ಬಡವರಿಗೆ ಹಂಚುವ ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುವುದು ಬೇಡ: ಅಮಿತ್ ಶಾಗೆ ಸಿಎಂ ಸಿದ್ದರಾಮಯ್ಯ ಮನವಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ ಅಕ್ಕಿ ಖರೀದಿ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದೆ.
ನಿನ್ನೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ
ನಿನ್ನೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರದಿಂದ ಅಕ್ಕಿ ಖರೀದಿ ವಿಚಾರವಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದೆ.

ಈ ಮಧ್ಯೆ ನಿನ್ನೆ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಸಿದ್ದರಾಮಯ್ಯ(CM Siddaramaiah) ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಗ್ಗೆ ಇಂದು ಬೆಳಗ್ಗೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ರಾಜ್ಯಕ್ಕೆ ಅಕ್ಕಿ ಪೂರೈಸುವ ವಿಚಾರದಲ್ಲಿ ಅಮಿತ್ ಶಾ ಜತೆ ಚರ್ಚಿಸಿದ್ದೇನೆ. ಮೊದಲು ಭಾರತೀಯ ಆಹಾರ ನಿಗಮ-FCI ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುವುದಾಗಿ ಹೇಳಿತ್ತು. ಆ ನಂತರ ರಾಜ್ಯಕ್ಕೆ ಅಕ್ಕಿ ಪೂರೈಸಲು ಆಗಲ್ಲ ಎಂದು ಹೇಳಿದ್ದಾರೆ. ಬಡವರಿಗೆ ಅಕ್ಕಿ ನೀಡುವ ವಿಚಾರದಲ್ಲಿ ದ್ವೇಷ ರಾಜಕೀಯ ಮಾಡುವುದು ಬೇಡ ಎಂದು ಹೇಳಿದ್ದೇನೆ. ಅಮಿತ್ ಶಾ ಕೂಡ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 

ಮುಖ್ಯಮಂತ್ರಿಗಳು ನಿನ್ನೆ ರಾತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒದಗಿಸುವ 'ಅನ್ನ ಭಾಗ್ಯ' ಯೋಜನೆಗಾಗಿ(Anna Bhagya scheme) ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಕುರಿತು ಚರ್ಚೆ ನಡೆಸಿದರು. 'ನಾನು ನಿನ್ನೆ ರಾತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ಎಫ್‌ಸಿಐ ಅಕ್ಕಿ ಪೂರೈಕೆಗೆ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಪತ್ರವನ್ನೂ ಬರೆದಿದ್ದು, ಮರುದಿನವೇ ದಿಢೀರ್‌ ಎಂದು ಅಕ್ಕಿ ನೀಡಲು ಆಗುವುದಿಲ್ಲ ಎಂದು ಹೇಳಿರುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ಮೇಲ್ನೋಟಕ್ಕೆ ಇಲ್ಲಿ ರಾಜಕೀಯ ನಡೆದಂತೆ ಕಾಣುತ್ತಿದೆ. ಇದರಲ್ಲಿ ದ್ವೇಷದ ರಾಜಕಾರಣ ಬೇಡ, ಬಡವರಿಗೆ ಅನ್ನ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅನ್ನಭಾಗ್ಯ ಯೋಜನೆ ಸಂಬಂಧ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಮಾತನಾಡಿ ವಾಪಸ್ ಬೆಂಗಳೂರಿಗೆ ಹೋಗುತ್ತೇನೆ ಎಂದರು. 

ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲಿ ಜುಲೈ 1 ರಿಂದ 'ಅನ್ನ ಭಾಗ್ಯ' ಯೋಜನೆಯನ್ನು ತರಬೇಕಾಗಿದೆ. ದೊಡ್ಡ ಪ್ರಮಾಣದ ಅಕ್ಕಿ ದಾಸ್ತಾನುಗಳನ್ನು ಹೊಂದಿರುವ ಎಫ್‌ಸಿಐ ಜೂನ್ 12 ರಂದು ಕೆಜಿಗೆ 34 ರೂಪಾಯಿಗಳಂತೆ 2,28,425.750 ಮೆಟ್ರಿಕ್ ಟನ್ ಅಕ್ಕಿ ನೀಡಲು ಒಪ್ಪಿಗೆ ನೀಡಿದ ನಂತರ, ರಾಜ್ಯ ಸರ್ಕಾರಗಳಿಗೆ OMSS(D) ಅಡಿಯಲ್ಲಿ ಗೋಧಿ ಮತ್ತು ಅಕ್ಕಿ ಮಾರಾಟವನ್ನು ಕೇಂದ್ರವು ಸ್ಥಗಿತಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಅಸಮರ್ಥತೆಯನ್ನು ಮರೆಮಾಚಲು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಹತಾಶೆಯಿಂದ ದೂಷಿಸುತ್ತಿದೆ ಎಂದಿದ್ದಾರೆ. 

ರಾಜ್ಯಕ್ಕೆ ಐಆರ್‌ಬಿಯ (Indian Reserve Batallion) ಇನ್ನೂ ಎರಡು ಬೆಟಾಲಿಯನ್‌ಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಸಹ ಇಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com