ಕೆಎಸ್‌ಆರ್‌ಟಿಸಿ ಬಸ್ ಸೇವೆ ವಂಚಿತ ಈ ಬುಡಕಟ್ಟು ಹಳ್ಳಿಗಳಿಗೆ 'ಶಕ್ತಿ ಯೋಜನೆ'ಯ ಪ್ರಯೋಜನವೇ ಸಿಗುತ್ತಿಲ್ಲ!

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯು ರಾಜ್ಯಾದ್ಯಂತ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಳಗಿನ ಗ್ರಾಮಗಳಲ್ಲಿ ಕೆಎಸ್ಆರ್‌ಟಿಸಿ ಬಸ್‌ ಸೇವೆಗಳನ್ನು ಹೊಂದಿಲ್ಲದ ಕಾರಣ ಹಲವಾರು ಬುಡಕಟ್ಟು ಪ್ರದೇಶಗಳ ನಿವಾಸಿಗಳು ಈ ಪ್ರಯೋಜನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯು ರಾಜ್ಯಾದ್ಯಂತ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಒಳಗಿನ ಗ್ರಾಮಗಳಲ್ಲಿ ಕೆಎಸ್ಆರ್‌ಟಿಸಿ ಬಸ್‌ ಸೇವೆಗಳನ್ನು ಹೊಂದಿಲ್ಲದ ಕಾರಣ ಹಲವಾರು ಬುಡಕಟ್ಟು ಪ್ರದೇಶಗಳ ನಿವಾಸಿಗಳು ಈ ಪ್ರಯೋಜನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಿಳಿಗಿರಿರಂಗ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‌ಟಿ) ಬೆಡಗುಳಿ, ಅಟ್ಟೆಕಾಣೆ, ಬೆಟ್ಟ ಗುಡ್ಡಕ್ಕೆ ಸೇರಿದ ಆದಿವಾಸಿಗಳು ಚಾಮರಾಜನಗರಕ್ಕೆ ಬರಲು ಒಂಟಿ ಖಾಸಗಿ ಬಸ್‌ ಅವಲಂಬಿಸಬೇಕಾಗಿದೆ. ರಸ್ತೆ ಡಾಂಬರೀಕರಣ ಮಾಡುವಂತೆ ಎರಡು ವರ್ಷಗಳಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರೂ ಕಿರಿದಾದ ರಸ್ತೆಗಳು ಮತ್ತು ಕಡಿದಾದ ತಿರುವುಗಳಿಂದಾಗಿ ಇಲ್ಲಿಗೆ ಸೇವೆಗಳನ್ನು ನೀಡಲು ಕೆಎಸ್ಆರ್‌ಟಿಸಿ ನಿರಾಕರಿಸಿದೆ. ಇನ್ನು 6-7 ಕಿ.ಮೀ ರಸ್ತೆಯನ್ನು ಅಧಿಕಾರಿಗಳು ದುರಸ್ತಿಗೊಳಿಸಿದ್ದು, ಇನ್ನು ಕೆಲವೆಡೆ ಗಮನಹರಿಸದೆ ಹಾಗೆಯೇ ಬಿಡಲಾಗಿದೆ.

'ಒಂದು ಮಿನಿ ಬಸ್ ಚಾಮರಾಜನಗರದಿಂದ ಬೆಡಗುಳಿಗೆ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಒಂದೇ ಟ್ರಿಪ್‌ಗಳನ್ನು ನಿರ್ವಹಿಸುತ್ತದೆ. ಯುವಕರು ಪಟ್ಟಣ ಅಥವಾ ತಮ್ಮ ಕೆಲಸದ ಸ್ಥಳವನ್ನು ತಲುಪಲು ತಮ್ಮ ಸ್ವಂತ ಬೈಕುಗಳನ್ನು ಬಳಸುತ್ತಾರೆ. ನೂರಾರು ಮಂದಿ ದಟ್ಟ ಅರಣ್ಯ ಪ್ರದೇಶದಲ್ಲಿ 2-3 ಕಿ.ಮೀ ನಡೆದುಕೊಂಡು ಮುಖ್ಯರಸ್ತೆಗೆ ಬಂದು ಬಸ್ ಹಿಡಿಯುತ್ತಾರೆ. ತಪಾಸಣೆಗೆಂದು ತೆರಳುವ ಗರ್ಭಿಣಿಯರು ಕೂಡ ತುಂಬಿ ತುಳುಕುತ್ತಿರುವ ಈ ಬಸ್‌ಗಳನ್ನೇ ಅವಲಂಬಿಸಬೇಕಾಗಿದ್ದು, ಪರದಾಡುವಂತಾಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಮಲ್ಲೇಶ್‌.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಿವಾಸ್ ಮಾತನಾಡಿ, ಬಿಆರ್‌ಟಿ ಪ್ರದೇಶದಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ ನಿಗಮವು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ದುರಸ್ತಿಯಾದರೆ ಅತ್ತೆಕಾಣೆ, ಬೆಡಗುಳಿ ಮತ್ತಿತರ ಕುಗ್ರಾಮಗಳಿಗೆ ಮಿನಿ ಬಸ್‌ ಓಡಿಸಲಾಗುವುದು ಎಂದರು. 

