ಶಾಲೆ ಅಥವಾ ಸದನ.. ಸರಿಯಾದ ಸಮಯಕ್ಕೆ ಬರಬೇಕು: ಸಚಿವ ಮಧು ಬಂಗಾರಪ್ಪಗೆ ಸ್ಪೀಕರ್ ಖಾದರ್ ಸಲಹೆ, ಪ್ರದೀಪ್ ಈಶ್ವರ್ ಗೆ ತರಾಟೆ

ಶಾಲೆಯಾಗಲಿ ಅಥವಾ ಸದನವಾಗಲಿ.. ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕು ಎಂದು ಸ್ಪೀಕರ್ ಯುಟಿ ಖಾದರ್ ಸದಸ್ಯರಿಗೆ ಸಲಹೆ ನೀಡಿದ್ದಾರೆ.
ಸ್ಪೀಕರ್ ಯುಟಿ ಖಾದರ್, ಮಧು ಬಂಗಾರಪ್ಪ, ಪ್ರದೀಪ್ ಈಶ್ವರ್
ಸ್ಪೀಕರ್ ಯುಟಿ ಖಾದರ್, ಮಧು ಬಂಗಾರಪ್ಪ, ಪ್ರದೀಪ್ ಈಶ್ವರ್

ಬೆಂಗಳೂರು: ಶಾಲೆಯಾಗಲಿ ಅಥವಾ ಸದನವಾಗಲಿ.. ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕು ಎಂದು ಸ್ಪೀಕರ್ ಯುಟಿ ಖಾದರ್ ಸದಸ್ಯರಿಗೆ ಸಲಹೆ ನೀಡಿದ್ದಾರೆ.

ವಿಧಾನಸಭೆ ಅಧಿವೇಶನಕ್ಕೆ ತಡವಾಗಿ ಬಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಉದ್ದೇಶಿಸಿ ಸ್ಪೀಕರ್ ಯುಟಿ ಖಾದರ್ ಈ ಮಾತನ್ನಾಡಿದ್ದು, ವಿಧಾನಸಭೆಯಾಗಲಿ ಅಥವಾ ಶಾಲೆ, ಸಮಯಕ್ಕೆ ಸರಿಯಾಗಿ ಬರಬೇಕು ಎಂದು ಸಲಹೆ ನೀಡಿದರು.

ಈ ಹಿಂದಷ್ಟೇ ಕಲಾಪದ ಎಲ್ಲಾ ದಿನಗಳಲ್ಲೂ ನಿಗದಿತ ಸಮಯಕ್ಕೆ ಬರುವ ಶಾಸಕರಿಗೆ ಬಹುಮಾನ ನೀಡಲಾಗುವುದು ಎಂದು ಸ್ಪೀಕರ್ ಖಾದರ್ ಬುಧವಾರ ಹೇಳಿದ್ದರು. ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ್ದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಕೌಜಲಗಿ ಮಹಾಂತೇಶ್, ಎಸ್ ಸುರೇಶ್ ಕುಮಾರ್, ಪ್ರದೀಪ್ ಈಶ್ವರ್, ಎಸ್ ಆರ್ ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಶಿವಲಿಂಗೇಗೌಡ ಸೇರಿದಂತೆ ಇತರ ಶಾಸಕರ ಹೆಸರು ಓದಿದ ಸ್ಪೀಕರ್ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ವೇಳೆ ಕಲಾಪದ ಎಲ್ಲಾ ದಿನಗಳು ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ನೀಡಲಾಗುವುದು ಎಂದು ಸ್ಪೀಕರ್ ಘೋಷಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರೊಬ್ಬರು, ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ ಶಾಸಕರಿಗೆ ಬಹುಮಾನ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ. ಬಹುಮಾನ ಘೋಷಣೆ ಬದಲಾಗಿ ಸರ್ಟಿಫಿಕೇಟ್ ಕೊಡಲು ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಸಮ್ಮತಿ ಸೂಚಿಸಿದ್ದರು.

ಕಲಾಪದಲ್ಲಿ ನೂತನ ಶಾಸಕ ಪ್ರದೀಪ್ ಈಶ್ವರ್ ಎಡವಟ್ಟು, ಸ್ಪೀಕರ್ ಗರಂ
ಇನ್ನು ಇದೇ ವೇಳೆ ಇಂದು ಸದನದಲ್ಲಿ ಮಾತನಾಡುವ ಭರದಲ್ಲಿ ಚಿಕ್ಕಬಳ್ಳಾಪುರ ನೂತನ ಶಾಸಕ ಪ್ರದೀಪ್ ಈಶ್ವರ್ ಅವರು ಎಡವಟ್ಟು ಮಾಡಿಕೊಂಡು ಸ್ಪೀಕರ್ ಅಸಮಾಧಾನಕ್ಕೆ ತುತ್ತಾದರು. ಕೆಎಸ್ ಆರ್ ಟಿಸಿ ಸಿಬ್ಬಂದಿ ಅತ್ಮಹತ್ಯೆ ವಿಚಾರವಾಗಿ ಮಾತನಾಡುತ್ತಿದ್ದ ಪ್ರದೀಪ್ ಈಶ್ವರ್ ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದರು.

ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋ ಎದುರು ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಎಡವಟ್ಟು ಮಾಡಿಕೊಂಡದ್ದು ಗಮನ ಸೆಳೆಯಿತು. 'ಒಂದು ಸಾವಿಗೆ ಇವರು ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು, ಅವರಿಗೂ ನ್ಯಾಯ ಕೊಡಿಸಲು ಹೋರಾಟ ಮಾಡಬೇಕಲ್ಲ' ಎಂದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್, 'ಏ ಪ್ರದೀಪ್.. ಸಾವು ಆಗಲಿಲ್ಲ ಮಾರಾಯ. ಕುತ್ಕೋ ನೀನು ಎಂದರು.

ಸ್ಪೀಕರ್ ಯು.ಟಿ.ಖಾದರ್ ಅವರ ಮನವಿಯ ಬಳಿಕ ಪ್ರತಿಪಕ್ಷಗಳ ಶಾಸಕರು ಧರಣಿ ಕೈಬಿಟ್ಟು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡರು. ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಶಾಸಕರು ಸಚಿವ ಚೆಲುವರಾಯ ಸ್ವಾಮಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com