿಯಲ್ಲ?
ನನಗೆ ನನ್ನದೇ ಆದ ವ್ಯಕ್ತಿತ್ವವಿದೆ. ನೀವು ಕೂಡ ನಾನು ಆಕ್ರಮಣಕಾರಿ ವ್ಯಕ್ತಿ ಅಲ್ಲ ಎಂದು ಹೇಳುತ್ತಿದ್ದೀರಿ. ನೀವೂ ಕೂಡ ಕೂಗಬೇಡಿ, ಕಿರುಚಬೇಡಿ, ಕೆಟ್ಟ ಪದಗಳನ್ನು ಬಳಸಬೇಡಿ. ನಾನು 35 ವರ್ಷಗಳಿಂದ ಇಂತಹದ್ದನ್ನು ನೋಡುತ್ತಿದ್ದೇನೆ, ಕೇಳುತ್ತಿದ್ದೇನೆ. ಆದರೆ, ನಾನು ಬದಲಾಗಿಲ್ಲ. ಹೌದು, ನಾನು ಆಕ್ರಮಣಕಾರಿ ವ್ಯಕ್ತಿ ಅಲ್ಲ. ಏಕೆಂದರೆ ನನ್ನ ವ್ಯಕ್ತಿತ್ವ ಅದಲ್ಲ. ಸಾರ್ವಜನಿಕ ಜೀವನಕ್ಕೆ ನಾನು ಯೋಗ್ಯ ವ್ಯಕ್ತಿಯಾಗಿದ್ದೇನೆ. ಹೀಗಾಗಿಯೇ ಇಲ್ಲಿಯವರೆಗೆ ಬಂದಿದ್ದೇನೆ. ಉಪಮುಖ್ಯಮಂತ್ರಿಯಾಗುವುದು... ತಮಾಷೆ ವಿಚಾರವಲ್ಲ. ಸಾರ್ವಜನಿಕ ಜೀವನದಲ್ಲಿ ಬಹಳಷ್ಟು ಕೆಲಸ ಮಾಡಿದ ನಾನು ಈಗ ಏಕೆ ಬದಲಾಗುತ್ತೇನೆ? ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಆಕ್ರಮಣಕಾರಿಯಾಗಿರಲಿಲ್ಲ. ಜನರು ಕೆಲವು ಯೋಗ್ಯ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ.

ಎಸ್ಸಿ/ಎಸ್ಟಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿತ್ತು. ಆದರೆ ಬಿಜೆಪಿ ನಿಮ್ಮನ್ನು ಹಿಂದಿಕ್ಕಿದಂತಿದೆ. ಖರ್ಗೆಯವರ ನಾಯಕತ್ವದಲ್ಲಿ ನೀವು ಆ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ನೀವು ಭಾವಿಸುತ್ತೀರಾ?
ನಾವು ಉತ್ತಮವಾಗಿ ಮಾಡಲು ಯೋಜಿಸುತ್ತಿದ್ದೇವೆ. ಇದು ನಾವು ಚರ್ಚಿಸಿದ ವಿಷಯವೂ ಆಗಿದೆ. ಎಸ್ಟಿ ಕ್ಷೇತ್ರ ಸೇರಿದಂತೆ 51 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಅವುಗಳನ್ನು ವಿಶೇಷ ಸ್ಥಿತಿಯಲ್ಲಿ ನೋಡುತ್ತಿದ್ದೇವೆ, ಏಕೆಂದರೆ ನಾವು ನಮ್ಮ ನೆಲೆಯನ್ನು ಕಳೆದುಕೊಂಡಿದ್ದೇವೆ. ಅದನ್ನು ಮರಳಿ ಪಡೆಯಲು ಮುಂದಾಗಿದ್ದೇವೆ.

ಎಎಪಿ ವಿನಾಶಕಾರಿ ಪಕ್ಷವಾಗಲಿದೆಯೇ?
ಇದು ಅವರಿಗೆ ಒಂದು ರೀತಿಯ ಪರೀಕ್ಷೆ ಎಂದು ಹೇಳಲು ಬಯಸುತ್ತೇನೆ.

