ಕಳಪೆ ಗುಣಮಟ್ಟದ ಕಾಮಗಾರಿಯನ್ನು ಸಹಿಸುವುದಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಮಳೆ ನೀರು ಹೋಗಲು ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
Published: 16th June 2023 08:42 AM | Last Updated: 16th June 2023 07:20 PM | A+A A-

ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಮಳೆ ನೀರು ಹೋಗಲು ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
ಗೋಕಾಕ್ ನಗರದ ತಾಪಂ ಸಭಾಂಗಣದಲ್ಲಿ ನಡೆದ ಗೋಕಾಕ್ ಮತ್ತು ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರರ ಮೇಲಿದ್ದು, ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ, ಜನರಿಗೆ ಅನುಕೂಲವಾಗುವಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೊಂಡು ಅವಧಿ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರು ಕಾಮಗಾರಿ ಮಾಡುವವರ ಬಿಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕನಿಷ್ಠ 10 ವರ್ಷ ಬಾಳಿಕೆ ಬರಬೇಕು. ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿ ನೀಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಆಂತರಿಕ ವಿಚಾರಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ: ಬಿಜೆಪಿಗೆ ಸತೀಶ್ ಜಾರಕಿಹೊಳಿ
ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಲೋಳಸೂರು ಸೇತುವೆ, ವಸತಿ ನಿಲಯ, ನ್ಯಾಯಾಲಯ ಕಟ್ಟಡಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜತೆಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಆದ್ಯತೆ ನೀಡಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ವಾಣಿಜ್ಯ ಶೆಡ್‌ಗಳನ್ನು ನಿರ್ಮಿಸಲು ಸರ್ಕಾರ ಸಾಕಷ್ಟು ಹಣ ಹೂಡಿದ್ದು, ಜನರ ಅನುಕೂಲಕ್ಕಾಗಿ ಆದಷ್ಟು ಬೇಗ ಆ ಶೆಡ್ ಗಳನ್ನು ವ್ಯಾಪಾರಸ್ಥರಿಗೆ ಬಾಡಿಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಗೋಕಾಕ ತಹಶೀಲ್ದಾರ್ ಕೆ.ಮಂಜುನಾಥ್, ಮೂಡಲಗಿ ತಹಶೀಲ್ದಾರ್ ಪ್ರಶಾಂತ ಚನ್ನಗೊಂಡ, ಮುರಳೀಧರ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.