ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಶೀಘ್ರದಲ್ಲೇ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಹೇಳಿದ್ದಾರೆ.
ಆಸಕ್ತ ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಪರೀಕ್ಷೆ ನಡೆಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಅವರು ಮಾತನಾಡಿ, ಪರೀಕ್ಷೆ ನಡೆಯಲು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅನುಮತಿಗಾಗಿ ಕಾಯಲಾಗುತ್ತಿದೆ. ಆಗಸ್ಟ್‌ನಲ್ಲಿ ಪರೀಕ್ಷೆಯನ್ನು ನಡೆಸಲು ಚಿಂತನೆ ನಡೆಸಿದ್ದೆವು. ಆದರೆ, ಯುಜಿಸಿಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
2022ನೇ ಶೈಕ್ಷಣಿಕ ಸಾಲಿನಲ್ಲಿ ಆಯಾ ರಾಜ್ಯ ಸರ್ಕಾರಗಳು ಗುರುತಿಸಿರುವ ರಾಜ್ಯ ನೋಡೆಲ್ ಏಜನ್ಸಿಗಳಿಗೆ ಯುಜಿಸಿ ಯಿಂದ ಮಾನ್ಯತೆ ಅಗತ್ಯವಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಯನ್ನು ನಡೆಸಲು ಮೈಸೂರು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡಿರುತ್ತದೆ. ಆದರೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಜುಲೈ-2021 ರಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಗೂ ಇತರರು ಸಂಪೂರ್ಣ ಹೊಣೆಗಾರರೆಂದು ದೂರುಗಳು ಬಂದಿದ್ದು, ಇದರ ಬಗ್ಗೆ ಪ್ರತ್ಯೇಕ ತನಿಖೆಗೆ ಸಮಿತಿ ರಚಿಸಿ ಆದೇಶಿಸಲಾಗಿದೆ.
ಈ ರೀತಿ ಅವ್ಯವಹಾರಗಳು ನಡೆದಲ್ಲಿ, ಅರ್ಹತೆಯಿರುವ/ ಪ್ರತಿಭಾವಂತ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗುವುದರಿಂದ ಹಾಗೂ ಮುಂಬರುವ ಯುವ ಪೀಳಿಗೆಗೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದೇ ಇರುವುದರಿಂದ, ಪರೀಕ್ಷೆಯಲ್ಲಿ ಪಾರದರ್ಶಕತೆಯನ್ನು ತರಲು ಕೆ-ಸೆಟ್ ಪರೀಕ್ಷೆಯನ್ನು ಸ್ವತಂತ್ರ ಸಂಸ್ಥೆ ನಡೆಸುವುದು ಸೂಕ್ತವಾಗಿರುತ್ತದೆಯೇ ಹೊರತು ಯಾವುದೇ ವಿಶ್ವವಿದ್ಯಾಲಯದಿಂದಲ್ಲ ಎಂಬುದನ್ನು ಮನಗಂಡು ಸರ್ಕಾರವು, ಮೈಸೂರು ವಿಶ್ವವಿದ್ಯಾಲಯವು 2021 ಜುಲೈ ನಲ್ಲಿ ನಡೆಸಿದ ಕೆ-ಸೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳ ಹಿನ್ನಲೆಯಲ್ಲಿ 2022ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲು ತೀರ್ಮಾನಿಸಿ, ಅದರಂತೆ ಆದೇಶ ಹೊರಡಿಸಲಾಗಿದೆ.
ಯುಜಿಸಿಯಿಂದ ಮಾನ್ಯತೆ ಅಗತ್ಯವಿರುವ ರಾಜ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಯುಜಿಸಿಯ ಪರಿಕಲ್ಪನೆ ಮತ್ತು ವ್ಯಾಪ್ತಿಯಡಿ ರಾಜ್ಯ ಸರ್ಕಾರವು ಒಂದು ಏಜನ್ಸಿಯನ್ನು ಗುರುತಿಸಬಹುದು, ಅದು ವಿಶ್ವವಿದ್ಯಾನಿಲಯವಾಗಿರಬಹುದು ಅಥವಾ ಪ್ರತಿಷ್ಠಿತ ಪರೀಕ್ಷಾ ಸಂಸ್ಥೆ ಅಥವಾ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರತಿಷ್ಠಿತ ಸಂಸ್ಥೆಯಾಗಿರಬಹುದೆಂಬ ಅವಕಾಶದಡಿ 2022ನೇ ಸಾಲನ್ನು ಒಳಗೊಂಡಂತೆ ಮುಂದಿನ ಆದೇಶದವರೆಗೆ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವಂತೆ ಆದೇಶಿಸಲಾಗಿತ್ತು.
Advertisement