ಬಿಜೆಪಿ ಮೋದಿ ಅಲೆಯನ್ನು ಅವಲಂಬಿಸಿದೆ. ಇದು ಕಾಂಗ್ರೆಸ್ ಯೋಜನೆಗಳನ್ನು ಛಿದ್ರಗೊಳಿಸುತ್ತದೆ ಎಂದು ನೀವು ಭಾವಿಸುತ್ತೀರಾ?
ಮೋದಿಯವರು ವರ್ಚಸ್ಸುಳ್ಳ ನಾಯಕ ಎಂಬುದರಲ್ಲಿ ಸಂದೇಹವಿಲ್ಲ. ಆದರೆ. ಅವರು ಕರ್ನಾಟಕದಲ್ಲಿ ಏನು ಹೇಳುತ್ತಾರೆ? ಮೋದಿಯವರು ಕರ್ನಾಟಕಕ್ಕೆ ಮಾಡಿರುವ ಐದು ಕೆಲಸಗಳನ್ನು ಹೇಳಿ ಎಂದು ಯಾರಾದರೂ ಕೇಳಿದರೆ ಒಂದೂ ಸಿಗುವುದಿಲ್ಲ. ಒಂದು ಸಮಸ್ಯೆಯೂ ಬಗೆಹರಿದಿಲ್ಲ. ಮೇಕೆದಾಟು, ಕಳಸಾ ಬಂಡೂರಿ ಸಮಸ್ಯೆಗಳು ಇನ್ನೂ ಬಾಕಿ ಇವೆ. 2015ರಲ್ಲಿ ತುಮಕೂರಿನಲ್ಲಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಿ 2018ರಲ್ಲಿ ಮೊದಲ ಹೆಲಿಕಾಪ್ಟರ್‌ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಅದು ಇಂದಿಗೂ ಆಗಿಲ್ಲ. ತುಮಕೂರಿನ 6,500 ಮಂದಿಗೆ ಉದ್ಯೋಗ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೆವು. ಅದೂ ಕೂಡ ಇನ್ನೂ ಆಗಲಿಲ್ಲ. ಅವರು ಏನನ್ನೂ ಮಾಡಿಲ್ಲ. ಮೋದಿಯವರು ಅಲೆಯನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಆದರೆ, ಅದು ಕೆಲಸಕ್ಕೆ ಬರುವುದಿಲ್ಲ, 2014 ಮತ್ತು 2019 ರಲ್ಲಿ, ಅವರು ನಮ್ಮೆಲ್ಲರಿಗೂ ಕನಸನ್ನು ಮಾರಿದ್ದರು. ಮೋದಿ ವರ್ಚಸ್ಸುಳ್ಳ ನಾಯಕ. ಅವರಿದೆ ತಮ್ಮನ್ನು ತಾನು ಹೇಗೆ ವ್ಯಕ್ತಪಡಿಸಿ ಕೊಳ್ಳಬೇಕೆಂದು ತಿಳಿದಿದೆ, ಅದು ಕೆಲಸ ಮಾಡಬಹುದು ಅಥವಾ ಕೆಲಸ ಮಾಡದಿರಬಹುದು. ಕಾಂಗ್ರೆಸ್ಸಿಗರಾದ ನಾವು ಅದು ಕೆಲಸ ಮಾಡುವುದಿಲ್ಲ ಎಂದು ನೋಡುತ್ತೇವೆ.

