ತಿಂಗಳ 10ನೇ ತಾರೀಖಿನೊಳಗೆ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ನೀಡಿ: ಅಧಿಕಾರಿಗಳಿಗೆ ಸರ್ಕಾರ ಸೂಚನೆ
ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಮಾಸಿಕ ಗೌರವಧನವನ್ನು ತಿಂಗಳ 10 ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಶುಕ್ರವಾರ ಸೂಚನೆ ನೀಡಿದೆ.
Published: 10th June 2023 09:32 AM | Last Updated: 10th June 2023 12:29 PM | A+A A-

ದಿನೇಶ್ ಗುಂಡೂರಾವ್.
ಬೆಂಗಳೂರು: ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಮಾಸಿಕ ಗೌರವಧನವನ್ನು ತಿಂಗಳ 10 ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಶುಕ್ರವಾರ ಸೂಚನೆ ನೀಡಿದೆ.
ಗೌರವಧನ ಪಾವತಿ ವಿಳಂಬದ ವಿರುದ್ಧ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಆದೇಶವನ್ನು ನೀಡಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಶುಕ್ರವಾರ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಾಯಿ ಮತ್ತು ಮಗುವಿನ ಪೋಷಣೆಯನ್ನು ಖಾತ್ರಿಪಡಿಸುವುದು, ಅಪೌಷ್ಟಿಕತೆಯನ್ನು ತ್ವರಿತವಾಗಿ ಗುರುತಿಸುವುದು ಮತ್ತು ಚಿಕಿತ್ಸೆ ನೀಡುವುದು, ಪ್ರತಿರಕ್ಷಣೆ ಮತ್ತು ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವುದು ಮತ್ತು ರಕ್ತಹೀನತೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮವನ್ನು ಬಲಪಡಿಸುವುದು ಅಗತ್ಯವಿದೆ ಎಂದು ಹೇಳಿದರು. ಇದೇ ವೇಳೆ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಮಾಸಿಕ ಗೌರವಧನವನ್ನು ತಿಂಗಳ 10 ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆಯೂ ಸೂಚನೆ ನೀಡಿದರು.
ಇದನ್ನೂ ಓದಿ: ಚಾಮರಾಜನಗರದ ಆಕ್ಸಿಜನ್ ದುರಂತ: ಮರು ತನಿಖೆಗೆ ಆದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಆರೋಗ್ಯ ಸಚಿವ ಮನವಿ
ಸಭೆಯಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಕಚೇರಿಗಳ ಡಿಜಿಟಲೀಕರಣದ ಬಗ್ಗೆಯೂ ಪ್ರಸ್ತಾಪವಾಯಿತು.
ಸದ್ಯ ಕೇಂದ್ರ ಕಚೇರಿ ಆರೋಗ್ಯ ಸೌಧ ಮಾತ್ರ ಡಿಜಿಟಲೀಕರಣಗೊಂಡಿದೆ. "ಜಿಲ್ಲಾ ಕಚೇರಿಗಳಲ್ಲಿನ ಇ-ಕಚೇರಿ ವ್ಯವಸ್ಥೆಗಳು ಫೈಲ್ ಟ್ರ್ಯಾಕಿಂಗ್ ಅನ್ನು ಸುಲಭಗೊಳಿಸುವುದು ಅಗತ್ಯವಿದೆ. ಕೆಲವೊಮ್ಮೆ ಪ್ರಸ್ತಾವನೆಗಳು ಸಮಯಕ್ಕೆ ತಲುಪುವುದಿಲ್ಲ ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ಡಿಜಿಟಲೀಕರಣದಿಂದ ಈ ವಿಳಂಬವನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆಂದು ಎಂದು ರಾಜ್ಯ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆಯಡಿ ಖಾಸಗಿ ಆರೋಗ್ಯ ಸೌಲಭ್ಯಗಳ ನೋಂದಣಿಯನ್ನು ತ್ವರಿತಗೊಳಿಸುವುದು ಮತ್ತು ರೋಗಿಗಳ ದೂರುಗಳನ್ನು ತ್ವರಿತವಾಗಿ ಪರಿಹರಿಸುವ ಬಗ್ಗೆಯೂ ಸಚಿವರು ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.
ಆಸ್ಪತ್ರೆಗಳು ರೋಗಿಗಳನ್ನು ದೂರವಿಡಬಾರದು, ಭ್ರಷ್ಟಾಚಾರ ಮತ್ತು ವೈದ್ಯಕೀಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಇದಲ್ಲದೆ, ಸಭೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಕಾರ್ಯನಿರ್ವಹಿಸದ 104 ಸಹಾಯವಾಣಿಗೆ ಜೂನ್ 15 ರೊಳಗೆ ಮರು ಟೆಂಡರ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
"ಹಿಂದಿನ ಸರಕಾರ ಮರು ಟೆಂಡರ್‌ಗೆ ಅನುಮತಿ ನೀಡಿತ್ತು, ಆದರೆ, ಚುನಾವಣಾ ನೀತಿ ಸಂಹಿತೆಯಿಂದಾಗಿ ಅದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಸಚಿವರು ಅನುಮೋದನೆ ನೀಡಿದ್ದಾರೆ ಮತ್ತು ನಾವು ಟೆಂಡರ್ ದಾಖಲೆಯನ್ನು ದೃಢೀಕರಿಸುತ್ತಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.