ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದ್ದು, ಈ ವೇಳೆ ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರ ಸೇವಿಸಿ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ್ದರು.
ಇಂದು ಬೆಳ್ಳಂ ಬೆಳಿಗ್ಗೆಯೇ ಬಿಬಿಎಂಪಿಯ ಯಾವುದೇ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಚನೆ ನೀಡದೆ ದಿಢೀರ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲಿನ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಮೊದಲು ದಾಸರಹಳ್ಳಿ ವಲಯದ ಚೊಕ್ಕಸಂದ್ರ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ಗೆ ಬೆಳಿಗ್ಗೆ 9ರ ಸುಮಾರಿಗೆ ತೆರಳಿದ ಡಿ.ಕೆ.ಶಿ ತಿಂಡಿ ನೀಡುವಂತೆ ಕೇಳಿದರು. ಆದರೆ ಅಲ್ಲಿ ತಿಂಡಿ ಖಾಲಿಯಾಗಿತ್ತು. 280 ಪ್ಲೇಟ್ ತಿಂಡಿ ಖಾಲಿಯಾಗಿದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕ ಹೇಳಿದಾಗ ಮಾಧ್ಯಮಮಿತ್ರರಿಗೆ ತಿಂಡಿಕೊಡಿಸೋಣ ಎಂದುಕೊಂಡಿದ್ದೆ ಆದರೆ ಖಾಲಿಯಾಗಿದೆಯಲ್ಲ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದರು.
ನಂತರ ದಾಸರಹಳ್ಳಿಯ 15ನೇ ವಾರ್ಡಿನ ಇಂದಿರಾ ಕಾಂಟೀನ್ ಗೆ ತೆರಳಿ ತಿಂಡಿ ಲಭ್ಯವಿದ್ದು, ಉಪ್ಪಿಟ್ಟು ಮತ್ತು ಕೇಸರಿಬಾತ್ ತಿಂದು ಆಹಾರದ ಗುಣಮಟ್ಟದ ಬಗ್ಗೆ ತಿಂಡಿ ತಿನ್ನುತ್ತಿದ್ದ ನಾಗರಿಕರನ್ನು ಮಾತನಾಡಿಸಿ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕ್ಯಾಂಟೀನ್ ವ್ಯಕ್ತಿ ತಿಂಡಿಗೆ 5 ರೂ.ಗೆ ಬದಲು 10 ರೂ. ಪಡೆದಿದ್ದನ್ನು ಗಮನಿಸಿದ ಉಪಮುಖ್ಯಮಂತ್ರಿಗಳು ಅದನ್ನು ಪ್ರಶ್ನಿಸಿದರು. ಆಗ ಅವರು 2 ಪ್ಲೇಟ್ ತೆಗೆದುಕೊಂಡಿದ್ದಾರೆ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳು ಇಂದಿರಾಕ್ಯಾಂಟೀನ್‌ನ ಕುಂದು ಕೊರತೆ ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಅಲ್ಲೂ ದುರಸ್ಥಿಯಲ್ಲಿರುವುದರ ಮಾಹಿತಿ ಪಡೆದು ತಕ್ಷಣ ಸರಿಪಡಿಸಲು ಸೂಚಣೆ ನೀಡಿದರು. ಹಾಗೆಯೇ ಪ್ರತಿವಾರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದಿರಾ ಕ್ಯಾಂಟಿನ್‌ಗೆ ಡಿಕೆಶಿ ದಿಢೀರ್ ಭೇಟಿ
ಇದಕ್ಕೂ ಮೊದಲು ದಾಸರಹಳ್ಳಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸಾರ್ವಜನಿಕರೊಟ್ಟಿಗೆ ಆಹಾರದ ರುಚಿ ಬಗ್ಗೆ ಮಾಹಿತಿ ಪಡೆಯುತ್ತಾ ಕೇಸರಿಬಾತ್ ಉಪ್ಪಿಟ್ಟು ಸೇವಿಸಿದರು. ಈ ವೇಳೆ ಮಾತನಾಡಿದ ಅವರು, ‘ಬಜೆಟ್ನಲ್ಲಿ ಅವರು ಎಷ್ಟೆ ಅನುದಾನ ನೀಡಲಿ, ನಾವು ರೆವೆನ್ಯೂ ಜನರೇಟ್ ಮಾಡುತ್ತೇವೆ. ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ ಹಾಕುವ ಮೂಲಕ ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಎಂದರು. ಇದಕ್ಕೂ ಮುನ್ನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್‌ಗೆ ತೆರಳಿದ ಡಿಕೆ ಶಿವಕುಮಾರ್ ತಿಂಡಿ ನೀಡುವಂತೆ ಕೇಳಿದರು. ಆದರೆ ತಿಂಡಿ ಖಾಲಿಯಾಗಿತ್ತು.
ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ
ಇಂದಿರಾ ಕ್ಯಾಂಟೀನ್ ಭೇಟಿ ನಂತರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಗಡಿ ರಸ್ತೆಯ ಸೀಗೆಹಳ್ಳಿ, ಕನ್ನಹಳ್ಳಿ, ದೊಡ್ಡಬಿದರಕಲ್ಲುಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೀಗೆಹಳ್ಳಿ ಘನತ್ಯಾಜ್ಯ ಸಂಸ್ಕಾರಣ ಘಟಕದಲ್ಲಿ 120 ಮೆಟ್ರಿಕ್ ಟನ್ ಹಸಿ ತ್ಯಾಜ್ಯ ಸಾಮರ್ಥ್ಯವಿದ್ದು, ಈ ಸಂಸ್ಕರಣಾ ಘಟಕವನ್ನು ಕೂಡಲೇ ಆರಂಭಿಸಲು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲೆಂದರಲ್ಲಿ ಕಸ ಸುರಿದವರಿಗೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದಾಗಿಯೂ ಹೇಳಿದರು. ಬೆಂಗಳೂರಿನ ಅಭಿವೃದ್ಧಿಗೆ ಸಂಪನ್ಮೂಲ ಕ್ರೂಢೀಕರಿಸಿ ಅಭಿವೃದ್ಧಿ ಮಾಡುತ್ತೇವೆ. ಆಸ್ತಿ ತೆರಿಗೆ ವಂಚನೆಗೆ ವಂನೆಗೂ ಕಡಿವಾಣ ಹಾಕಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್‌ಗಿರಿನಾಥ್, ವಿಶೇಷ ಆಯುಕ್ತರಾದ ಹರೀಶ್‌ಕುಮಾರ್, ಜಂಟಿ ಆಯುಕ್ತ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ದಾರಿ ತಪ್ಪಿದ ಎಸ್ಕಾರ್ಟ್ ವಾಹನ, ಢಿಕ್ಕಿ
ಬೆಂಗಳೂರಿನ 2 ಸ್ಥಳಗಳಿಗೆ ಡಿಕೆ ಶಿವಕುಮಾರ್ ಸರ್ಪ್ರೈಸ್ ವಿಸಿಟ್ ಮಾಡಲಿದ್ದು, ರಸ್ತೆಯಲ್ಲಿ ತೆರೆಳುವ ವೇಳೆ ಬೆಂಗಾವಲು ವಾಹನ ದಾರಿ ತಪ್ಪಿದ ಘಟನೆ ನಡೆದಿದೆ. ಡಿಕೆಸಿ ವಾಹನ ಬಿಟ್ಟು ಮುಂದೆ ಹೋಗಿದ್ದು, ಬಳಿಕ ತಿರುವು ತೆಗೆದುಕೊಂಡು ಬಂದಿದೆ. ಅಲ್ಲಿಯವರೆಗೆ ಮಾರ್ಗ ಮಧ್ಯೆ ಡಿಕೆ ಶಿವಕುಮಾರ್ ವಾಹನ ನಿಲ್ಲಿಸಿದ್ದಾರೆ. ಅಂತೆಯೇ ಮಾಗಡಿ ರೋಡ್ನಲ್ಲಿ ಡಿಕೆ ವಾಹನ ಹಿಂಬಾಲಿಸುತ್ತಿದ್ದ ಪಾಲಿಕೆ ಆಯುಕ್ತರ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಪಾಲಿಕೆ ವಾಹನ ಗುದ್ದಿದೆ. ಅದೃಷ್ಟವಶಾತ್ ಡಿಕ್ಕಿ ಹೊಡೆದ ವಾಹನದಲ್ಲಿ ಕಮಿಷನರ್ ಇರಲಿಲ್ಲ.
Advertisement