ಅಲ್ಪಸಂಖ್ಯಾತ ಸಮುದಾಯದ ಮತಗಳ ವಿಭಜನೆಯ ಬಗ್ಗೆ ಪಕ್ಷವು ಚಿಂತನೆ ನಡೆಸುತ್ತಿದೆಯೇ?
ಅಲ್ಪಸಂಖ್ಯಾತರ ಮೂಲಭೂತ ಸಮಸ್ಯೆ ಭದ್ರತೆ. ಅವರಿಗೆ ಭದ್ರತೆ ಬೇಕು. ಭದ್ರತೆ ನೀಡುವವರು ಯಾರು? ಬಿಜೆಪಿ ಕೊಡುತ್ತದೆಯೇ? ಅವರ ಅಜೆಂಡಾ ವಿಭಿನ್ನವಾಗಿದೆ. ಇದು ಪ್ರತಿಯೊಬ್ಬ ಅಲ್ಪಸಂಖ್ಯಾತರಿಗೂ ತಿಳಿದಿದೆ. ಹಾಗಾದರೆ ಮುಂದಿನವರು ಯಾರು? ಅದು ಜೆಡಿಎಸ್ ಮತ್ತು ಕಾಂಗ್ರೆಸ್. ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದೇ? ಇದಕ್ಕೆ ಸಿಗುವ ಉತ್ತರ ಇಲ್ಲ. ಆದರೆ, ನಾವು ಮೊದಲಿನಂತೆ ಮಾಡಬಹುದು. ನಾವು ಕೆಲವು ತಪ್ಪುಗಳನ್ನು ಮಾಡಿರಬಹುದು. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಾವು ಅವರಿಗೆ ಕಾನೂನಿನ ದೃಷ್ಟಿಯಿಂದ ರಕ್ಷಣೆ, ಎಲ್ಲಾ ವಿಷಯದಲ್ಲಿ ಭದ್ರತೆ. ಅವರಿಗೆ ಅಭಿವೃದ್ಧಿಯನ್ನು ನೀಡುತ್ತೇವೆ. ನಾವು ಅವರ ಶಿಕ್ಷಣದತ್ತ ಗಮನ ಹರಿಸುತ್ತೇವೆ, ಅವರ ಸಣ್ಣ ಉದ್ಯಮಗಳು, ಕೈಗಾರಿಕೆಗಳು ಏನೇ ಇರಲಿ. ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ನಾವು ಅವರನ್ನು ಎರಡನೇ ದರ್ಜೆಯ ನಾಗರಿಕರೆಂದು ಪರಿಗಣಿಸುವುದಿಲ್ಲ. ಅದಕ್ಕಾಗಿಯೇ ಅವರು ಖಂಡಿತವಾಗಿಯೂ ನಮ್ಮನ್ನು ನಂಬುತ್ತಾರೆ ಮತ್ತು ನಮ್ಮೊಂದಿಗೆ ಇರುತ್ತಾರೆಂಬ ವಿಶ್ವಾಸವಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೇಲೆ ಏನಾದರೂ ಪರಿಣಾಮ ಬೀರಿದೆಯೇ?
ರಾಜಕೀಯವಾಗಿ ಹೇಳುವುದಾದರೆ ಖಂಡಿತವಾಗಿಯೂ ಇಲ್ಲ. ವೈಯಕ್ತಿಕವಾಗಿ ಹೇಳುವುದಾದರೆ ಹೌದು ಎನ್ನುತ್ತೇನೆ. ಇದೀಗ ಜನರು ರಾಹುಲ್ ಗಾಂಧಿಯವರನ್ನು ನೋಡುವ ರೀತಿ ಬದಲಾಗಿದೆ.

