ನಿಷೇಧದ ನಡುವೆಯೂ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಸಿದ್ಧಪಡಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರದ ಮೇಲೆ ಕೇಂದ್ರ ಸರಕಾರ ನಿರ್ಬಂಧಗಳನ್ನು ವಿಧಿಸಿದ್ದರೂ ಕೂಡ ಬೆಂಗಳೂರಿನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿರುವುದು ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಸಿದ್ಧಪಡಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರದ ಮೇಲೆ ಕೇಂದ್ರ ಸರಕಾರ ನಿರ್ಬಂಧಗಳನ್ನು ವಿಧಿಸಿದ್ದರೂ ಕೂಡ ಬೆಂಗಳೂರಿನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿರುವುದು ಕಂಡು ಬಂದಿದೆ.

ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್‌ಎ) ಕಚೇರಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ - 'ಇಂಡಿಯಾ: ದಿ ಮೋದಿ ಕ್ವೆಶ್ಚನ್'ನ್ನು ಪ್ರದರ್ಶಿಸಿರುವುದಾಗಿ ತಿಳಿದುಬಂದಿದೆ.

ಎಐಎಸ್‌ಎ ಜನವರಿ 25 ರಂದು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತನ್ನ ಕಚೇರಿಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುತ್ತಿರುವುದಾಗಿ ಹೇಳಿ, ಆಹ್ವಾನವನ್ನು ನೀಡಿತ್ತು, ಭಾರತೀಯ ಸಮಾಜದಲ್ಲಿ ಕೋಮುವಾದದ ಹೆಚ್ಚಳವನ್ನು ಆಧರಿಸಿದ ಚಲನಚಿತ್ರದ ಪ್ರದರ್ಶನ ಮಾಡಲಾಗುತ್ತಿದ್ದು, ಈ ಕುರಿತ ಚರ್ಚೆಯಲ್ಲಿ ತಮ್ಮೊಂದಿಗೆ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿತ್ತು. ಆದರೆ, ಆಮಂತ್ರಣ ಪತ್ರದಲ್ಲಿ ಸಾಕ್ಷ್ಯಚಿತ್ರದ ಹೆಸರನ್ನು ನಮೂದಿಸಿರಲಿಲ್ಲ. ಸ್ಕ್ರೀನಿಂಗ್ ನಂತವೇ ಅದು ಬಿಬಿಸಿ ಸಾಕ್ಷ್ಯಚಿತ್ರವೆಂದು ತಿಳಿದುಬಂದಿದೆ.

ಈ ಸಂಬಂಧ ಎಐಎಸ್‌ಎ ಸದಸ್ಯರಾದ ಅರತ್ರಿಕಾ ಡೇ ಅವರು ಪ್ರತಿಕ್ರಿಯೆ ನೀಡಿ, “ಸುಮಾರು 40 ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ವೀಕ್ಷಿಸಲು ಎಐಎಸ್‌ಎ ಕಚೇರಿಗೆ ಬಂದಿದ್ದರು. ಸಾಕ್ಷ್ಯಚಿತ್ರ ವೀಕ್ಷಣೆ ಬಳಿಕ ಕೋಮುವಾದದ ಏರಿಕೆಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದರು ಎಂದು ಹೇಳಿದ್ದಾರೆ.

ಕ್ರೈಸ್ಟ್ ಕಾಲೇಜು, ಐಐಎಸ್‌ಸಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಸೇಂಟ್ ಜೋಸೆಫ್ಸ ಆಲ್-ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ಸದಸ್ಯ ಮತ್ತು ಇತರ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದರು ಎಂದು ತಿಳಿಸಿದ್ದಾರೆ.

ಸ್ಕ್ರೀನಿಂಗ್‌ನಲ್ಲಿದ್ದ ಮತ್ತೊಬ್ಬ ಎಐಎಸ್‌ಎ ಸದಸ್ಯೆ ಶ್ರೀಲಕ್ಷ್ಮಿ ಕುನ್ನಂದಿನ್ ಮಾತನಾಡಿ, ಪೊಲೀಸರ ಬಂಧನಕ್ಕೆ ಹೆದರಿ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ವೀಕ್ಷಿಸಲು ಬರುವುದಿಲ್ಲ. 10-15 ವಿದ್ಯಾರ್ಥಿಗಳು ಮಾತ್ರ ಬರುತ್ತಾರೆಂದು ನಿರೀಕ್ಷಿಸಿದ್ದೆವು. ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಯಾವುದೇ ಗೊಂದಲಗಳು ಎದುರಾಗಿರಲಿಲ್ಲ. ಸುಗಮವಾಗಿ ನಡೆಯಿತು. ನಂತರ ನಾವು ಕೋಮುವಾದದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆವು, ವಿಶೇಷವಾಗಿ 2002 ರಲ್ಲಿ ಗೋಧ್ರಾ ನಂತರದ ಗಲಭೆಗಳ ಕುರಿತು ಚರ್ಚೆ ನಡೆಸಿದೆವು. ಸಾಕ್ಷ್ಯಚಿತ್ರದ ಮೇಲಿನ ನಿಷೇಧವು ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ.  ನಿಷೇಧವು ಸತ್ಯವನ್ನು ಮರೆಮಾಚುವ ಪ್ರಯತ್ನದಂತೆ ತೋರುತ್ತದೆ ಎಂದಿದ್ದಾರೆ.

ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಇತ್ತೀಚೆಗೆ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ಪಠಾನ್ ಚಿತ್ರದ ಹೆಸರಿನಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಜನರು ಅದನ್ನು ಡೌನ್‌ಲೋಡ್ ಮಾಡಿಕೊಂಡು ನೋಡುತ್ತಾರೆಂದು ತಿಳಿದುಬಂದಿದೆ.

ಈ ನಡುವೆ ಸಾಕ್ಷ್ಯಚಿತ್ರ ಪ್ರಸಾರದ ವಿರುದ್ಧ ಈವರೆಗೂ ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಯಾವುದೇ ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸದ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com