ನೈಸ್ ರಸ್ತೆಯಲ್ಲಿ ದರೋಡೆಕೋರರ ಕೈಚಳಕ: ಅಪರಿಚಿತ ವ್ಯಕ್ತಿಗಳಿಗೆ ಲಿಫ್ಟ್ ಕೊಡುವುದಕ್ಕೂ ಮುನ್ನ ಎಚ್ಚರ!
ಬೆಂಗಳೂರಿನಲ್ಲಿ ನೈಟ್ ಲೈಫ್ ಎಂಜಾಯ್ ಮಾಡಲೆಂದು ರಾತ್ರಿ ವೇಳೆ ಓಡಾಡುವಾಗ ಕೊಂಚ ಎಚ್ಚರ ಇರಲಿ. ಕಾರಣ ನಿಮ್ಮನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ತಂಡ ನೈಸ್ ರಸ್ತೆಯಲ್ಲಿ ಸಕ್ರಿಯವಾಗಿದೆ.
Published: 08th July 2023 01:18 PM | Last Updated: 08th July 2023 01:18 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನಲ್ಲಿ ನೈಟ್ ಲೈಫ್ ಎಂಜಾಯ್ ಮಾಡಲೆಂದು ರಾತ್ರಿ ವೇಳೆ ಓಡಾಡುವಾಗ ಕೊಂಚ ಎಚ್ಚರ ಇರಲಿ. ಕಾರಣ ನಿಮ್ಮನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ತಂಡ ನೈಸ್ ರಸ್ತೆಯಲ್ಲಿ ಸಕ್ರಿಯವಾಗಿದೆ.
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿ ಕೆರೆಯ ಸಮೀಪವಿರುವ ಬೇಗೂರು ಕೊಪ್ಪ ಕ್ರಾಸ್ ಸೇತುವೆ ಬಳಿ 40 ನಿಮಿಷಗಳ ಅಂತರದಲ್ಲಿ ಇಬ್ಬರು ಸವಾರರನ್ನು ದರೋಡೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಎರಡೂ ಘಟನೆಗಳೂ ಜೂನ್ 30ರ ರಾತ್ರಿ 9.10 ರಿಂದ 9.50 ರ ನಡುವೆ ನಡೆದಿರುವುದಾಗಿ ತಿಳಿದುಬಂದಿದೆ.
ಬಿಜಿ ರಸ್ತೆಯ ಬಿಕೆ ಸರ್ಕಲ್ ನಿವಾಸಿ ಸಿ ಇಳವರಸನ್ (37) ಮತ್ತು ಮಂಗನಹಳ್ಳಿಯ ಉದಯ್ ಲೇಔಟ್ ನಿವಾಸಿ 35 ವರ್ಷದ ಕೇವಲ್ ರಾಮ್ ಎಂಬುವವರನ್ನು ದರೋಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೆಲಸದಿಂದ ದ್ವಿಚಕ್ರ ವಾಹನದಲ್ಲಿ ಇಳವರಸನ್ ಅವರು ಮರಳುತ್ತಿದ್ದರು, ರಾತ್ರಿ 9.50ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲಿಫ್ಟ್ ನೀಡುವಂತೆ ಕೇಳಿದ್ದಾನೆ. ಈ ವೇಳೆ ಇಳವರಸನ್ ಬೈಕ್ ನಿಲ್ಲಿಸಿದಾಗ ಮೊಬೈಲ್ ಕಸಿದುಕೊಂಡು, ಹಣ ನೀಡುವಂತೆ ಬೆದರಿಸಿದ್ದಾನೆ. ಈ ವೇಳೆ ಇಳವರಸನ್ ಕೂಗಾಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಮತ್ತಿಬ್ಬರು ದುಷ್ಕರ್ಮಿಗಳು ಬರುತ್ತಿರುವುದನ್ನು ಕಂಡ ಇಳವರಸನ್ ವಾಹನವನ್ನು ಅಲ್ಲಿಯೇ ಬಿಟ್ಟು ಓಡಲು ಆರಂಭಿಸಿದ್ದಾರೆ. ಸ್ವಲ್ಪ ದೂರ ಓಡಿದ ಬಳಿಕ ಮತ್ತೊಬ್ಬ ಬೈಕ್ ಸವಾರನಿಂದ ಲಿಫ್ಟ್ ಪಡೆದುಕೊಂಡು ತುಮಕೂರು ರಸ್ತೆ ಟೋಲ್ ವರೆಗೆ ತಲುಪಿದ್ದಾರೆ. ಬಳಿಕ ಅಲ್ಲಿಂದ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಹೋಗಿ ನೋಡಿದಾಗ ಸ್ಥಳದಲ್ಲಿಯೇ ದ್ವಿಚಕ್ರ ವಾಹನ ಪತ್ತೆಯಾಗಿದೆ.
ಮತ್ತೊಂದು ಘಟನೆಯಲ್ಲಿ, ಕೇವಲ್ ರಾಮ್ ಅವರನ್ನು ರಾತ್ರಿ 9.10 ರ ಸುಮಾರಿಗೆ ಅದೇ ಸ್ಥಳದಲ್ಲಿ ದರೋಡೆ ಮಾಡಲಾಗಿದೆ. ವ್ಯಕ್ತಿ ಕೆಲಸ ಮುಗಿಸಿ ಹೊಸೂರು ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ದುಷ್ಕರ್ಮಿಗಳು ಲಿಫ್ಟ್ ಕೇಳುವ ನೆಪದಲ್ಲಿ ವಾಹನ ನಿಲ್ಲಿಸಿದ್ದು, ಬಳಿಕ 15,000 ರುಪಾಯಿ ಮೌಲ್ಯದ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ವ್ಯಕ್ತಿಗಳ ಮೇಲೆ ದಾಳಿ ಮಾಡಿಲ್ಲ ಎಂದು ತನಿಖೆಯ ಭಾಗವಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಹುಳಿಮಾವು ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.