ಈ ಸಂಪೂರ್ಣ ಯಾತ್ರೆ ರಾಗಾ ಬ್ರಾಂಡ್‌ಗೆ ಮೌಲ್ಯವನ್ನು ನೀಡುವ ಕೆಲಸವೇ?
ಬ್ರ್ಯಾಂಡ್ ಅಲ್ಲ. ಇದೊಂದು ಮಿಷನ್ ಆಗಿದೆ. ದೇಶದಾದ್ಯಂತ ಜನರು ಅವರನ್ನು ಅರ್ಥಮಾಡಿಕೊಳ್ಳಬೇಕೆಂದು ಅವರು ಬಯಸಿದ್ದರು. ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಬಿಜೆಪಿಯವರು ಅವರಿಗಿಂತ ಭಿನ್ನರು ಎಂದು ಬಿಂಬಿಸಿದ್ದರು. ಆದ್ದರಿಂದ, ಅದನ್ನು ಬದಲಾಯಿಸಲು ಬಯಸಿದ್ದರು. ಯಾವುದೇ ಸಾಮರ್ಥ್ಯದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಪ್ರಾಮಾಣಿಕವಾಗಿ ಬದ್ಧರಾಗಿರುವ ವ್ಯಕ್ತಿ ರಾಹುಲ್ ಗಾಂಧಿ. ಅದನ್ನು ಅವರು ಮಾಡಿದ್ದಾರೆ. ಅವರ ರಾಜಕೀಯ ಒಲವು ಏನೇ ಇರಲಿ, ಅವರು ಪ್ರಾಮಾಣಿಕ ವ್ಯಕ್ತಿ ಎಂಬುದನ್ನು ಜನರು ಅರಿತುಕೊಂಡಿದ್ದಾರೆ. ಅಂತಿಮವಾಗಿ ಇದು ಪಕ್ಷಕ್ಕೆ ನೆರವಾಗಲಿದೆ.

ನೀವು ಯಾವ ಪಾತ್ರವನ್ನು ಹೆಚ್ಚು ಇಷ್ಟಪಡುತ್ತೀರಿ, ವಿಜ್ಞಾನಿ, ಕ್ರೀಡಾಪಟು, ಶಿಕ್ಷಣತಜ್ಞ ಅಥವಾ ರಾಜಕಾರಣಿ?
ಪ್ರತಿಯೊಂದೂ ವಿಭಿನ್ನ ತೃಪ್ತಿಯನ್ನು ನೀಡುತ್ತದೆ. ರಾಜಕೀಯವು ದಿನದ ಕೊನೆಯಲ್ಲಿ ತೃಪ್ತಿ ನೀಡುತ್ತದೆ. ನಾನು ಯಾರಿಗಾದರೂ ಏನನ್ನಾದರೂ ಮಾಡಿದ್ದೇನೆ ಎಂಬ ತೃಪ್ತಿಯನ್ನು ಅದು ನೀಡುತ್ತದೆ. ಬಡ ವಿದ್ಯಾರ್ಥಿಗಳು ಸಹಾಯಕ್ಕಾಗಿ ಬರುತ್ತಾರೆ ಮತ್ತು ಹುಲ್ಲಿನ ಗುಡಿಸಲಿನಲ್ಲಿ ವಾಸಿಸುವ ಕುಟುಂಬಕ್ಕೆ ನೀವು ಮನೆಯನ್ನು ನಿರ್ಮಿಸಿದರೆ ಸಂತೋಷವಾಗುತ್ತದೆ. ನೀರಾವರಿಯಂತಹ ದೊಡ್ಡ ಯೋಜನೆ ಮಾಡಿದರೆ ಖುಷಿಯಾಗುತ್ತದೆ. 85 ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಸಾಧ್ಯವಾಗಿದೆ. ನೆಲಮಂಗಲದಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭಿಸಿದ್ದೇವೆ. ನಾನು ರಾಷ್ಟ್ರಕ್ಕಾಗಿ ಏನನ್ನಾದರೂ ಮಾಡುತ್ತಿದ್ದೇನೆ ಎಂಬ ಭಾವನೆ ನನಗಿದೆ. ನನ್ನ ತಂದೆ (HM ಗಂಗಾಧರಯ್ಯ) 1979 ರಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿದರು. ಅಲ್ಲಿಂದ ಮೂವತ್ತು ಸಾವಿರ ಪದವೀಧರರು ಮತ್ತು ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಇನ್ನೂ ಆರು ಸಾವಿರ ವೈದ್ಯರು ಉತ್ತೀರ್ಣರಾಗಿದ್ದಾರೆ.

