'ಶಕ್ತಿ ಯೋಜನೆ': ಒಂದು ತಿಂಗಳಲ್ಲಿ 16 ಕೋಟಿಗೂ ಹೆಚ್ಚು ಮಹಿಳೆಯರಿಂದ ಸೌಲಭ್ಯ ಬಳಕೆ!

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೊಂಡು ಒಂದು ತಿಂಗಳು ಪೂರ್ಣಗೊಂಡಿದ್ದು, ಯೋಜನೆ ಆರಂಭವಾದ ದಿನದಿಂದ ಈವರೆಗೂ 16 ಕೋಟಿಗೂ ಹೆಚ್ಚು ಮಹಿಳೆಯರು ಸೌಲಭ್ಯ ಬಳಕೆ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಗೊಂಡು ಒಂದು ತಿಂಗಳು ಪೂರ್ಣಗೊಂಡಿದ್ದು, ಯೋಜನೆ ಆರಂಭವಾದ ದಿನದಿಂದ ಈವರೆಗೂ 16 ಕೋಟಿಗೂ ಹೆಚ್ಚು ಮಹಿಳೆಯರು ಸೌಲಭ್ಯ ಬಳಕೆ ಮಾಡಿಕೊಂಡಿದ್ದಾರೆ.

ಬಸ್ ನಿಗಮಗಳ ಅಂಕಿಅಂಶಗಳ ಪ್ರಕಾರ, ಜೂನ್ 11 ರಿಂದ ಜುಲೈ 9 ರವರೆಗೆ 16.09 ಕೋಟಿಗೂ ಹೆಚ್ಚು ಮಹಿಳೆಯರು ಸೌಲಭ್ಯವನ್ನು ಪಡೆದುಕೊಂಡಿದ್ದು, ಈ ಅವಧಿಯಲ್ಲಿ ನೀಡಲಾದ ಟಿಕೆಟ್‌ಗಳ ಒಟ್ಟು ಮೌಲ್ಯ 382 ಕೋಟಿ ರೂ. ಆಗಿದೆ ಎಂದು ತಿಳಿದುಬಂದಿದೆ.

ನಾಲ್ಕು ಬಸ್ ನಿಗಮಗಳ ಪೈಕಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಅತೀ ಹೆಚ್ಚು 5.18 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 4.83 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದರೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ)ಯಲ್ಲಿ 3.87 ಕೋಟಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಯಲ್ಲಿ 2.21 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ.

ಯೋಜನೆಯಡಿ ಮಹಿಳೆಯರಿಗೆ ನೀಡಲಾದ ಒಟ್ಟು ಟಿಕೆಟ್ ಮೌಲ್ಯದಲ್ಲಿ ಕೆಎಸ್‌ಆರ್‌ಟಿಸಿ 143.13 ಕೋಟಿ ರೂ.ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎನ್‌ಡಬ್ಲ್ಯೂಕೆಆರ್‌ಟಿಸಿ ರೂ 99.16 ಕೋಟಿ, ಕೆಕೆಆರ್‌ಟಿಸಿ ರೂ 73.41 ಕೋಟಿ ಮತ್ತು ಬಿಎಂಟಿಸಿ ರೂ 66.81 ಕೋಟಿಗಳಷ್ಟು ವೆಚ್ಚವಾಗಿದೆ ಎಂದು ವರದಿಗಳು ತಿಳಿಸಿವೆ.

2022 ರಲ್ಲಿ BMTC ಯ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 27.34 ಲಕ್ಷ ಮತ್ತು KSRTC 23.59 ಲಕ್ಷ ಇತ್ತು. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆ ದಿಢೀರ್ ಏರಿಕೆಯಾಯಿತು.

ಇದೀಗ ಬಿಎಂಟಿಸಿಯ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 38 ಲಕ್ಷ ಇದ್ದರೆ, ಕೆಎಸ್‌ಆರ್‌ಟಿಸಿಯ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 30 ಲಕ್ಷ ದಾಟಿದೆ,

ಇದಲ್ಲದೆ ಪುರುಷ ಸವಾರರ ಸಂಖ್ಯೆಯಲ್ಲಿಯೂ ಕೂಡ ಹೆಚ್ಚಾಗಿದ್ದು, ಬಸ್ ನಿಗಮಗಳ ಆದಾಯದಲ್ಲೂ ಜಿಗಿತಗಳು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com