ಮಾಲಿನ್ಯ ನಿಯಂತ್ರಣ ಮಂಡಳಿ- ಅರಣ್ಯ ಇಲಾಖೆಗಳು ಕೈಗಾರಿಕೆಗಳನ್ನು ಹೊಣೆಗಾರರನ್ನಾಗಿಸಬೇಕು: ಡಿಸಿಎಂ ಡಿಕೆ.ಶಿವಕುಮಾರ್

ಮಾಲಿನ್ಯ ನಿಯಂತ್ರಣದ ಕ್ರಮಗಳ ಅನುಷ್ಠಾನ ವಿಳಂಬದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ- ಅರಣ್ಯ ಇಲಾಖೆಗಳು ಕೈಗಾರಿಕೆಗಳನ್ನು ಹೊಣೆಗಾರರನ್ನಾಗಿಸಬೇಕೆಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಸೂಚನೆ ನೀಡಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಿಡಕ್ಕೆ ನೀರುಣಿಸಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಿಡಕ್ಕೆ ನೀರುಣಿಸಿದರು.
Updated on

ಬೆಂಗಳೂರು: ಮಾಲಿನ್ಯ ನಿಯಂತ್ರಣದ ಕ್ರಮಗಳ ಅನುಷ್ಠಾನ ವಿಳಂಬದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ- ಅರಣ್ಯ ಇಲಾಖೆಗಳು ಕೈಗಾರಿಕೆಗಳನ್ನು ಹೊಣೆಗಾರರನ್ನಾಗಿಸಬೇಕೆಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಸೂಚನೆ ನೀಡಿದ್ದಾರೆ.

ಕೆಎಸ್‌ಪಿಸಿಬಿ ಹಾಗೂ ಅರಣ್ಯ ಇಲಾಖೆ ವತಿಯಿಂದ ನಗರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕೆಎಸ್‌ಪಿಸಿಬಿಯು ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಸಮಾಜ ಮತ್ತು ಪರಿಸರಕ್ಕೆ ಅವರು ನೀಡುವ ಕೊಡುಗೆಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಉದ್ಯಾನಗಳಲ್ಲಿ ಅರಣ್ಯವನ್ನು ಅಭಿವೃದ್ಧಿಪಡಿಸಬಾರದು, ಉದ್ಯಾನಗಳು ಉದ್ಯಾನಗಳಂತಿರಲಿ, ಎಲ್ಲಿ ಮರಗಳಿಲ್ಲವೋ ಅಲ್ಲಿ ಅವುಗಳನ್ನು ಬೆಳೆಸಬೇಕು. ಪರಿಸರ ಅಭಿವೃದ್ಧಿಯಲ್ಲಿ ಪ್ರತೀಯೊಂದು ಮಗು ಪಾಲ್ಗೊಳ್ಳುವಂತೆ ಅಧಿಕಾರಿಗಳು ಮಾಡಬೇಕು. ಸಸಿ ನೆಡುವ ಮಗು ಅದನ್ನು ಪಾಲನೆ, ಪೋಷಣೆ ಮಾಡುವಂತೆ ಮಾಡಬೇಕು. ಬಳಿಕ ಈ ಪ್ರದೇಶಗಳ ಅಭಿವೃದ್ಧಿ ಕುರಿತ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು. ಪ್ರಗತಿ ಆಧರಿಸಿ ಅವರಿಗೆ ಪ್ರಶಸ್ತಿಯನ್ನು ವಿತರಿಸಬೇಕೆಂದು ಹೇಳಿದರು.

ಇಲಾಖೆಯು ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ಬೇಕಾದುದನ್ನು ಮಾಡುತ್ತಿದೆ. ಇದೀಗ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮ್ಮ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸರ್ಕಾರವು ನಿಮ್ಮೆಲ್ಲರಿಂದ ಉತ್ತರದಾಯಿತ್ವವನ್ನು ಬಯಸುತ್ತದೆ ಎಂದು ತಿಳಿಸಿದರು.

ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ರಾಚೇನಹಳ್ಳಿ ಕೆರೆಗೆ ನನ್ನನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಉದ್ಯಾನವನದಲ್ಲಿ ಸಸಿ ನೆಡುವಂತೆ ಮನವಿ ಮಾಡಿಕೊಂಡರು. ಈ ಪ್ರದೇಶ ಅದಾಗಲೇ ಹಸಿರಿನಿಂದ ಕೂಡಿದೆ. ನನ್ನ ಹೆಸರಿನಲ್ಲಿರುವ ಮತ್ತೊಂದು ಗಿಡವನ್ನು ನೆಡುವಂತೆ ಮನವಿ ಮಾಡಿದರು. ಎಲ್ಲಿ ಗಿಡ ನೆಡಬೇಕೆಂಬ ಸಾಮಾನ್ಯ ಜ್ಞಾನ ಅಧಿಕಾರಿಗಳಿಗೆ ಇರಲಿಲ್ಲ. ಹೀಗಾಗಿ ಗಿಡವನ್ನು ನಾನು ನೆಡಲಿಲ್ಲ ಎಂದರು.

ಕೆಎಸ್‌ಪಿಸಿಬಿ ಅಧ್ಯಕ್ಷ ಶಾಂತ್ ಎ ತಿಮ್ಮಯ್ಯ ಅವರತ್ತ ಬೆಟ್ಟು ಮಾಡಿದ ಶಿವಕುಮಾರ್ ಅವರು, ಸರ್ಕಾರ- ನಾನು ಸರ್ಕಾರವೂ ಶಾಶ್ವತವಲ್ಲ. ಎಲ್ಲಿಯವರೆಗೆ ನಾನು ಅಧಿಕಾರದಲ್ಲಿರುತ್ತೇನೋ ಅಲ್ಲಿಯವರೆಗೂ ಕೆಲಸ ಮಾಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮಗಳಿರುತ್ತವೆ ಎಂದು ಎಚ್ಚರಿಸಿದರು.

ಬಳಿಕ ಮಾತನಾಡಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು, ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಅನುಸರಿಸದ ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು. ಇ-ತ್ಯಾಜ್ಯವನ್ನು ನಿರ್ವಹಿಸದ ಐಟಿ-ಬಿಟಿ ಸಂಸ್ಥೆಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ವಿದ್ಯುತ್-ನೀರು ವಿವೇಚನೆಯಿಂದ ಬಳಸಿ: ಸಿಎಂ ಸಿದ್ದರಾಮಯ್ಯ
ಈ ವೇಳೆ ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾಗರಿಕರು ವಿದ್ಯುತ್ ಮತ್ತು ನೀರನ್ನು ವಿವೇಚನೆಯಿಂದ ಬಳಸಬೇಕು ಎಂದು ಹೇಳಿದರು.

ಸರಕಾರ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಿಸಿದೆ ಎಂದು ಗ್ರಾಹಕರು ಅತಿಯಾದ ವಿದ್ಯುತ್‌ ಬಳಕೆ ಮಾಡಬಾರದು. ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com