ಶೇ 90 ರಷ್ಟು ಬುಡಕಟ್ಟು ಹಾಡಿಗಳು ಕೆಎಸ್‌ಆರ್‌ಟಿಸಿ ಬಸ್ಸುಗಳು ಸಂಚರಿಸದ ಆಂತರಿಕ ಸ್ಥಳಗಳಲ್ಲಿ ವಾಸಿಸುವುದರಿಂದ ಮೈಸೂರು ಜಿಲ್ಲೆಯ ನೂರಾರು ಆದಿವಾಸಿ ಮಹಿಳೆಯರು ಸಹ ಅದೇ ತೊಂದರೆ ಅನುಭವಿಸುತ್ತಿದ್ದಾರೆ. ಶಟ್ಟಹಳ್ಳಿ ಹಾಡಿಯನ್ನು ಹೊರತುಪಡಿಸಿ ಉಳಿದೆಲ್ಲ ಹಾಡಿಗಳು ಅರಣ್ಯದ ಅಂಚಿನಲ್ಲಿವೆ.

ನಾಗರಹೊಳೆ ಅರಣ್ಯ ಮಾರ್ಗವಾಗಿ ಸಂಚರಿಸುವ ಬಸ್‌ಗಳಿಗೆ ಮೈಲುಗಟ್ಟಲೆ ನಡೆದುಕೊಂಡು ಹೋಗುವ ಬದಲು ಹಣ ಕೊಟ್ಟು ಜೀಪ್‌ನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಎಚ್‌ಡಿ ಕೋಟೆಯಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ, ಅರಣ್ಯದೊಳಗಿನ 120 ಹಾಡಿಗಳು ಸರಿಯಾದ ಸಂಪರ್ಕವನ್ನು ಹೊಂದಿಲ್ಲ. ಅನೇಕ ಆದಿವಾಸಿಗಳು ಕೆಲಸಕ್ಕಾಗಿ ಎಸ್ಟೇಟ್‌ಗಳನ್ನು ತಲುಪಲು ತಮ್ಮ ವಾಹನಗಳನ್ನು ಬಳಸುತ್ತಾರೆ  ಎನ್ನುತ್ತಾರೆ ಆದಿವಾಸಿ ರಾಮು. 

875 ಕುಟುಂಬಗಳು ತಮ್ಮ ಪಡಿತರ ಚೀಟಿಗಳನ್ನು ನವೀಕರಿಸದ ಕಾರಣ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ಎಂದು ಆದಿವಾಸಿಗಳು ಬಹಿರಂಗಪಡಿಸಿದರು. 

ಬುಡಕಟ್ಟು ಜನಾಂಗದ ಸೋಮ ಮಾತನಾಡಿ, ಜಿಲ್ಲಾಡಳಿತವು ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಎಲ್ಲಾ ಪಡಿತರ ಚೀಟಿಗಳನ್ನು ನವೀಕರಿಸಲು ಚಾಲನೆ ನೀಡಬೇಕು. ಇದರಿಂದ ಬಡವರು ಸರ್ಕಾರ ಘೋಷಿಸಿದ ಸಾಮಾಜಿಕ ಯೋಜನೆಗಳನ್ನು ಬಳಸಿಕೊಳ್ಳಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com