ಮುಂಗಾರು ಮಳೆ: ಬೆಂಗಳೂರಿನ ಹಲವು ರಸ್ತೆ, ಅಂಡರ್ ಪಾಸ್ ಮುಳುಗಡೆ, ತಗ್ಗು ಪ್ರದೇಶಗಳು ಜಲಾವೃತ

ಬಿಪೊರ್ ಜೋಯ್ ಚಂಡಮಾರುತ ಕರಾವಳಿ ಭಾಗವನ್ನು ಅಪ್ಪಳಿಸಲಿದೆ ಎಂಬ ಆತಂಕದ ನಡುವೆ ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಿಪೊರ್ ಜೋಯ್ ಚಂಡಮಾರುತ ಕರಾವಳಿ ಭಾಗವನ್ನು ಅಪ್ಪಳಿಸಲಿದೆ ಎಂಬ ಆತಂಕದ ನಡುವೆ ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. 

ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಉಡುಪಿ, ಹಾಸನ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವು ಭಾಗದಲ್ಲಿ ಮಳೆಯಾಗುತ್ತಿದೆ. ರಾಜ್ಯದ ಕೆಲವೆಡೆ ಗುಡುಗು, ಮಿಂಚು ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲೂ ಮಳೆ, ಹಲವು ಕಡೆ ಪ್ರವಾಹ, ಜಲಾವೃತ: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರವಾಹ ಪೀಡಿತ ಮಹದೇವಪುರ ವಲಯವನ್ನು ಪರಿಶೀಲಿಸಿದ ಕೆಲವೇ ದಿನಗಳಲ್ಲಿ ನೈಋತ್ಯ ಮಾನ್ಸೂನ್‌ನ ಮೊದಲ ಮಳೆಯು ವರ್ತೂರಿನ ಹಲವಾರು ಬಡಾವಣೆಗಳನ್ನು ಮುಳುಗಿಸಿದೆ. ಎಚ್ ಎಎಲ್ ಲೇಔಟ್ ನಲ್ಲಿ 8 ಸೆಂಟಿ ಮೀಟರ್ ಮಳೆಯಾಗಿದ್ದು, ಉಳಿದಂತೆ ನಗರದಲ್ಲಿ 2 ಮಿಲಿ ಮೀಟರ್ ಮಳೆ ಸುರಿದಿದೆ.

ವರ್ತೂರು ರಮೇಶ್ ಅವರ ಮನೆಗೆ ಕಳೆದ ವರ್ಷದಂತೆ ಈ ವರ್ಷವೂ ಆರಂಭದಲ್ಲಿಯೇ ನೀರು ನುಗ್ಗಿದ್ದು, ಮಳೆನೀರು ಚರಂಡಿಯ ಅತಿಕ್ರಮಣ ಮತ್ತು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರಾಸಕ್ತಿ ಈ ಅವ್ಯವಸ್ಥೆಗೆ ಕಾರಣವಾಗಿದೆ. ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಚರಂಡಿ ಸರಿಪಡಿಸುವುದಾಗಿ ಭರವಸೆ ನೀಡಿದ್ದರು, ಅದು ಈಡೇರಿಲ್ಲ. ಕಳೆದ ಬಾರಿ ಪ್ರವಾಹದಲ್ಲಿ ಅನೇಕ ನಿವಾಸಿಗಳು ತಮ್ಮ ಬಟ್ಟೆ ಮತ್ತು ಪೀಠೋಪಕರಣಗಳನ್ನು ಕಳೆದುಕೊಂಡಿದ್ದರು. ಈ ಬಾರಿ ಮೊದಲ ಮಳೆಯಲ್ಲೇ ನೀರು ನುಗ್ಗಿದೆ ಎಂದು ವರ್ತೂರು ರಮೇಶ್ ಹೇಳುತ್ತಾರೆ. 