ಕ್ರೀಡಾಪಟುವಾಗಿ 100 ಮೀಟರ್ ಓಟದಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದೇನೆ. ಅದರ ಸಂತೃಪ್ತಿಯೇ ಬೇರೆ. ವಿಜ್ಞಾನಿಯಾಗಿ, ನಾನು ಮೊದಲ ಬಾರಿಗೆ ರಾಸಾಯನಿಕವನ್ನು ಕಂಡುಹಿಡಿದಿದ್ದೇನೆ ಅದು ಅದ್ಭುತವಾದ ತೃಪ್ತಿಯನ್ನು ನೀಡಿತು, ನನ್ನ ಪ್ರಾಧ್ಯಾಪಕರು ನನಗೆ ಬೆನ್ನು ತಟ್ಟಿದರು. ನಾನು ನನ್ನ ಪಿಎಚ್‌ಡಿಗಾಗಿ ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಒಂಬತ್ತು ಪೇಪರ್‌ಗಳನ್ನು ಪ್ರಕಟಿಸಿದೆ ಮತ್ತು ಫ್ರಾನ್ಸ್, ಕೆನಡಾ, ಯುಎಸ್‌ನ ಕ್ಯಾಲಿಫೋರ್ನಿಯಾ ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪೋಸ್ಟ್-ಡಾಕ್ಟರೇಟ್ ಹುದ್ದೆಗಳಿಗೆ ಒಂದೇ ಸಮಯದಲ್ಲಿ ಆಯ್ಕೆಯಾದೆ.

ನೀವು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿಯಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಆದಾಯ ತೆರಿಗೆ ವ್ಯವಸ್ಥೆ ನಿಯಂತ್ರಿಸಲು ಕೆಲವು ಸಂಸ್ಥೆಗಳಿವೆ. ನಮ್ಮ ಸಂಸ್ಥೆಗೆ 65 ವರ್ಷಗಳು ತುಂಬಿವೆ. ಇಷ್ಟು ವರ್ಷ ನಮಗೆ ಒಂದೇ ಒಂದು ನೋಟೀಸ್ ಕೂಡ ಬಂದಿರಲಿಲ್ಲ. ಏಕಾಏಕಿ 200 ಮಂದಿ ಬಂದು ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ. ಅದರ ಬಗ್ಗೆ ನೀವೇನು ಹೇಳುತ್ತೀರಿ? ನಾನು ಡಿಸಿಎಂ ಆಗಿದ್ದು, ಸರ್ಕಾರವನ್ನು ನೋಡಿಕೊಳ್ಳುತ್ತಿದ್ದೆ ಎಂಬುದಕ್ಕಾಗಿ ಈ ದಾಳಿಯಾಯಿತು. ಅವರು ನೋಟೀಸ್ ನೀಡಬಹುದಿತ್ತು ಮತ್ತು ತೆರಿಗೆ ವಂಚಿಸುವುದು ಕಂಡುಬಂದಲ್ಲಿ ದಂಡ ವಿಧಿಸಲು ಅವಕಾಶವಿದೆ. ಎಲ್ಲಿಯೋ ಈ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಜನರನ್ನು ಮಾತ್ರ ಏಕೆ ಟಾರ್ಗೆಟ್ ಮಾಡಲಾಗುತ್ತಿದೆ?

ನೀವು ಅಧಿಕಾರಕ್ಕೆ ಬರುವ ಭರವಸೆಯಲ್ಲಿದ್ದೀರಿ. 2024 ರ ಲೋಕಸಭಾ ಚುನಾವಣೆ ಹೇಗಿರುತ್ತದೆ?
ನಮ್ಮ ಸ್ಥಾನಗಳು ಸುಧಾರಿಸುವ ಭರವಸೆಯಿದೆ. 100 ಸೀಟುಗಳಿಗಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಭರವಸೆಯಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿಯಾಗುವ ಅವಕಾಶವಿದೆಯೇ ಎಂದು ನೋಡೋಣ. ಅವರನ್ನು ಬಿಂಬಿಸುತ್ತಿರುವ ರೀತಿಯನ್ನು ನೋಡಿದರೆ ಸಾಧ್ಯತೆ ಇದೆ ಎಂದೆನಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com