ಮಳೆ ನೀರು ಇಳಿಮುಖವಾಗಲು ಮತ್ತು ಸ್ವಚ್ಛತಾ ಕಾರ್ಯ ಆರಂಭಿಸಲು ಒಂದು ಗಂಟೆ ಬೇಕಾಯಿತು ಎಂದು ತಿಳಿಸಿದರು. ಹೋರಾಟಗಾರ ಜಗದೀಶ್ ರೆಡ್ಡಿ, 60 ಅಡಿ ಚರಂಡಿಗಳು ಹಲವೆಡೆ 15 ಅಡಿಗಳಿಗೆ ಇಳಿದಿದ್ದು, ಪ್ರವಾಹ ಉಂಟಾಗಿದೆ. ಮಹದೇವಪುರದ ಹಲವೆಡೆ ಒತ್ತುವರಿಯಾಗಿದ್ದರಿಂದ ಈ ಬಾರಿಯೂ ಪ್ರವಾಹ ಎದುರಾಗಿದೆ. ಪ್ರಕಾಶ್ ಲೇಔಟ್, ಮೀನಾಕ್ಷಿ ಲೇಔಟ್, ಚಿನ್ನಪ್ಪ ಲೇಔಟ್ ಮುಳುಗಡೆಯಾಗಿದೆ. ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಸುಮಾರು 3,000 ನಿವಾಸಿಗಳು ತೊಂದರೆಗೀಡಾಗಿದ್ದಾರೆ ಎಂದು ಅವರು ಹೇಳಿದರು. 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNMDC) ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಮಹದೇವಪುರ ವಲಯದ ರಾಮಮೂರ್ತಿ ನಗರದಲ್ಲಿ 10 ಮಿ.ಮೀ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ ನಿನ್ನೆ ಸೋಮವಾರ ಸಂಜೆ 6.30 ರಿಂದ 8.30 ರವರೆಗೆ 2 ಸೆಂ.ಮೀ ಮಳೆಯಾಗಿದೆ, ಎಚ್‌ಎಎಲ್ ನಲ್ಲಿ ಮಾತ್ರ 8 ಸೆಂ.ಮೀ ಮಳೆಯನ್ನು ದಾಖಲಿಸಿದೆ. ಭಾರೀ ಮಳೆಯಿಂದಾಗಿ ವೈಟ್‌ಫೀಲ್ಡ್, ಬೆಳ್ಳಂದೂರು, ಎಚ್‌ಎಎಲ್ ಮತ್ತು ಮಾರತ್ತಹಳ್ಳಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಸಂಜೆ ಕೆಲವೇ ಕೆಲವು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಹಲವಾರು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಜಲಾವೃತಗೊಂಡವು, ಇದು ತೀವ್ರ ಸಂಚಾರ ದಟ್ಟಣೆಗೆ ಕಾರಣವಾಯಿತು. ನಗರದಲ್ಲಿ ಉಂಟಾದ ಮಳೆಯ ಪರಿಣಾಮಗಳ ಹಲವಾರು ವಿಡಿಯೋಗಳನ್ನು ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಗರದ ವಿಲ್ಸನ್ ಗಾರ್ಡಾನ್, ಶಾಂತಿ ನಗರ, ಕೋರಮಂಗಲ, ಲಾಲ್ ಬಾಗ್, ಮಾರತಹಳ್ಳಿ ಸುತ್ತಮುತ್ತ, ಆಡುಗೋಡಿ ಸುತ್ತ- ಮುತ್ತ ಗುಡುಗು ಸಹಿತ ವರುಣ ಆರ್ಭಟಿಸಿದ್ದ. ಆಡುಗೋಡಿಯಲ್ಲಿ‌ ರಸ್ತೆ ಮೇಲೆ ಹೊಳೆಯಂತೆ ನೀರು ಹರಿಯುತ್ತಿತ್ತು. ರಸ್ತೆ ಜಲಾವೃತವಾಗಿ ವಾಹನ‌ ಸವಾರರು ಪರದಾಡುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com